‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಬಿಡುಗಡೆ ದಿನಾಂಕ ಘೋಷಣೆ, ಟ್ರೈಲರ್ ಬಿಡುಗಡೆ

ವಿಶ್ವದ ಜನಪ್ರಿಯ ವೆಬ್ ಸರಣಿ ‘ಗೇಮ್ ಆಫ್ ಥ್ರೋನ್ಸ್’ ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ನ ಎರಡನೇ ಸೀಸನ್​ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ವೆಬ್ ಸರಣಿಯ ಟ್ರೈಲರ್ ಸಹ ಇದೀಗ ಬಿಡುಗಡೆ ಆಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2 ಬಿಡುಗಡೆ ದಿನಾಂಕ ಘೋಷಣೆ, ಟ್ರೈಲರ್ ಬಿಡುಗಡೆ
Follow us
ಮಂಜುನಾಥ ಸಿ.
|

Updated on:May 15, 2024 | 2:56 PM

ಗೇಮ್ ಆಫ್ ಥ್ರೋನ್ಸ್’ (Game Of Thrones) ಟಿವಿ ಸರಣಿ ಅಥವಾ ವೆಬ್ ಸರಣಿ ಇತಿಹಾಸದಲ್ಲಿಯೇ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಒಂದೆನಿಸಿಕೊಂಡಿದೆ. ‘ಗೇಮ್ ಆಫ್ ಥ್ರೋನ್ಸ್’ 2019 ರಲ್ಲಿ ಕೊನೆಯಾಯಿತು. ಅದಾದ ಬಳಿಕ ‘ಗೇಮ್ ಆಫ್ ಥ್ರೊನ್ಸ್​’ನ ಪ್ರೀಕ್ವೆಲ್ ಬಿಡುಗಡೆ ಆಗುತ್ತದೆಂದು ಘೋಷಿಸಲಾಯ್ತು. ಅಂತೆಯೇ 2022ರ ಆಗಸ್ಟ್ ತಿಂಗಳಲ್ಲಿ ‘ಗೇಮ್ ಆಫ್ ಥ್ರೋನ್ಸ್’ನ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಬಿಡುಗಡೆ ಆಯ್ತು. ಮೊದಲ ಸೀಸನ್​ನಲ್ಲಿಯೇ ಗಮನ ಸೆಳೆದಿದ್ದ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ.

ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2ರ ಟ್ರೈಲರ್ ಬಿಡುಗಡೆ ಆಗಿದ್ದು, ಅದರ ಜೊತೆಗೆ ವೆಬ್ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ. ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 1 ರಲ್ಲಿ ಪಾತ್ರಗಳ ಪರಿಚಯ, ಅವುಗಳ ವ್ಯಕ್ತಿತ್ವದ ಅನಾವರಣ ಇವೇ ಮುಂತಾದುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಾಗಿತ್ತು. ಆದರೆ ಸೀಸನ್ 2 ರಲ್ಲಿ ಅಸಲಿ ಯುದ್ಧ ಶುರುವಾಗಿದೆ. ಅದೂ ಕತೆ ನಡೆಯುವ ಪ್ರದೇಶದ ಅತಿ ದೊಡ್ಡ ಕುಟುಂಬವಾದ ಟಾಗೇರಿಯನ್ಸ್ ನಡುವೆ ಅಧಿಕಾರಕ್ಕಾಗಿ ಯುದ್ಧ ಶುರುವಾಗಿದೆ. ಭಾರಿ ಸಂಖ್ಯೆಯಲ್ಲಿ ಡ್ರ್ಯಾಗನ್​ಗಳು ಸಹ ಯುದ್ಧದಲ್ಲಿ ಪಾಲ್ಗೊಂಡಿವೆ ಎಂಬುದು ಟ್ರೈಲರ್​ನಿಂದ ತಿಳಿದು ಬರುತ್ತಿದೆ.

