
ಸೂಪರ್‌ಸ್ಟಾರ್ ರಜನಿಕಾಂತ್ (Rajinikanth) ನಟನೆಯ, 2026ರ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ‘ಜೈಲರ್ 2’ (Jailer 2) ಸದ್ಯ ಭಾರಿ ಚರ್ಚೆಯಲ್ಲಿದೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ಈ ಸೀಕ್ವೆಲ್‌ನಲ್ಲಿ ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಬಳಿಕ ಕೇಳಿಬಂದ ಮಾಹಿತಿ ಪ್ರಕಾರ, ಶಾರುಖ್ ಅವರು ಈ ಆಫರ್ ನಿರಾಕರಿಸಿದರು. ಬಳಿಕ ಬೇರೆ ನಟರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ಈಗ ಆ ಪಾತ್ರವನ್ನೇ ಚಿತ್ರದಿಂದ ಸಂಪೂರ್ಣವಾಗಿ ಕೈಬಿಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
ವರದಿಗಳ ಪ್ರಕಾರ, ಶಾರುಖ್ ಖಾನ್ ಅವರಿಗಾಗಿ ಸೃಷ್ಟಿಸಲಾಗಿದ್ದ ಇಡೀ ಪಾತ್ರವನ್ನು ಸ್ಕ್ರಿಪ್ಟ್‌ನಿಂದ ತೆಗೆದುಹಾಕಲು ‘ಜೈಲರ್ 2’ ತಂಡ ಮುಂದಾಗಿದೆ. ರಜನಿಕಾಂತ್ ಅವರು ಸದ್ಯ ಪ್ರವಾಸ ಮುಗಿಸಿ ಹಿಂತಿರುಗಲಿದ್ದು, ಜೂನ್ 8 ಅಥವಾ 9ರಂದು ಅವರೊಂದಿಗೆ ಒಂದು ಸಣ್ಣ ಪ್ಯಾಚ್‌ವರ್ಕ್ ಶೂಟಿಂಗ್ ನಡೆಸಲು ಚಿತ್ರತಂಡ ಯೋಜಿಸಿದೆ. ಆದರೆ, ಈ ಬಗ್ಗೆ ಚಿತ್ರದ ನಿರ್ಮಾಪಕರಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮೊದಲಿಗೆ ಶಾರುಖ್ ಖಾನ್ ಮತ್ತು ರಜನಿಕಾಂತ್ ಇಬ್ಬರೂ ತೆರೆ ಹಂಚಿಕೊಳ್ಳಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಭಾರಿ ರೋಮಾಂಚನ ಉಂಟುಮಾಡಿತ್ತು. ಆದರೆ ಶಾರುಖ್ ಅವರು ತಮ್ಮ ಮುಂಬರುವ ‘ಕಿಂಗ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿರುವುದರಿಂದ ಈ ಅವಕಾಶವನ್ನು ಕೈಬಿಟ್ಟಿದ್ದಾರೆ ಎನ್ನಲಾಗಿದೆ. ಶಾರುಖ್ ನಂತರ ಆ ಪಾತ್ರಕ್ಕೆ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು ಪರಿಗಣಿಸಲಾಗುತ್ತಿದೆ ಎಂಬ ವದಂತಿಗಳು ಕೇಳಿಬಂದಿದ್ದರೂ, ಅದಕ್ಕೂ ಯಾವುದೇ ಗಟ್ಟಿ ಪುರಾವೆ ಸಿಕ್ಕಿಲ್ಲ.
‘ಜೈಲರ್ 2’ ಚಿತ್ರದಲ್ಲಿ ರಜನಿಕಾಂತ್ ಮತ್ತೆ ಮುತ್ತುವೇಲ್ ಪಾಂಡಿಯನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಈ ಬಾರಿ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ, ವಿದ್ಯಾ ಬಾಲನ್, ಎಸ್.ಜೆ. ಸೂರ್ಯ ಮತ್ತು ಸೂರಜ್ ವೆಂಜಾರಮೂಡು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇವರ ಜೊತೆಗೆ ಮೊದಲ ಭಾಗದಲ್ಲಿದ್ದ ಮೋಹನ್‌ಲಾಲ್ ಮತ್ತು ಶಿವರಾಜ್‌ಕುಮಾರ್ ಕೂಡ ಸೀಕ್ವೆಲ್‌ನಲ್ಲಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಸಿಗದ 5 ಕೋಟಿ ರೂಪಾಯಿ ಬೆಲೆಯ ಹೊಸ ಕಾರು ತರಿಸಿಕೊಂಡ ಶಾರುಖ್ ಖಾನ್
ಚಿತ್ರತಂಡ ಅಧಿಕೃತವಾಗಿ ಬಿಡುಗಡೆ ದಿನಾಂಕವನ್ನು ಘೋಷಿಸದಿದ್ದರೂ, ಮೂಲಗಳ ಪ್ರಕಾರ ಸಿನಿಮಾ ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣುವ ಸಾಧ್ಯತೆ ಇದೆ. ಪಾತ್ರವರ್ಗದ ಕಾರಣದಿಂದ ಈ ಸಿನಿಮಾ ಆಗಾಗ ಸುದ್ದಿ ಆಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.