Avatar 2 Collection: ‘ಅವತಾರ್ 2’ ಬಾಕ್ಸ್ ಆಫೀಸ್ ಕಲೆಕ್ಷನ್: 3 ದಿನಕ್ಕೆ ಭಾರತದಲ್ಲಿ 160 ಕೋಟಿ ರೂ. ಕಮಾಯಿ
Avatar 2 Box Office Collection: ಸೋಮವಾರ (ಡಿ.19) ಕೂಡ ‘ಅವತಾರ್ 2’ ಚಿತ್ರ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಹೌಸ್ಫುಲ್ ಶೋ ನಡೆಯುತ್ತಿವೆ.
ನಿರೀಕ್ಷೆಯಂತೆಯೇ ‘ಅವತಾರ್: ದಿ ವೇ ಆಫ್ ವಾಟರ್’ (Avatar: The way of Water) ಸಿನಿಮಾ ಅಬ್ಬರಿಸುತ್ತಿದೆ. ಎಲ್ಲ ವರ್ಗದ ಪ್ರೇಕ್ಷಕರಿಗೆ ಈ ಚಿತ್ರ ಇಷ್ಟ ಆಗಿದೆ. ದಿನದಿಂದ ದಿನಕ್ಕೆ ಈ ಸಿನಿಮಾದ ಕಲೆಕ್ಷನ್ ಹೆಚ್ಚಾಗುತ್ತಿದೆ. ಗಲ್ಲಾಪೆಟ್ಟಿಗೆಯಲ್ಲಿ ಮೋಡಿ ಮಾಡುತ್ತಿರುವ ‘ಅವತಾರ್ 2’ (Avatar 2) ಸಿನಿಮಾಗೆ ಭಾರತದಲ್ಲೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ಮೂರು ದಿನಕ್ಕೆ ಈ ಸಿನಿಮಾ ಭಾರತದಲ್ಲಿ ಬರೋಬ್ಬರಿ 160 ಕೋಟಿ ರೂಪಾಯಿ ಗಳಿಸಿ ಬೀಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ 3500 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ (James Cameron) ಅವರ ನಿರ್ದೇಶನಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಸಿನಿಮಾದ ಲೈಫ್ಟೈಮ್ ಕಲೆಕ್ಷನ್ ಎಷ್ಟಾಗಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.
2009ರಲ್ಲಿ ‘ಅವತಾರ್’ ಚಿತ್ರ ತೆರೆಕಂಡಿತ್ತು. ಅದರ ಮುಂದುವರಿದ ಭಾಗವಾಗಿ 13 ವರ್ಷಗಳ ಬಳಿಕ ‘ಅವತಾರ್: ದಿ ವೇ ಆಫ್ ವಾಟರ್’ ಚಿತ್ರ ಈಗ ತೆರೆಕಂಡಿದೆ. 52 ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಡಿ.16ರ ಶುಕ್ರವಾರ ಈ ಚಿತ್ರ ಬಿಡುಗಡೆ ಆಯಿತು. ಭಾನುವಾರ (ಡಿ.18) ಫಿಫಾ ವಿಶ್ವಕಪ್ ಇದ್ದಿದ್ದರಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದು ಅನುಮಾನ ಎಂದು ಊಹಿಸಲಾಗಿತ್ತು. ಆದರೆ ಭಾನುವಾರ ನಿರೀಕ್ಷೆಗೂ ಮೀರಿ ಜನರು ‘ಅವತಾರ್ 2’ ಸಿನಿಮಾ ವೀಕ್ಷಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ‘ಅವತಾರ್: ದಿ ವೇ ಆಫ್ ವಾಟರ್’ ಸಿನಿಮಾ ನಿರ್ಮಾಣ ಆಗಿದೆ. ವಿಶ್ವದ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿದೆ. ಭಾರತದಲ್ಲಿ ಇಂಗ್ಲಿಷ್ ಜೊತೆಗೆ ಕನ್ನಡ, ಹಿಂದಿ, ತಮಿಳು, ಮಲಯಾಳಂ ಹಾಗೂ ತೆಲುಗಿಗೂ ಡಬ್ ಆಗಿ ತೆರೆ ಕಂಡಿದೆ. 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿ ಕಟ್ಟಿಕೊಟ್ಟಿರುವ ದೃಶ್ಯಗಳು ಜನರ ಮೆಚ್ಚುಗೆ ಪಡೆದುಕೊಳ್ಳುತ್ತಿವೆ.
ಇದನ್ನೂ ಓದಿ: Avatar 2: 1650 ರೂ. ದಾಟಿದ ‘ಅವತಾರ್ 2’ ಟಿಕೆಟ್ ಬೆಲೆ; ಆದ್ರೂ ಮುಗಿಬಿದ್ದು ಬುಕ್ ಮಾಡುತ್ತಿರುವ ಪ್ರೇಕ್ಷಕರು
‘ಅವತಾರ್ 2’ ಚಿತ್ರ ಸೋಮವಾರ (ಡಿ.19) ಕೂಡ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಹಲವು ಮಲ್ಟಿಪ್ಲೆಕ್ಸ್ಗಳಲ್ಲಿ ಹೌಸ್ಫುಲ್ ಶೋ ನಡೆಯುತ್ತಿವೆ. ಟಿಕೆಟ್ ಬೆಲೆ ದುಬಾರಿ ಆಗಿದ್ದರೂ ಕೂಡ ಪ್ರೇಕ್ಷಕರು ತಲೆ ಕೆಡಿಸಿಕೊಂಡಿಲ್ಲ. ಅನೇಕ ಸೆಲೆಬ್ರಿಟಿಗಳು ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸೆಲೆಬ್ರಿಟಿಗಳು ತಮ್ಮ ಕುಟುಂಬದ ಸದಸ್ಯರ ಜೊತೆಗೂಡಿ ‘ಅವತಾರ್ 2’ ಜಗತ್ತನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:40 pm, Mon, 19 December 22