ಖಿನ್ನತೆಯಿಂದ ಬಳಲುತ್ತಿದ್ದ ನನ್ನ ಹಿಂದೆ ಬಂಡೆಯಂತೆ ನಿಂತು ಶೋ ಪುನರಾರಂಭಿಸಲು ಪ್ರೇರೇಪಿಸಿದ್ದು ನನ್ನ ಪತ್ನಿ ಗಿನ್ನಿ: ಕಪಿಲ್ ಶರ್ಮ
ಕಪಿಲ್ ಶರ್ಮ ಶೋ ಬಂದ್ ಆದ ಒಂದು ವರ್ಷದ ನಂತರ ಕಪಿಲ್, ‘ಫ್ಯಾಮಿಲಿ ಟೈಮ್ ವಿಥ್ ಕಪಿಲ್ ಶರ್ಮ’ ಶೋನೊಂದಿಗೆ ಕಿರುತೆರೆಗೆ ವಾಪಸ್ಸಾದರು. ಆದರೆ, ಈ ಕಾರ್ಯಕ್ರಮ ಯಶ ಕಾಣಲಿಲ್ಲ. ಹಾಗಾಗೇ, ಅವರು ಕಪಿಲ್ ಶರ್ಮ ಶೋನ ಹೊಸ ಸೀಸನ್ ಆರಂಭಿಸಿದರು
ನವದೆಹಲಿ: ವಿಖ್ಯಾತ ಸ್ಟ್ಯಾಂಡ್ ಅಪ್ ಕಮೇಡಿಯನ್ ಕಪಿಲ್ ಶರ್ಮ ಅವರ ‘ದಿ ಕಪಿಲ್ ಶರ್ಮ ಶೋ’ 2017 ರಲ್ಲಿ ಇದ್ದಕ್ಕಿದ್ದಂತೆ ನಿಂತು ಹೋಗಿತ್ತು. ಆದರೆ ಅದರ ಹಿಂದಿನ ಕಾರಣ ಕಪಿಲ್ ಅವರನ್ನು ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಆದರೆ ಖುದ್ದು ಕಪಿಲ್, ಫಿವರ್ ಎಫ್ ಎಮ್ ರೇಡಿಯೋನಲ್ಲಿ ತಮ್ಮ ಕರೀಯರ್ ಆ ಕರಾಳ ಭಾಗವನ್ನು ಜನರೆದುರು ತೆರೆದಿಟ್ಟಿದ್ದಾರೆ. ಆಗ ತಾನು ಖಿನ್ನತೆಗೊಳಗಾಗಿದ್ದೆ, ಪತ್ನಿ ಗಿನ್ನಿ ಚತ್ರಥ್ ತನ್ನ ಜೊತೆ ಬಂಡೆಯಂತೆ ನಿಲ್ಕದೆ ಹೋಗಿದ್ದರೆ ವೃತ್ತಿಪರ ಬದುಕು ಕೊನೆಗೊಂಡಿರುತಿತ್ತು ಅಂತ ಅವರು ಹೇಳಿದ್ದಾರೆ. ‘ನಿಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡುವುದು ಬಹಳ ಕಷ್ಟದ ಕೆಲಸವೇನಲ್ಲ. ಅದರೆ, ಆ ಸಾಧನೆ, ಹೆಸರು, ಖ್ಯಾತಿಯನ್ನು ಕಾಯ್ದುಕೊಳ್ಳವುದು ತುಂಬಾ ಕಷ್ಟ. ನನ್ನ ಕ್ಷೇತ್ರದಲ್ಲೂ ರಾಜಕಾರಣ ನಡೆಯುತ್ತದೆ, ಜನ ನಿಮ್ಮ ಕಾಲೆಳೆಯುತ್ತಾರೆ. ಅಂಥ ಒಂದು ಸಂದರ್ಭದಲ್ಲೇ ನಾನು ಜನರನ್ನು ಮೇಲೆ ನಂಬಿಕೆ ಇರಿಸುವುದನ್ನು ನಿಲ್ಲಿಸಿದೆ. ಅವರು ನನ್ನೆದುರು ಒಂದು ಹೇಳುತ್ತಿದ್ದರು ಆದರೆ ಬೆನ್ನ ಹಿಂದೆ ಮತ್ತೊಂದನ್ನು ಮಾಡುತ್ತಿದ್ದರು. ಯಾರೂ ಹೇಳದಿದ್ದರೂ ನನ್ನ ಶೋ ನಿಲ್ಲಿಸಿಬಿಟ್ಟೆ,’ ಎಂದು ಕಪಿಲ್ ಹೇಳಿದ್ದಾರೆ.
