ಕೈಗಡಿಯಾರದಿಂದಾಗಿ ವಿಮಾನ ನಿಲ್ದಾಣದಲ್ಲಿ ಇಕ್ಕಟ್ಟಿಗೆ ಸಿಲುಕಿದ ಅರ್ನಾಲ್ಡ್ ಷ್ವಾರ್ಸ್ನೆಗರ್
Arnold Schwarzenegger: ಖ್ಯಾತ ಹಾಲಿವುಡ್ ನಟ ಅರ್ನಾಲ್ಡ್ ಷ್ವಾರ್ಸ್ನೆಗರ್ ಅನ್ನು ಜರ್ಮನಿಯ ವಿಮಾನ ನಿಲ್ದಾಣದಲ್ಲಿ ಮೂರು ತಾಸು ವಶಕ್ಕೆ ಪಡೆಯಲಾಗಿತ್ತು. ಇದಕ್ಕೆ ಕಾರಣ ಅವರು ಧರಿಸಿದ್ದ ಕೈಗಡಿಯಾರ!
ಹಾಲಿವುಡ್ (Hollywood) ನಟ ಅರ್ನಾಲ್ಡ್ ಷ್ವಾರ್ಸ್ನೆಗರ್ ಪರಿಚಯವಿರದ ಸಿನಿಮಾ ಪ್ರೇಮಿಗಳ ಸಂಖ್ಯೆ ಕಡಿಮೆ. ಬಾಡಿ ಬಿಲ್ಡಿಂಗ್ ವಿಶ್ವದಾದ್ಯಂತ ಜನಪ್ರಿಯಗೊಳ್ಳಲು ಅರ್ನಾಲ್ಡ್ ಷ್ವಾರ್ಸ್ನೆಗರ್ ಸಹ ಕಾರಣ. ನಟನಾಗಿಯೂ ಹಲವು ಐಕಾನಿಕ್ ಸಿನಿಮಾಗಳನ್ನು ನೀಡಿದ್ದಾರೆ. ಕ್ಯಾಲಿಫೋರ್ನಿಯಾದ ಗೌರ್ನರ್ ಸಹ ಆಗಿದ್ದರು ಅರ್ನಾಲ್ಡ್. ನಿವೃತ್ತಿ ಸಮಯವನ್ನು ಸಮಾಜ ಸೇವೆಯಲ್ಲಿ ಕಳೆಯುತ್ತಿದ್ದಾರೆ. ಆದರೆ ಇತ್ತೀಚೆಗೆ ಜರ್ಮನಿಗೆ ಭೇಟಿ ನೀಡಿದ್ದ ಅರ್ನಾಲ್ಡ್ ಷ್ವಾರ್ಸ್ನೆಗರ್ ಅನ್ನು ಅಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿ ಕೆಲ ಕಾಲ ವಶಕ್ಕೆ ಪಡೆದಿದ್ದರಂತೆ. ಅದಕ್ಕೆ ಕಾರಣವಾಗಿದ್ದು ಅವರ ಕೈಗಡಿಯಾರ!
ಅರ್ನಾಲ್ಡ್ ಷ್ವಾರ್ಸ್ನೆಗರ್ ಇತ್ತೀಚೆಗಷ್ಟೆ ಜಮರ್ನಿಗೆ ಕಾರ್ಯಕ್ರಮವೊಂದಕ್ಕಾಗಿ ತೆರಳಿದ್ದರು. ಅದೊಂದು ಸಮಾಜ ಸೇವೆಗಾಗಿ ಫಂಡ್ ಒಟ್ಟುಮಾಡುವ ಕಾರ್ಯಕ್ರಮವದು. ಸೆಲೆಬ್ರಿಟಿಗಳು ತಮ್ಮ ವಸ್ತುಗಳನ್ನು ಹರಾಜು ಮಾಡಿ ಅದರಿಂದ ಬಂದ ಹಣವನ್ನು ‘ಷ್ವಾರ್ಸ್ನೆಗರ್ ಕ್ಲೈಮೆಟ್ ಇನಿಷಿಯೇಟಿವ್’ ಸಂಸ್ಥೆಯ ಸಮಾಜ ಸೇವಾ ಕಾರ್ಯಕ್ಕೆ ವಿನಿಯೋಗಿಸುವುದು ಆ ಕಾರ್ಯಕ್ರಮದ ಉದ್ದೇಶವಾಗಿತ್ತು.
