ರಷ್ಯಾಗೆ ಈಗ ಮನರಂಜನಾ ಕ್ಷೇತ್ರದಿಂದಲೂ ನಿರ್ಬಂಧ; ಅಲ್ಲಿ ಚಿತ್ರ ರಿಲೀಸ್ ಮಾಡಲ್ಲ ಎಂದ ಖ್ಯಾತ ನಿರ್ಮಾಣ ಕಂಪನಿಗಳು

ರಷ್ಯಾಗೆ ಈಗ ಮನರಂಜನಾ ಕ್ಷೇತ್ರದಿಂದಲೂ ನಿರ್ಬಂಧ; ಅಲ್ಲಿ ಚಿತ್ರ ರಿಲೀಸ್ ಮಾಡಲ್ಲ ಎಂದ ಖ್ಯಾತ ನಿರ್ಮಾಣ ಕಂಪನಿಗಳು
‘ಟರ್ನಿಂಗ್ ರೆಡ್’ ಚಿತ್ರದ ಒಂದು ದೃಶ್ಯ

Russia Ukraine War: ಉಕ್ರೇನ್ ಮೇಲೆ ಯುದ್ಧ ಘೋಷಿಸಿರುವ ರಷ್ಯಾಗೆ ಈಗಾಗಲೇ ಹಲವು ರೀತಿಯಲ್ಲಿ ನಿರ್ಬಂಧ ವಿಧಿಸಲಾಗಿದೆ. ಇದೀಗ ಹಾಲಿವುಡ್​ನ ಖ್ಯಾತ ನಿರ್ಮಾಣ ಸಂಸ್ಥೆಗಳು ತಮ್ಮ ಚಿತ್ರಗಳನ್ನು ಸದ್ಯ ರಷ್ಯಾದಲ್ಲಿ ರಿಲೀಸ್ ಮಾಡುವುದಿಲ್ಲ ಎಂದು ಘೋಷಿಸಿವೆ.

TV9kannada Web Team

| Edited By: shivaprasad.hs

Mar 01, 2022 | 3:34 PM

Ukraine Conflict | ಉಕ್ರೇನ್ ಮೇಲೆ ರಷ್ಯಾ ಘೋಷಿಸಿರುವ ಯುದ್ಧ (Russia Ukraine War) ಆರನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಗುರುವಾರ ರಷ್ಯಾ ಉಕ್ರೇನ್ ಮೇಲೆ ಕದನ ಘೋಷಿಸಿತ್ತು. ಕದನ ನಿಲ್ಲಿಸಲು ರಷ್ಯಾ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಹಲವು ರೀತಿಯ ದಿಗ್ಬಂಧನಗಳನ್ನು ವಿಧಿಸಲಾಗುತ್ತಿದೆ. ಇದೀಗ ಮನರಂಜನಾ ಕ್ಷೇತ್ರದ ದೈತ್ಯ ಕಂಪನಿಗಳು ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿದ್ದು, ಸದ್ಯ ರಿಲೀಸ್ ಆಗಲಿರುವ ಆ ಕಂಪನಿಯ ನಿರ್ಮಾಣದ ಚಿತ್ರಗಳು ರಷ್ಯಾದಲ್ಲಿ ಲಭ್ಯವಿರುವುದಿಲ್ಲ ಎಂದು ತಿಳಿಸಲಾಗಿದೆ. ಸದ್ಯದಲ್ಲೇ ‘ದಿ ಬ್ಯಾಟ್​ಮ್ಯಾನ್’ (The Batman) ಚಿತ್ರ ರಿಲೀಸ್ ಆಗುತ್ತಿದೆ. ಆದರೆ ಇದೀಗ ‘ದಿ ಬ್ಯಾಟ್​ಮ್ಯಾನ್’ ನಿರ್ಮಾಣ ಸಂಸ್ಥೆ, ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವ ‘ವಾರ್ನರ್ ಬ್ರದರ್ಸ್’ ಈ ಚಿತ್ರ ರಷ್ಯಾದಲ್ಲಿ ತೆರೆಗೆ ಬರುತ್ತಿಲ್ಲ ಎಂದು ಘೋಷಿಸಿದೆ. ಇದಲ್ಲದೇ ಹಾಲಿವುಡ್​ನ ಮತ್ತೆರಡು ಖ್ಯಾತ ನಿರ್ಮಾಣ ಸಂಸ್ಥೆಗಳಾದ ‘ವಾಲ್ಟ್ ಡಿಸ್ನೆ ಕಂಪನಿ’ (Walt Disney Co) ಮತ್ತು ಸೋನಿ ಪಿಕ್ಚರ್ಸ್ ತಮ್ಮ ಮುಂದಿನ ಚಿತ್ರಗಳು ರಷ್ಯಾದಲ್ಲಿ ರಿಲೀಸ್ ಆಗುತ್ತಿಲ್ಲ ಎಂದು ತಿಳಿಸಿವೆ. ಈ ಮೂರೂ ಸ್ಟುಡಿಯೋಗಳ ಮೂಲಕ ಕೆಲವೇ ವಾರಗಳ ಅಂತರದಲ್ಲಿ ಹಲವು ಬಿಗ್ ಬಜೆಟ್​ನ ನಿರೀಕ್ಷಿತ ಚಿತ್ರಗಳು ತೆರೆಕಾಣಲಿವೆ.

