‘ಕೆಜಿಎಫ್ 2’ ಚಿತ್ರ (KGF Chapter 2) ಬಾಲಿವುಡ್ನಲ್ಲಿ 400+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಸಿನಿಮಾವನ್ನು ಹಿಂದಿಯಲ್ಲಿ ಫರ್ಹಾನ್ ಅಖ್ತರ್ ಒಡೆತನದ ಎಕ್ಸೆಲ್ ಎಂಟರ್ಟೇನ್ಮೆಂಟ್ (Excel Entertainment) ಮೂಲಕ ಬಿಡುಗಡೆ ಮಾಡಲಾಗಿತ್ತು. ಈಗ ಫರ್ಹಾನ್ ಅಖ್ತರ್ (Farhan Akhtar) ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದೆ. ಭಾರತದ ಯಾವ ಕಲಾವಿದರು ಮಾಡದ ಸಾಧನೆಯನ್ನು ಅವರು ಮಾಡಿ ತೋರಿಸಿದ್ದಾರೆ. ಹಾಲಿವುಡ್ನ ಮಾರ್ವೆಲ್ ಸ್ಟುಡಿಯೋದಲ್ಲಿ ಕೆಲಸ ಮಾಡುವ ಅವಕಾಶ ಅವರಿಗೆ ಸಿಕ್ಕಿದೆ.
ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ‘ಮಿಸ್ ಮಾರ್ವೆಲ್’ ಸೀರಿಸ್ ಸಿದ್ಧಗೊಳ್ಳುತ್ತಿದೆ. ಇದರಲ್ಲಿ ಫರ್ಹಾನ್ ಅಖ್ತರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಭಾರತದ ಹೀರೋ ಒಬ್ಬರು ಮಾರ್ವೆಲ್ ಸ್ಟುಡಿಯೋ ನಿರ್ಮಾಣದ ಪ್ರಾಜೆಕ್ಟ್ನಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು. ಫರ್ಹಾನ್ ಅವರು ನಿರ್ವಹಿಸುತ್ತಿರುವ ಪಾತ್ರ ಹೇಗಿದೆ ಎಂಬ ವಿಚಾರ ಇನ್ನಷ್ಟೇ ತಿಳಿಯಬೇಕಿದೆ.
‘ಮಿಸ್ ಮಾರ್ವೆಲ್’ ಇದು ಸೂಪರ್ಹೀರೋ ಸೀರಿಸ್. ಕಮಲಾ ಖಾನ್/ಮಿಸ್ ಮಾರ್ವೆಲ್ ಪಾತ್ರದ ಸುತ್ತ ಈ ಕಥೆ ಸಾಗುತ್ತದೆ. ಕಮಲಾ ಸೂಪರ್ಹೀರೋ ಶಕ್ತಿಯನ್ನು ಹೊಂದಿರುತ್ತಾಳೆ. ಇಮಾನ್ ವೆಲ್ಲಾನಿ ಅವರು ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಪಾಕಿಸ್ತಾನದ ಫವಾದ್ ಖಾನ್ ಕೂಡ ಈ ಸೀರಿಸ್ನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಫರ್ಹಾನ್ ಅಖ್ತರ್ ಪತ್ನಿ ಶಿಬಾನಿ ದಂಡೇಕರ್ ಅವರು ಈ ಸುದ್ದಿಯನ್ನು ಖಚಿತಪಡಿಸಿದ್ದಾರೆ. ‘ಇದಕ್ಕಾಗಿ ಕಾಯಲು ಸಾಧ್ಯವಿಲ್ಲ. ಮಾರ್ವೆಲ್ ಯೂನಿವರ್ಸ್‌ನ ಭಾಗವಾಗಿರುವ ಮೊದಲ ಭಾರತೀಯ ನಟ’ ಎಂದು ಬರೆದುಕೊಂಡಿದ್ದಾರೆ ಅವರು. ‘ಮಿಸ್ ಮಾರ್ವೆಲ್’ ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿಲ್ಲ. ಇದು ಸೀರಿಸ್ ಆದ ಕಾರಣ ಒಟಿಟಿಯಲ್ಲಿ ಬಿಡುಗಡೆ ಆಗುತ್ತಿದೆ. ಜೂನ್ 8ರಿಂದ ಈ ಶೋ ಪ್ರಸಾರಗೊಳ್ಳಲಿದೆ.
ಇತ್ತೀಚೆಗೆ ವಿವಾಹವಾಗಿರುವ ಫರ್ಹಾನ್:
ಬಾಲಿವುಡ್ ಪ್ರಯಣ ಪಕ್ಷಿಗಳಾದ ಫರ್ಹಾನ್ ಅಖ್ತರ್ ಹಾಗೂ ಶಿಬಾನಿ ದಂಡೇಕರ್ ಅವರು ಫೆ.19ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಹಾರಾಷ್ಟ್ರದ ಖಂಡಾಲದಲ್ಲಿ ಈ ಮದುವೆ ನಡೆಯಿತು. ಫರ್ಹಾನ್ ಅಖ್ತರ್ ಅವರಿಗೆ 48 ವರ್ಷ ವಯಸ್ಸು. 41ರ ಪ್ರಾಯದ ಶಿಬಾನಿ ದಂಡೇಕರ್ ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮೊದಲೇ ಫರ್ಹಾನ್ ಅಖ್ತರ್ ಮತ್ತು ಶಿಬಾನಿ ದಂಡೇಕರ್ ಮದುವೆ ನೆರವೇರಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಇತ್ತೀಚೆಗೆ ಈ ಜೋಡಿಯ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.