ಐಶಾರಾಮಿ ಕೈಗಡಿಯಾರವೊಂದನ್ನು ಧರಿಸಿ ಅರ್ನಾಲ್ಡ್ ಜರ್ಮನಿಗೆ ಆಗಮಿಸಿದರು. ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಇಳಿದಾಗ ಕಸ್ಟಮ್ಸ್ ಅಧಿಕಾರಿಗಳು ಅವರನ್ನು ತಡೆದು ನೀವು ನಿಮ್ಮ ಐಶಾರಾಮಿ ಕೈಗಡಿಯಾರದ ಬಗ್ಗೆ ಮಾಹಿತಿ ನೀಡಿಲ್ಲ ಎಂದು ತಕರಾರು ತೆಗೆದರು. ದೇಶದ ಒಳಕ್ಕೆ ತರುತ್ತಿರುವ ಐಶಾರಾಮಿ ವಸ್ತುಗಳ ಮಾಹಿತಿಯನ್ನು ಮೊದಲೇ ನೀಡಬೇಕಿತ್ತಂತೆ. ಆದರೆ ಅರ್ನಾಲ್ಡ್ ಹೇಳಿರುವ ಪ್ರಕಾರ, ಆ ರೀತಿಯ ಮಾಹಿತಿ ಒದಗಿಸುವಂತೆ ನನಗೆ ಯಾವುದೇ ಅಪ್ಲಿಕೇಶನ್ ಅನ್ನು ಅವರು ನೀಡಿರಲಿಲ್ಲ ಹಾಗಾಗಿ ತಾವು ಆ ಮಾಹಿತಿ ನೀಡಿರಲಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ಹಾಲಿವುಡ್ ನಿರ್ದೇಶಕರಿಗೂ ಶಾರುಖ್ ಖಾನ್ ಜೊತೆ ಕೆಲಸ ಮಾಡುವಾಸೆ, ಎಸ್ಆರ್ಕೆ ಲೆಜೆಂಡ್ ಎಂದ ನಿರ್ದೇಶಕಿ
ಅಸಲಿಗೆ ಅರ್ನಾಲ್ಡ್ ಧರಿಸಿದ್ದ ಆ ವಾಚು ಬಹಳ ಅಪರೂಪದ್ದು, ಹಾಗೂ ಅತ್ಯಂತ ಬೆಲೆಯುಳ್ಳದ್ದು. ಅರ್ನಾಲ್ಡ್ರ ಆ ವಾಚನ್ನು ವಿಶ್ವದ ಟಾಪ್ ಕೈಗಡಿಯಾರ ವಿನ್ಯಾಸಕ ಆಡೆಮಾಸ್ ಪಿಗೆಟ್ (Audemars Piguet) ವಿನ್ಯಾಸಗೊಳಿಸಿದ್ದು. ಆ ಗಡಿಯವಾರವನ್ನು ಕಾರ್ಯಕ್ರಮದಲ್ಲಿ ಹರಾಜು ಹಾಕುವ ಉದ್ದೇಶ ಅರ್ನಾಲ್ಡ್ಗೆ ಇತ್ತಂತೆ. ಆ ವಿಷಯವನ್ನೂ ಸಹ ಅವರು ಕಸ್ಟಮ್ಸ್ ಅಧಿಕಾರಿಗಳಿಗೆ ಹೇಳಿದ್ದಾರೆ.
ಆಗ ಕಸ್ಟಮ್ಸ್ ಅಧಿಕಾರಿಗಳು ಹಾಗಿದ್ದರೆ ಅದರ ತೆರಿಗೆಯನ್ನು ಈಗಲೇ ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದಕ್ಕೆ ಅರ್ನಾಲ್ಡ್ ಸಹ ಒಪ್ಪಿಗೆ ಸೂಚಿಸಿದ್ದಾರೆ. ಆದರೆ ತೆರಿಗೆ ಪಾವತಿಸಲು ಅರ್ನಾಲ್ಡ್ ನೀಡಿದ ಕಾರ್ಡ್ ಅಲ್ಲಿ ಕೆಲಸ ಮಾಡಿಲ್ಲ. ಬಳಿಕ ಅವರನ್ನು ಎಟಿಎಂಗೆ ಕರೆದೊಯ್ದಿದ್ದಾರೆ ಅಧಿಕಾರಿಗಳು. ತೆರಿಗೆ ಮೊತ್ತ ಹೆಚ್ಚಿದ್ದ ಕಾರಣ ಅಲ್ಲಿಯೂ ಸಹ ಹೆಚ್ಚು ಹಣ ಬಂದಿಲ್ಲ. ಬಳಿಕ ಅವರ ಇನ್ನೊಂದು ಅಂತರಾಷ್ಟ್ರೀಯ ಕಾರ್ಡ್ ಅನ್ನು ಅಕ್ಸೆಪ್ಟ್ ಮಾಡುವ ಸ್ವೈಪಿಂಗ್ ಮಷಿನ್ ಒಂದನ್ನು ಹುಡುಕಿ ಅದರ ಮೂಲಕ ಹಣ ಪಾವತಿಸಿಕೊಂಡು ಅರ್ನಾಲ್ಡ್ ಅನ್ನು ಬಿಟ್ಟು ಕಳಿಸಿದ್ದಾರೆ ಮ್ಯೂನಿಚ್ನ ಕಸ್ಟಮ್ಸ್ ಅಧಿಕಾರಿಗಳು.
ಅರ್ನಾಲ್ಡ್ ಧರಿಸಿದ್ದ ಆ ವಾಚು ಕಾರ್ಯಕ್ರಮದಲ್ಲಿ ಕೋಟಿಗಳಿಗೆ ಹರಾಜಾಯ್ತಂತೆ. ಅಂಥಹಾ ಸುಮಾರು 50ಕ್ಕೂ ಹೆಚ್ಚು ವಸ್ತುಗಳು ಆ ಕಾರ್ಯಕ್ರಮದಲ್ಲಿ ಹರಾಜಾಗಿದ್ದು ಕೋಟ್ಯಂತರ ಡಾಲರ್ ಹಣ ಅರ್ನಾಲ್ಡ್ರ ‘ಷ್ವಾರ್ಸ್ನೆಗರ್ ಕ್ಲೈಮೆಟ್ ಇನಿಷಿಯೇಟಿವ್’ ಸಂಸ್ಥೆಗೆ ದೇಣಿಗೆ ರೂಪದಲ್ಲಿ ದೊರೆತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