‘Modi’ ಸಿನಿಮಾಗೆ ಹಾಲಿವುಡ್​ನಲ್ಲಿ ಶೂಟಿಂಗ್ ಶುರು; ಜಾನಿ ಡೆಪ್​ ನಿರ್ದೇಶನ: ಇದು ಯಾರ ಜೀವನದ ಕಥೆ?

ಜಾನಿ ಡೆಪ್​ ಅವರು ‘ದಿ ಬ್ರೇವ್​’ ಸಿನಿಮಾದ ಬಳಿಕ ಯಾವುದೇ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಿರಲಿಲ್ಲ. ಈಗ ಅವರಿಗೆ ಮತ್ತೆ ನಿರ್ದೇಶನ ಮಾಡುವ ಉತ್ಸಾಹ ಬಂದಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಅವರು ಮತ್ತೆ ನಿರ್ದೇಶಕನ ಚೇರ್​ನಲ್ಲಿ ಕುಳಿತಿದ್ದು, ‘ಮೋದಿ’ ಸಿನಿಮಾಗೆ ಶೂಟಿಂಗ್​ ಶುರು ಮಾಡಿದ್ದಾರೆ.

‘Modi’ ಸಿನಿಮಾಗೆ ಹಾಲಿವುಡ್​ನಲ್ಲಿ ಶೂಟಿಂಗ್ ಶುರು; ಜಾನಿ ಡೆಪ್​ ನಿರ್ದೇಶನ: ಇದು ಯಾರ ಜೀವನದ ಕಥೆ?
ಜಾನಿ ಡೆಪ್
Follow us
ಮದನ್​ ಕುಮಾರ್​
|

Updated on:Oct 01, 2023 | 9:06 AM

ಹಾಲಿವುಡ್​ನಲ್ಲಿ ‘ಮೋದಿ’ (Modi) ಶೀರ್ಷಿಕೆಯಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ಈ ಚಿತ್ರದ ಮೇಲೆ ಬಹಳ ನಿರೀಕ್ಷೆ ಮೂಡಿದೆ. ಈಗಾಗಲೇ ಈ ಚಿತ್ರಕ್ಕೆ ಶೂಟಿಂಗ್​ ಆರಂಭ ಆಗಿದೆ. ವಿಶೇಷ ಏನೆಂದರೆ. ಈ ಸಿನಿಮಾಗೆ ಖ್ಯಾತ ನಟ ಜಾನಿ ಡೆಪ್​ (Johnny Depp) ಅವರು ನಿರ್ದೇಶನ ಮಾಡುತ್ತಿದ್ದಾರೆ. ಹೆಸರಾಂತ ಕಲಾವಿದ ಅಲ್​ ಪಚಿನೋ ಅವರು ಒಂದು ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ಸಾಕಷ್ಟು ಹೈಪ್​ ಸೃಷ್ಟಿ ಮಾಡಿದೆ. ಅಂದಹಾಗೆ, ಇದೊಂದು ಬಯೋಪಿಕ್​. ಹಾಗಂತ ನರೇಂದ್ರ ಮೋದಿ (Narendra Modi) ಅವರ ಬಯೋಪಿಕ್​ ಅಲ್ಲ. ಲಲಿತ್​ ಮೋದಿ, ನೀರವ್​ ಮೋದಿ ಕಥೆಯೂ ಈ ಸಿನಿಮಾದಲ್ಲಿ ಇರುವುದಿಲ್ಲ! ಹಾಗಾದರೆ ಇದು ಯಾರ ಜೀವನದ ಕಥೆ? ಆ ಪ್ರಶ್ನೆಗೆ ಉತ್ತರ ಇಲ್ಲಿದೆ..