ಇದನ್ನೂ ಓದಿ:‘ಸಲಾರ್​ಗಾಗಿ ಹೊಸ ಪ್ರಪಂಚ ಸೃಷ್ಟಿಸಿದ್ದಾರೆ ಪ್ರಶಾಂತ್ ನೀಲ್’, ಗೇಮ್ ಆಫ್ ಥ್ರೋನ್ಸ್​ಗೆ ಹೋಲಿಸಿದ ನಟಿ

‘ಗೇಮ್ ಆಫ್ ಥ್ರೋನ್ಸ್’ನಲ್ಲಿ ಪ್ರತಿ ಸೀಸನ್​ನಲ್ಲಿಯೂ ಒಬ್ಬರು ಅಥವಾ ಇಬ್ಬರು ನೆಚ್ಚಿನ ಪಾತ್ರಗಳು ಸಾಯುತ್ತಿದ್ದವು. ಹೌಸ್ ಆಫ್ ದಿ ಡ್ರ್ಯಾಗನ್​ನಲ್ಲಿಯೂ ಅದೇ ಪದ್ಧತಿ ಮುಂದುವರೆದಿದೆ. ಇದೀಗ ಸೀಸನ್ 2ರಲ್ಲಿ ಯುದ್ಧದ ಕತೆ ಬೇರೆ ಪ್ರಾರಂಭವಾಗಿದ್ದು, ಹಲವು ಪಾತ್ರಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಯುದ್ಧ, ಕತೆ ನಡೆಯುತ್ತಿರುವ ಪ್ರದೇಶದ ಆಡಳಿತದಲ್ಲಿರುವ ಬೇರೆ-ಬೇರೆ ಕುಟುಂಬಗಳ ನಡುವೆ ಸ್ನೇಹ-ವೈರತ್ವಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

‘ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2 ಜೂನ್ 17 ರಂದು ಎಚ್​ಬಿಓ ಮ್ಯಾಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಜಿಯೋ​ನಲ್ಲಿಯೂ ಬಿಡುಗಡೆ. ಜಿಯೋನಲ್ಲಿ ‘ಹೌಸ್ ಆಫ್ ದಿ ಡ್ರಾಗನ್’ ವೆಬ್ ಸರಣಿ ಇಂಗ್ಲೀಷ್ ಸೇರಿದಂತೆ ಒಟ್ಟು ಆರು ಭಾಷೆಯಲ್ಲಿ ಬಿಡುಗಡೆ ಕಾಣಲಿದೆ. ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ವೆಬ್ ಸರಣಿಯನ್ನು ವೀಕ್ಷಿಸಬಹುದಾಗಿದೆ. ಜೂನ್ 17 ರಿಂದ ಪ್ರತಿ ಸೋಮವಾರ ಅಮೆರಿಕ ಸೇರಿದಂತೆ ಎಲ್ಲ ಕಡೆ ಕಂತುಗಳು ಪ್ರಸಾರವಾಗಲಿವೆ. ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ ಭಾರಿ ವೀಕ್ಷಣೆಯನ್ನು ಪಡೆದುಕೊಂಡಿತ್ತು. ಅದೇ ರೀತಿ ಎರಡನೇ ಸೀಸನ್ ಸಹ ಭಾರಿ ಜನಪ್ರಿಯತೆ ಗಳಿಸುವ ನಿರೀಕ್ಷೆ ಇದೆ. ಇನ್ನು ಇದೇ ಸಮಯಕ್ಕೆ ಸರಿಯಾಗಿ ಅಮೆಜಾನ್ ಪ್ರೈಂನವರು ‘ಲಾರ್ಡ್ ಆಫ್ ದಿ ರಿಂಗ್ಸ್’ ಸರಣಿಯ ಎರಡನೇ ಸೀಸನ್ ಬಿಡುಗಡೆ ಮಾಡಿದ್ದಾರೆ. ಅದಕ್ಕೂ ಸಹ ದೊಡ್ಡ ಸಂಖ್ಯೆಯ ವೀಕ್ಷಕರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:51 pm, Wed, 15 May 24