‘ದಿ ಬ್ಯಾಟ್​ಮ್ಯಾನ್’ ಚಿತ್ರಕ್ಕೆ ಚಿತ್ರಪ್ರೇಮಿಗಳು ಹಲವು ವರ್ಷದಿಂದ ಕಾದಿದ್ದಾರೆ. ರಷ್ಯಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಲಿವುಡ್ ಚಿತ್ರ ವೀಕ್ಷಕರಿದ್ದಾರೆ. ದಿ ಬ್ಯಾಟ್​ಮ್ಯಾನ್ ಅಮೇರಿಕಾ, ರಷ್ಯಾ ಸೇರಿದಂತೆ ಹಲವೆಡೆ ತೆರೆಕಾಣಬೇಕಿತ್ತು. ಆದರೆ ಇದೀಗ ವಾರ್ನರ್ ಮೀಡಿಯಾದ ವಕ್ತಾರರು ಈ ಕುರಿತು ಮಾತನಾಡಿ, ‘‘ಉಕ್ರೇನ್​ನಲ್ಲಿ ಸಂಭವಿಸುತ್ತಿರುವ ದುರಂತ ಅಂತ್ಯಕಾಣಬೇಕು. ಸದ್ಯ ರಷ್ಯಾದಲ್ಲಿ ಚಿತ್ರದ ರಿಲೀಸ್ ಮುಂದೂಡಲಾಗಿದೆ. ಮುಂದೆ ಪರಿಸ್ಥಿತಿ ಏನಾಗುತ್ತದೆ ಎನ್ನುವುದನ್ನು ಗಮನಿಸುತ್ತೇವೆ’’ ಎಂದಿದ್ದಾರೆ.

ಕೆಲ ದಿನಗಳ ಮೊದಲಷ್ಟೇ ವಾಲ್ಟ್ ಡಿಸ್ನೆಯು ‘ಟರ್ನಿಂಗ್ ರೆಡ್’ ರಷ್ಯಾದಲ್ಲಿ ತೆರೆಕಾಣುವುದಿಲ್ಲ ಎಂದು ತಿಳಿಸಿತ್ತು. ರಷ್ಯಾದ ಚಿತ್ರಮಂದಿರಗಳಲ್ಲಿ ‘ಟರ್ನಿಂಗ್ ರೆಡ್’ ತೆರೆಕಾಣುವುದಿಲ್ಲ. ಮಾನವೀಯ ಸಂಘರ್ಷಕ್ಕೆ ಕಾರಣವಾಗಿರುವ ರಷ್ಯಾದಲ್ಲಿ ಚಿತ್ರದ ರಿಲೀಸ್ ಬಗ್ಗೆ ಮುಂದಿನ ನಡೆಗಳನ್ನು ನೋಡಿ ತೀರ್ಮಾನಿಸಲಾಗುತ್ತದೆ ಎಂದು ಅದು ಹೇಳಿತ್ತು. ಇದೀಗ ವಾರ್ನರ್ ಬ್ರದರ್ಸ್ ಕೂಡ ಇದೇ ನಿರ್ಧಾರ ಕೈಗೊಂಡಿದೆ.