‘ಪೈರೆಟ್ಸ್​ ಆಫ್​ ದಿ ಕೆರಿಬಿಯನ್​’ ಖ್ಯಾತಿಯ ನಟ ಜಾನಿ ಡೆಪ್​ ಅವರು ಹಾಲಿವುಡ್​ನಲ್ಲಿ ಹಲವು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ನಿರ್ದೇಶನದಲ್ಲೂ ಅವರಿಗೆ ಆಸಕ್ತಿ ಇದೆ. 1997ರಲ್ಲಿ ಅವರು ‘ದಿ ಬ್ರೇವ್​’ ಚಿತ್ರಕ್ಕೆ ನಿರ್ದೇಶನ ಮಾಡಿದ್ದರು. ಅದು ಅವರ ಮೊದಲ ನಿರ್ದೇಶನದ ಪ್ರಯತ್ನ. ಆ ಬಳಿಕ ಮತ್ತೆ ಯಾವುದೇ ಚಿತ್ರಕ್ಕೆ ಅವರು ಆ್ಯಕ್ಷನ್​-ಕಟ್​ ಹೇಳಿರಲಿಲ್ಲ. ಈಗ ಜಾನಿ ಡೆಪ್​ ಅವರಿಗೆ ಮತ್ತೆ ನಿರ್ದೇಶನ ಮಾಡುವ ಉತ್ಸಾಹ ಬಂದಿದೆ. ಬರೋಬ್ಬರಿ 25 ವರ್ಷಗಳ ಬಳಿಕ ಅವರು ಮತ್ತೆ ನಿರ್ದೇಶಕನ ಚೇರ್​ನಲ್ಲಿ ಕುಳಿತಿದ್ದು, ‘ಮೋದಿ’ ಸಿನಿಮಾಗೆ ಶೂಟಿಂಗ್​ ಶುರು ಮಾಡಿದ್ದಾರೆ.

ಇದನ್ನೂ ಓದಿ: ರಾಖಿ ಸಾವಂತ್​ ಬಯೋಪಿಕ್​ಗೆ ರಿಷಬ್​ ಶೆಟ್ಟಿ ನಿರ್ದೇಶನ? ಮೈಸೂರಿನಿಂದ ಹೊಸ ನ್ಯೂಸ್​

20ನೇ ಶತಮಾನದ ಆರಂಭದಲ್ಲಿ ಪ್ರಸಿದ್ಧವಾಗಿದ್ದ ಇಟಲಿಯ ಚಿತ್ರಕಾರ ಅಮೆಡಿಯೋ ಮೋದಿಗ್ಲಿಯಾನಿ ಜೀವನದ ಕುರಿತು ‘ಮೋದಿ’ ಸಿನಿಮಾ ತಯಾರಾಗುತ್ತಿದೆ. ಆಧುನಿಕ ಶೈಲಿಯ ಚಿತ್ರಗಳನ್ನು ರಚಿಸುವ ಮೂಲಕ ಮೋದಿಗ್ಲಿಯಾನಿ ಗಮನ ಸೆಳೆದಿದ್ದರು. ಆದರೆ ಆ ಕಲಾಕೃತಿಗಳಿಗೆ ಅಂದಿನ ಕಾಲದಲ್ಲಿ ಸೂಕ್ತ ಮನ್ನಣೆ ಸಿಕ್ಕಿರಲಿಲ್ಲ. ಅವರ ಮರಣದ ನಂತರ ಆ ಚಿತ್ರಗಳಿಗೆ ಜನಪ್ರಿಯತೆ ಸಿಕ್ಕಿತು. ಕೇವಲ 35ನೇ ವಯಸ್ಸಿನಲ್ಲಿ ನಿಧನರಾದ ಮೋದಿಗ್ಲಿಯಾನಿ ಜೀವನದ ಘಟನೆಗಳು ಇಂಟರೆಸ್ಟಿಂಗ್​ ಆಗಿವೆ. ಅವುಗಳನ್ನು ಆಧಾರವಾಗಿ ಇಟ್ಟುಕೊಂಡು ‘ಮೋದಿ’ ಸಿನಿಮಾ ತಯಾರಾಗುತ್ತಿದೆ.

ಇದನ್ನೂ ಓದಿ: ಟ್ರೋಲ್ ಆಯ್ತು ಧನುಶ್​ ಹೊಸ ಗೆಟಪ್​; ಬಾಬಾ ರಾಮ್​ದೇವ್​ ಬಯೋಪಿಕ್​ಗೆ ತಯಾರಿ ನಡೀತಾ ಇದೆಯಾ?

ಇಟಾಲಿಯನ್​ ನಟ ರಿಕಾರ್ದೋ ಸ್ಕಮಾರ್ಚೋ ಅವರು ‘ಮೋದಿ’ ಸಿನಿಮಾದಲ್ಲಿ ಅಮೆಡಿಯೋ ಮೋದಿಗ್ಲಿಯಾನಿ ಪಾತ್ರವನ್ನು ಮಾಡುತ್ತಿದ್ದಾರೆ. ಹಾಲಿವುಡ್​ನ ಲೆಜೆಂಡರಿ ನಟ ಅಲ್​ ಪಚಿನೋ ಅವರು ಕೂಡ ಈ ಚಿತ್ರದಲ್ಲಿ ಒಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಅಲ್ಲದೇ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ‘ಮೋದಿ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:54 am, Sun, 1 October 23