ಕಪಿಲ್ ಶರ್ಮ ಶೋ ಬಂದ್ ಆದ ಒಂದು ವರ್ಷದ ನಂತರ ಕಪಿಲ್, ‘ಫ್ಯಾಮಿಲಿ ಟೈಮ್ ವಿಥ್ ಕಪಿಲ್ ಶರ್ಮ’ ಶೋನೊಂದಿಗೆ ಕಿರುತೆರೆಗೆ ವಾಪಸ್ಸಾದರು. ಆದರೆ, ಈ ಕಾರ್ಯಕ್ರಮ ಯಶ ಕಾಣಲಿಲ್ಲ. ಹಾಗಾಗೇ, ಅವರು ಕಪಿಲ್ ಶರ್ಮ ಶೋನ ಹೊಸ ಸೀಸನ್ ಆರಂಭಿಸಿದರು. ಅಲ್ಲಿಂದೀಚೆಗೆ ಅದು ತಡೆರಹಿತವಾಗಿ, ಯಶಸ್ವೀಯಾಗಿ ಓಡುತ್ತಿದೆ.
ತಾನು ಕಮ್ ಬ್ಯಾಕ್ ಮಾಡಿದ ವಿಷಯವಾಗಿ ಮಾತಾಡಿದ ಕಪಿಲ್, ‘ಆ ಸಮಯದಲ್ಲಿ ನನ್ನ ಮಾನಸಿಕ ಮತ್ತು ದೈಹಿಕ ಸ್ಥಿತಿ ಸರಿಯಿರಲಿಲ್ಲ. ನನ್ನನ್ನು ಟೀಕಿಸುತ್ತಿರುವವರಿಗೆ ಉತ್ತರಿಸಲು ಉತ್ತಮ ಅಸ್ತ್ರವೆಂದರೆ ನನ್ನ ಶೋ ಎಂಬ ಭಾವನೆ ನನ್ನಲ್ಲಿ ಮೂಡಿತು. ಜನ ನನ್ನನ್ನು ಅಂಗೀಕರಿಸಿದ್ದು, ಅವರ ಪ್ರೀತಿ ಮತ್ತು ವಿಶ್ವಾಸ ನನಗೆ ಸಿಗುವಂತೆ ಮಾಡಿದ್ದೇ ನನ್ನ ಶೋ. ಹಾಗಾಗೇ ಪುನಃ ಶೋ ಆರಂಭಿಸಿದೆ,’ ಎಂದು ಕಪಿಲ್ ಹೇಳಿದ್ದಾರೆ.
‘ಟ್ವಿಟ್ಟರ್ ನಲ್ಲಿ ನೀವು ಎಷ್ಟು ದಿನ ಬೇರೆಯವರೊಂದಿಗೆ ಜಗಳ ಮಾಡುತ್ತಾ ಕೂರುವುದು ಸಾಧ್ಯ, ನಾನು ಯಾವುದರಲ್ಲಿ ಪ್ರತಿಭೆ ಹೊಂದಿರುವೆನೋ ಅದನ್ನೇ ಮುಂದುವರಿಸಬೇಕು ಅಂತ ಭಾವಿಸಿ ಶೋ ಆರಂಭಿಸಿದೆ,’ ಎಂದು ಅವರು ನಗುತ್ತಾ ಹೇಳಿದ್ದಾರೆ.
ತನ್ನ ಶೋ ಬಂದ್ ಆದ ನಂತರ ಮಾಧ್ಯಮದಲ್ಲಿ ತಾನು ಖಿನ್ನತೆಯಿಂದ ಬಳಲುತ್ತಿರುವ ಕುರಿತು ವರದಿಗಳು ಪ್ರಕಟಗೊಂಡವು ಆಗಲೇ ತನಗೆ ಆ ವಿಷಯ ಗೊತ್ತಾಗಿದ್ದು ಎಂದು ಹೇಳಿರುವ ಕಪಿಲ್, ತನ್ನ ಪತ್ನಿ ಗಿನ್ನಿ ಒಂದು ಶಕ್ತಿಯಂತೆ ತನ್ನನ್ನು ಬೆಂಬಲಿಸಿ, ಹುರಿದುಂಬಿಸಿ ಶೋ ಶುರುಮಾಡಲು ಕಾರಣವಾದಳು, ಅಂತ ಹೇಳಿದ್ದಾರೆ.
