Kantara: ಎಲ್ಲಾ ಭಾಷೆಗಳಲ್ಲಿ ಬರುವ ದೈವದ ಧ್ವನಿ ನನ್ನದೆ: ‘ಕಾಂತಾರ’ ಚಿತ್ರದ ಕ್ಲೈಮ್ಯಾಕ್ಸ್ ರಹಸ್ಯ ಬಿಚ್ಚಿಟ್ಟ ರಿಷಬ್ ಶೆಟ್ಟಿ
ಭಾರತದಾದ್ಯಂತ ಸುದ್ದು ಮಾಡಿದ ಚಿತ್ರ ಕಾಂತಾರ. ಚಿತ್ರದಲ್ಲಿ ಬರುವ ದೈವದ ಧ್ವನಿ ಕೂಡ ಎಲ್ಲರ ಗಮನ ಸೆಳೆದಿತ್ತು. ಈ ದೈವದ ಧ್ವನಿ ಯಾರದು ಎಂಬುದು ಕೂಡ ಕುತೂಹಲ ಮೂಡಿಸಿತ್ತು. ಸದ್ಯ ಆ ರಹಸ್ಯವನ್ನು ರಿಷಬ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.
ವಿಶ್ವಮಟ್ಟದಲ್ಲಿ ಸದ್ದು ಮಾಡಿದ ಚಿತ್ರವೆಂದರೆ ಅದು ‘ಕಾಂತಾರ’ (Kantara). ರಿಷಬ್ ಶೆಟ್ಟಿ (Rishab Shetty) ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಚಿತ್ರ 50ಕ್ಕೂ ಹೆಚ್ಚು ದಿನ ಪೂರೈಸಿದೆ. 400 ಕೋಟಿ ರೂ. ಗಳಿಸುವ ಮೂಲಕ ಬಾಕ್ಸ್ ಆಫೀಸ್ನ್ನು ‘ಕಾಂತಾರ’ ಚಿತ್ರ ಆಳಿದೆ. ನವೆಂಬರ್ 24ರಂದು ಅಮೆಜಾನ್ ಪ್ರೈಮ್ಗೆ ಕಾಲಿಟ್ಟ ‘ಕಾಂತಾರ’ ಅಲ್ಲಿಯೂ ತನ್ನ ಪ್ರಭಾವವನ್ನು ಮುಂದುವರೆಸಿದೆ. ‘ಕಾಂತಾರ’ ಚಿತ್ರ ನೋಡಿದ ಜನರು ದೈವದ ಧ್ವನಿಯನ್ನು ಅನುಕರಣೆ ಮಾಡಿದ್ದರು. ಇದನ್ನು ತಿಳಿದ ನಟ ರಿಷಬ್ ಶೆಟ್ಟಿ ಧ್ವನಿಯನ್ನು ಅನುಕರಣೆ ಮಾಡದಂತೆ ಮನವಿ ಮಾಡಿದ್ದರು. ‘ಕಾಂತಾರ’ ಚಿತ್ರ ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ದೈವದ ಧ್ವನಿ ರಿಷಬ್ ಶೆಟ್ಟಿ ಅವರದೇ. ಈ ಕುರಿತು ಅವರು ‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
‘ಕಾಂತಾರ’ ಚಿತ್ರದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದ ಕುರಿತಾಗಿ ತೋರಿಸಲಾಗಿದೆ. ಅದರ ಚಿತ್ರೀಕರಣದ ಕುರಿತು ಮಾತನಾಡಿದ ರಿಷಬ್ ಶೆಟ್ಟಿ, ‘ಇದು ಪದಗಳಲ್ಲಿ ವಿವರಿಸಲಾಗದ ಅನುಭವ. ನಾನು ಸ್ವತಃ ಗುಳಿಗ ಮತ್ತು ಪಂಜುರ್ಲಿ ದೈವವನ್ನು ಆರಾಧಿಸುತ್ತೇನೆ. ಚಿತ್ರೀಕರಣಕ್ಕೂ ಮೊದಲು ದೈವದ ಬಳಿ ಕೇಳಿಕೊಂಡು ಒಪ್ಪಿಗೆ ಪಡೆದುಕೊಂಡು ಚಿತ್ರೀಕರಿಸಲು ತಯಾರಿ ನಡೆಸಿದೆ. ನಾನು ಬಾಲ್ಯದಿಂದಲೂ ದೈವದ ಆಚರಣೆಯನ್ನು ನೋಡಿಕೊಂಡು ಬಂದಿದ್ದೇನೆ. ದೈವದ ನೃತ್ಯಕ್ಕಾಗಿ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ನಿಜ ಜೀವನದಲ್ಲಿ ದೈವವನ್ನು ಪ್ರದರ್ಶಿಸುವವರನ್ನು ಸಹ ವೀಕ್ಷಿಸಿದ್ದೇನೆ. ಈ ಎಲ್ಲ ಅಂಶಗಳನ್ನು ಚಿತ್ರದಲ್ಲಿ ಒಳವಡಿಸಿದೆ’ ಎಂದು ಹೇಳಿದ್ದಾರೆ.