ಈಗಾಗಲೇ ಹಲವು ರಾಷ್ಟ್ರಗಳು ರಷ್ಯಾದ ಮೇಲೆ ಆರ್ಥಿಕ ನಿರ್ಬಂಧ ಹೇರಿವೆ. ಶನಿವಾರದಂದು ಉಕ್ರೇನಿಯನ್ ಫಿಲ್ಮ್ ಅಕಾಡೆಮಿ ರಷ್ಯಾ ಚಿತ್ರರಂಗವನ್ನು ಬಾಯ್ಕಾಟ್ ಮಾಡಲು ಕರೆನೀಡಿತ್ತು. ದಿ ಮೋಷನ್ ಪಿಕ್ಚರ್ ಅಸೋಸಿಯೇಷನ್ ತಾನು ಉಕ್ರೇನ್ ಜನರ ಪರ ನಿಲ್ಲುವುದಾಗಿ ತಿಳಿಸಿತ್ತು. ಅಲ್ಲಿ ಶಾಂತಿ ನೆಲೆಸಬೇಕು ಎಂದು ಅದು ಹೇಳಿತ್ತು.

ವಾರ್ನರ್ ಬ್ರದರ್ಸ್ ಹಾಗೂ ಡಿಸ್ನೆ ನಂತರ ಸೋನಿ ಕೂಡ ಇದೇ ನಿರ್ಧಾರ ಪ್ರಕಟಿಸಿದೆ. ಅಲ್ಲದೇ ತನ್ನ ಮುಂದಿನ ಚಿತ್ರ ಮೋರ್ಬಿಯಸ್ ಅನ್ನು ಅಲ್ಲಿ ರಿಲೀಸ್ ಮಾಡುವುದಿಲ್ಲ ಎಂದು ತಿಳಿಸಿದೆ.

ರಷ್ಯಾ ಹಾಲಿವುಡ್ ಚಿತ್ರಗಳಿಗೆ ಬಹುದೊಡ್ಡ ಮಾರುಕಟ್ಟೆ ಎಂದೇನೂ ಅಲ್ಲ. ಆದರೂ ಬಹುನಿರೀಕ್ಷಿತ ಚಿತ್ರಗಳು ರಷ್ಯಾದಲ್ಲಿ ಉತ್ತಮವಾಗಿ ಗಳಿಕೆ ಮಾಡುತ್ತವೆ. ಇತ್ತೀಚೆಗೆ ತೆರೆಕಂಡಿದ್ದ ಟಾಮ್ ಹಾಲಾಂಡ್ ನಟನೆಯ ಸ್ಪೈಟರ್ ಮ್ಯಾನ್ ನೋ ವೇ ಹೋಮ್ ವಿಶ್ವಾದ್ಯಂತ 1.85 ಬಿಲಿಯನ್ ಡಾಲರ್ ಗಳಿಸಿತ್ತು. ರಷ್ಯಾದಲ್ಲಿ 46.7 ಮಿಲಿಯನ್ ಡಾಲರ್ ಮೊತ್ತವನ್ನು ಚಿತ್ರ ಗಳಿಸಿತ್ತು.

ಇದನ್ನೂ ಓದಿ:

Big Breaking: ರಷ್ಯಾ ದಾಳಿಗೆ ಉಕ್ರೇನ್​​ನಲ್ಲಿದ್ದ ಕರ್ನಾಟಕ ವಿದ್ಯಾರ್ಥಿ ದುರ್ಮರಣ; ಖಚಿತ ಪಡಿಸಿದ ವಿದೇಶಾಂಗ ಇಲಾಖೆ

Trademark Song: ‘ಟ್ರೇಡ್​ಮಾರ್ಕ್’ನಲ್ಲಿದೆ ಹಲವು ಅಪರೂಪದ ದೃಶ್ಯಗಳು; ಹಾಡಿನ ವಿಶೇಷ ಸ್ಟಿಲ್​ಗಳು ಇಲ್ಲಿವೆ

Follow us on

Related Stories

Most Read Stories

Click on your DTH Provider to Add TV9 Kannada