‘ನನ್ನ ಪಾಲಿಗೆ ಯಾವುದೂ ಬದಲಾಗಲಾರದು ಅಂತ ಅನ್ನಿಸತೊಡಗಿತ್ತು. ನನ್ನಲ್ಲಿ ನಕಾರಾತ್ಮಕ ಧೋರಣೆ ಮನೆ ಮಾಡಿಬಿಟ್ಟಿತ್ತು. ಸಕಾರಾತ್ಮಕವಾಗಿ ಯೋಚಿಸುವುದನ್ನು ತಡೆಯಲು ಅದ್ಯಾವ ಬಗೆಯ ಕೆಮಿಕಲ್ ಮೆದುಳಿನಲ್ಲಿ ತಯಾರಾಗುತ್ತದೆಯೋ ನಾ ಕಾಣೆ. ಆದರೆ ಆ ಸಕಾರಾತ್ಮಕತೆಯನ್ನು ನನ್ನ ಫ್ಯಾಮಿಲಿ ಅದರಲ್ಲೂ ವಿಶೇಷವಾಗಿ ನನ್ನ ಪತ್ನಿ ಗಿನ್ನಿ ನನ್ನಲ್ಲಿ ತುಂಬಿದಳು. ನನ್ನ ಬದುಕಿನಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದು ಗಿನ್ನಿಗೆ ಗೊತ್ತಿತ್ತು. ಬೇರೆ ಯಾರಿಗೂ ಅದರ ಸುಳಿವಿರಲಿಲ್ಲ. ನನ್ನ ತಾಯಿ ಗ್ರಾಮೀಣ ಭಾಗದವರಾಗಿರುವುದರಿಂದ ಅವರಿಗೆ ಖಿನ್ನತೆ, ಹತಾಷೆ ಮೊದಲಾದ ಪದಗಳ ಪರಿಚಯವಿರಲಿಲ್ಲ. ಅವರ ಮಾತು ಹಾಗಿರಲಿ, ನನಗೂ ಅದರ ಬಗ್ಗೆ ಗೊತ್ತಿರಲಿಲ್ಲ. ಕಪಿಲ್ ಶರ್ಮ ಅವರು ಖಿನ್ನತೆಯಿಂದ ಬಳಲುತ್ತಿದ್ದಾರೆ ಅಂತ ಬರೆದ ಪತ್ರಿಕೆಯವರಿಗೆ ಒಳ್ಳೆಯದಾಗಲಿ. ಅವರಿಂದಲೇ ನನಗೆ ಖಿನ್ನತೆ ಬಗ್ಗೆ ಗೊತ್ತಾಗಿದ್ದು. ಗಿನ್ನಿ ಬಲವಾದ ಬಂಡೆಯಂತೆ ನನ್ನ ಜೊತೆ ನಿಂತಿದ್ದಳು. ನನ್ನ ಬದುಕಿನ ಧೀಶಕ್ತಿಯೇ ಗಿನ್ನಿ. ಜನ ನನ್ನನ್ನು ಪ್ರೀತಿಸುತ್ತಾರೆ, ಹಾಗಾಗಿ ಕೆಲಸಕ್ಕೆ ವಾಪಸ್ಸಾಗಲೇ ಬೇಕು ಅಂತ ಆಕೆ ನನ್ನನ್ನು ಹುರಿದುಂಬಿಸಿದಳು. ನೀವು ಶೋ ಆರಂಭಿಸಿದರೆ ಮಾತ್ರ ಮೊದಲಿನಂತಾಗುತ್ತೀರಿ ಅಂತ ಗಿನ್ನಿ ನನಗೆ ಹೇಳಿದಳು,’ ಅಂತ ಕಪಿಲ್ ಹೇಳಿದ್ದಾರೆ.
ಆ ಸಮಯ ತನಗೆ ಅನೇಕ ಪಾಠಗಳನ್ನು ಕಲಿಸಿದೆ ಎಂದು ಹೇಳುವ ಕಪಿಲ್ ಇತ್ತೀಚಿಗೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸಮುಯ ಕಳೆಯಲು ಕಪಿಲ್ ಶರ್ಮ ಶೋನಿಂದ ಬ್ರೇಕ್ ತೆಗೆದುಕೊಂಡಿದ್ದರು. ಈ ಶೋ 500 ಎಪಿಸೋಡ್ ಗಳನ್ನು ಪೂರ್ತಿಗೊಳಿಸಿದೆ.
ಇದನ್ನೂ ಓದಿ: Kapil Sharma: ನ್ಯಾಯಾಲಯದ ಗೌರವಕ್ಕೆ ಅಪಮಾನದ ಆರೋಪ; ಕಪಿಲ್ ಶರ್ಮಾ ಶೋ ವಿರುದ್ಧ ಬಿತ್ತು FIR!