ಚಿತ್ರದ ಕ್ಲೈಮ್ಯಾಕ್ಸ್‌ನ ಭಾಗವಾಗಿದಲ್ಲಿ ಬರುವ ಗುಳಿಗ ದೈವದ ಕುರಿತಾಗಿ ಅವರು ಮಾತನಾಡಿದ್ದು, ‘ನನ್ನ ಮನಸ್ಸಿನಲ್ಲಿ ನಾಲ್ಕು ದೃಶ್ಯಗಳು ಇದ್ದವು. ಅದನ್ನು ನಾನು ಡಿಓಪಿಯೊಂದಿಗೆ ಮಾತ್ರ ಹಂಚಿಕೊಂಡಿದೆ. ಹಾಗಾಗಿ ಮೊದಲ ಚಿತ್ರೀಕರಣದ ತನಕ ಪ್ರೇಕ್ಷಕರಂತೆ ನನ್ನ ಸಿಬ್ಬಂದಿಗೆ ಕೂಡ ಏನಾಗಲಿದೆ ಎಂಬ ಕಲ್ಪನೆ ಇರಲಿಲ್ಲ. ಎಲ್ಲಾ ನಾಲ್ಕು ದೃಶ್ಯಗಳನ್ನು ಚಿತ್ರೀಕರಿಸಿದ ನಂತರ ಅವರಿಗೆ ಅರ್ಥವಾಯಿತು’ ಎಂದರು.
ಇದನ್ನೂ ಓದಿ: ‘ಕಾಂತಾರ’ ಚಿತ್ರದ ಬಗ್ಗೆ ಅಪಸ್ವರ ತೆಗೆದ ಹಿಂದಿ ನಿರ್ಮಾಪಕ; ಫ್ಯಾನ್ಸ್ ಕೊಟ್ರು ಖಡಕ್ ಉತ್ತರ
‘ಕಾಂತಾರ ಚಿತ್ರದಲ್ಲಿ ಗುಳಿಗ ಮತ್ತು ಪಂಜುರ್ಲಿ ದೈವದ ಕಿರುಚುವಿಕೆ ಪ್ರತಿಯೊಂದು ಭಾಷೆಯಲ್ಲಿ ಅದು ನನ್ನ ಧ್ವನಿಯೇ ಇರುವುದು. ಅದನ್ನು ನಾವು ಹಾಗೆಯೇ ಬಿಟ್ಟಿದ್ದೇವೆ. ಡಬ್ಬಿಂಗ್ ಸಮಯದಲ್ಲಿ ನಾವು ಅದನ್ನು ಬದಲಾಯಿಸಿಲ್ಲ. ನಾನು ದೈವ ಕೋಲಾ ಸಮಯದಲ್ಲಿ ಮಾಡಿದ್ದನ್ನು ಮರುಸೃಷ್ಟಿಸಲು ಪ್ರಯತ್ನಿಸಿದೆ, ಆದರೆ ಅದು ಪರಿಪೂರ್ಣವಾಗಿ ಹೊರಹೊಮ್ಮಲಿಲ್ಲ. ನಾವು ಕೇವಲ ಪ್ರಯತ್ನಿಸಬಹುದು, ಆದರೆ ಆ ಮಟ್ಟವನ್ನು ತಲುಪಲು ಸಾಧ್ಯವಾಗಲಿಲ್ಲ. ಜೊತೆಗೆ ನಾನು ಎರಡು ಸೀಕ್ವೆನ್ಸ್‌ಗಳ ಬಗ್ಗೆ ತುಂಬಾ ಹೆದರಿದ್ದೆ. ಒಂದು ಆರಂಭದಲ್ಲಿ ಮತ್ತು ಕೊನೆಯಲ್ಲಿ ಬರುವ ಕೋಲಾ ದೃಶ್ಯಗಳಿಗಾಗಿ. ಏಕೆಂದರೆ ಸುಮಾರು 50-60 ಕೆಜಿ ತೂಕದ ವೇಷಭೂಷಣ ಮತ್ತು ಆಭರಣವನ್ನು ತೊಟ್ಟು ನಟಿಸುವುದು ಕಷ್ಟಕರವಾಗಿತ್ತು’ ಎಂದು ರಿಷಬ್ ಶೆಟ್ಟಿ ಇಂಡಿಯಾ ಟುಡೇ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:31 pm, Fri, 9 December 22