
ನಿತೇಶ್ ತಿವಾರಿ ನಿರ್ದೇಶನದ, ಯಶ್ ಮತ್ತು ರಣಬೀರ್ ಕಪೂರ್ ನಟನೆಯ ಬಹುನಿರೀಕ್ಷಿತ ‘ರಾಮಾಯಣ: ಭಾಗ 1’ ಸಿನಿಮಾದ ಬಜೆಟ್ ಮತ್ತು ಗಳಿಕೆಯ ಬಗ್ಗೆ ಈಗ ಚರ್ಚೆ ಶುರುವಾಗಿದೆ. ಸುಮಾರು 2000 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 1500 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ಈ ನಡುವೆ 450 ಕೋಟಿ ಗಳಿಸಿ ದಾಖಲೆ ಬರೆದ ‘ಹನುಮಾನ್ ಅಂಶ್’ ಸಿನಿಮಾದ ನಿರ್ದೇಶಕ ವಿಶಾಲ್ ಚತುರ್ವೇದಿ ಅವರು ಸಿನಿಮಾ ಬಜೆಟ್ ಬಗ್ಗೆ ನೀಡಿರುವ ಹೇಳಿಕೆ ಈಗ ಕುತೂಹಲ ಮೂಡಿಸಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ ವಿಶಾಲ್ ಚತುರ್ವೇದಿ, ತಾವು ಇನ್ನೂ ‘ರಾಮಾಯಣ’ ಸಿನಿಮಾ ನೋಡಿಲ್ಲ ಎಂದು ಹೇಳಿದ್ದಾರೆ. ‘ಕೆಲಸದ ಒತ್ತಡದಿಂದ ನನಗೆ ಇನ್ನೂ ಸಮಯ ಸಿಕ್ಕಿಲ್ಲ. ಆದರೆ ಆ ಸಿನಿಮಾವನ್ನು ನೋಡಲು ನಾನು ಬಹಳ ಉತ್ಸುಕನಾಗಿದ್ದೇನೆ’ ಎಂದಿದ್ದಾರೆ. ಇದೇ ವೇಳೆ ಸಿನಿಮಾವೊಂದರ ಗೆಲುವಿನಲ್ಲಿ ಬಜೆಟ್ ನಿಯಂತ್ರಣ ಎಷ್ಟು ಮುಖ್ಯ ಎಂಬುದನ್ನು ವಿವರಿಸುವ ಮೂಲಕ ದೊಡ್ಡ ಬಜೆಟ್ ಸಿನಿಮಾಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಹೂಡಿಕೆ ಮತ್ತು ಲಾಭದ ಲೆಕ್ಕಾಚಾರದ ಬಗ್ಗೆ ಮಾತನಾಡಿದ ವಿಶಾಲ್, ‘ನಮ್ಮ ಚಿತ್ರರಂಗದಲ್ಲಿ ಕಾಗದದ ಮೇಲೆ ಲೆಕ್ಕಾಚಾರ ಸರಿ ಇದ್ದರೆ ಮಾತ್ರ ಸಿನಿಮಾ ಮಾಡಬೇಕು. ನೀವು ಒಂದು ಸಿನಿಮಾಗೆ 200 ಕೋಟಿ ರೂಪಾಯಿ ಹೂಡಿಕೆ ಮಾಡಿ, ಅದು 400 ಕೋಟಿ ಗಳಿಸದಿದ್ದರೆ ಅದನ್ನು ಫ್ಲಾಪ್ ಎಂದೇ ಕರೆಯಲಾಗುತ್ತದೆ. ಹೂಡಿಕೆಗೆ ತಕ್ಕ ಪ್ರತಿಫಲ ಬಂದರೆ ಮಾತ್ರ ಸಿನಿಮಾ ಗೆದ್ದಂತೆ’ ಎಂದು ನೇರವಾಗಿ ಹೇಳಿದ್ದಾರೆ.
ದೊಡ್ಡ ಬಜೆಟ್ ಸಿನಿಮಾಗಳು ಯಾಕೆ ಸೋಲುತ್ತವೆ ಎಂಬುದಕ್ಕೂ ಅವರು ಕಾರಣ ನೀಡಿದ್ದಾರೆ. ’ನಿರ್ದೇಶಕರು ಸಿನಿಮಾ ಮಾಡುವಾಗ ಒಟ್ಟು ಬಜೆಟ್ ಬಗ್ಗೆ ಬಹಳ ಎಚ್ಚರಿಕೆಯಿಂದಿರಬೇಕು. ಕೆಲವೊಮ್ಮೆ ಭಾರಿ ಬಜೆಟ್‌ನಲ್ಲಿ ನಿರ್ಮಾಣವಾದ ಅದ್ಭುತ ಸಿನಿಮಾಗಳು ಕೂಡ ನಿರೀಕ್ಷಿತ ಗಳಿಕೆ ಕಾಣದೆ ಬಾಕ್ಸ್ ಆಫೀಸ್‌ನಲ್ಲಿ ಸೋಲುತ್ತವೆ. ಹೀಗಾಗಿ ಬಜೆಟ್ ಜೊತೆಗೆ ಚಿತ್ರಕಥೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ’ ಎಂದು ವಿಶಾಲ್ ಚತುರ್ವೇದಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ದ ಬಗ್ಗೆ ‘ಕೃಷ್ಣ’ನ ಅಸಮಾಧಾನ, ‘ರಾವಣ’ನ ಬಗ್ಗೆ ಕಟು ಟೀಕೆ
2000 ಕೋಟಿ ಬಜೆಟ್‌ನ ‘ರಾಮಾಯಣ’ ಸಿನಿಮಾ 1500 ಕೋಟಿ ಗಳಿಸಿರುವ ಸಂದರ್ಭದಲ್ಲೇ ವಿಶಾಲ್ ಈ ಮಾತುಗಳನ್ನಾಡಿದ್ದಾರೆ. ಹೂಡಿಕೆಗಿಂತ ಕಡಿಮೆ ಗಳಿಸಿದರೆ ಅದು ಫ್ಲಾಪ್ ಎಂಬ ಅವರ ಲೆಕ್ಕಾಚಾರವು ‘ರಾಮಾಯಣ’ ಚಿತ್ರವನ್ನೇ ಗುರಿಯಾಗಿಸಿ ಹೇಳಿದಂತಿದೆ ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಶುರುವಾಗಿದೆ. ಸಣ್ಣ ಬಜೆಟ್‌ನಲ್ಲಿ ಸಿನಿಮಾ ಮಾಡಿ 450 ಕೋಟಿ ಗಳಿಸಿರುವ ವಿಶಾಲ್ ಮಾತು ಈಗ ಬಾಲಿವುಡ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.