ರಾಜಕಾರಣಿಯಿಂದ ನಟಿಗೆ ಚಿತ್ರಹಿಂಸೆ, ಭೀಕರ ದೌರ್ಜನ್ಯ, ಐಪಿಎಸ್ಗಳು ಭಾಗಿ
Kadambari Jethwani: ನಟಿ ಕಾದಂಬರಿ ಜೇಟ್ವಾನಿ ವಿರುದ್ಧ ಕೆಲ ಐಪಿಎಸ್ ಅಧಿಕಾರಿಗಳು, ಒಬ್ಬ ಐಎಎಸ್ ಅಧಿಕಾರಿ ಸೇರಿ ವ್ಯೂಹ ರಚಿಸಿ ಆಕೆಗೆ ಕೊಡಬಾರದ ಹಿಂಸೆ, ಲೈಂಗಿಕ ದೌರ್ಜನ್ಯ ನೀಡಿರುವ ಘಟನೆ ಆರು ತಿಂಗಳ ನಂತರ ಬಹಿರಂಗವಾಗಿದೆ.
ಕರ್ನಾಟಕದಲ್ಲಿ ನಟ ಮತ್ತು ಆತನ ಗ್ಯಾಂಗ್ ಸಾಮಾನ್ಯ ವ್ಯಕ್ತಿಯೊಬ್ಬನ ಮೇಲೆ ಅಟ್ಟಹಾಸ ಮೆರೆದು ಆತನ ಸಾವಿಗೆ ಕಾರಣವಾಗಿರುವ ಸುದ್ದಿ ಸದ್ದು ಮಾಡುತ್ತಿರುವಾಗಲೇ ನೆರೆಯ ಆಂಧ್ರ ಪ್ರದೇಶದಲ್ಲಿ ಅದಕ್ಕಿಂತಲೂ ಭಯಾನಕ ಘಟನೆಯೊಂದು ಹೊರಗೆ ಬಂದಿದೆ. ಆಂಧ್ರ ಪ್ರದೇಶದಲ್ಲಿ ಈ ಹಿಂದೆ ಆಡಳಿತವಿದ್ದ ವೈಸಿಪಿ ಪಕ್ಷದ ಪ್ರಮುಖ ಮುಖಂಡನೊಬ್ಬ ಮುಂಬೈ ಮೂಲದ ನಟಿ, ಮಾಡೆಲ್ ಜೊತೆಗೆ ವೈದ್ಯೆ ಸಹ ಆಗಿರುವ ಒಬ್ಬ ಯುವತಿಗೆ ಕೊಡಬಾರದ ಹಿಂಸೆ ಕೊಟ್ಟು, ಆಕೆಯನ್ನು, ಆಕೆಯ ಕುಟುಂಬವನ್ನು ಅಪಹರಿಸಿ ಚಿತ್ರಹಿಂಸೆ ಮಾಡಿರುವ ವಿಷಯ ಇದೀಗ ಬಹಿರಂಗವಾಗಿದೆ. ಈ ಅಮಾನುಷ ಘಟನೆಯಲ್ಲಿ ಕೆಲ ಐಪಿಎಸ್ ಅಧಿಕಾರಿಗಳು ಸಹ ಭಾಗಿಯಾಗಿರುವುದು ಬಹಿರಂಗವಾಗಿದೆ.
ಆಂಧ್ರದ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕುಕ್ಕಲ ವಿದ್ಯಾ ಸಾಗರ್ ಎಂಬ ವೈಸಿಪಿ ಮುಖಂಡ ಗುಜರಾತ್ ಮೂಲದ ಕಾದಂಬರಿ ಜೇಟ್ವಾನಿ ಹಾಗೂ ಅವರ ಕುಟುಂಬವನ್ನು ಅಪಹರಿಸಿ ಕೂಡಿಹಾಕಿ ನಾನಾ ರೀತಿಯ ಚಿತ್ರಹಿಂಸೆ ನೀಡಿದ್ದಾನೆ. ನಟಿ ಹಾಗೂ ಆಕೆಯ ಕುಟುಂಬದ ಮೇಲೆ ಸುಳ್ಳು ಕೇಸು ದಾಖಲಿಸಿ, ಸುಮಾರು ಒಂದೂವರೆ ತಿಂಗಳ ಕಾಲ ನಟಿ ಹಾಗೂ ಆಕೆಯ ಕುಟುಂಬ ಜೈಲಿನಲ್ಲಿ ಕಾಲ ಕಳೆಯುವಂತೆ ಮಾಡಲಾಗಿದೆ. ಈಗ ಆಂಧ್ರದಲ್ಲಿ ಸರ್ಕಾರ ಬದಲಾದ ಬಳಿಕ ನಟಿ, ಎಲ್ಲ ವಿಷಯಗಳನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದು, ಕುಕ್ಕಲ ವಿದ್ಯಾ ಸಾಗರ್ ನ ಕೆಲ ಚಿತ್ರಗಳನ್ನು ಸಹ ತೋರಿಸಿದ್ದಾರೆ.
ವೈದ್ಯೆಯೂ ಆಗಿರುವ ಕಾದಂಬರಿ ಜೇಟ್ವಾನಿ ವಿರುದ್ಧ ಕುಕ್ಕಲ ವಿದ್ಯಾಸಾಗರ್, ಫೆಬ್ರವರಿ 2 ರಂದು ಇಬ್ರಾಹಿಂ ಪಟ್ಟಣಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಕಾದಂಬರಿ, ತನ್ನನ್ನು ಟ್ರ್ಯಾಪ್ ಮಾಡಿ, ಈಗ ನನ್ನಿಂದ ಕೋಟ್ಯಂತರ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ದೂರು ಆಧರಿಸಿ ನಟಿ ಕಾದಂಬರಿ ಹಾಗೂ ಅವರ ತಂದೆ, ತಾಯಿಯನ್ನು ಮುಂಬೈಗೆ ಹೋಗಿ ಪೊಲೀಸರು ಬಂಧಿಸಿದ್ದರು. ಸುಮಾರು ಒಂದೂವರೆ ತಿಂಗಳ ಕಾದಂಬರಿ ಹಾಗೂ ಅವರ ಕುಟುಂಬದವರೆಲ್ಲರೂ ಜೈಲಿನಲ್ಲಿ ಕಾಲ ಕಳೆದರು. ಜಾಮೀನಿನ ಮೇಲೆ ಹೊರಗೆ ಬಂದ ಬಳಿಕ ಎಲ್ಲರನ್ನೂ ಅಪಹರಣ ಮಾಡಿ ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ ಒಂದರಲ್ಲಿ ಕೂಡಿಹಾಕಿ ನಾನಾ ಹಿಂಸೆಗಳನ್ನು ಕೊಡಲಾಯ್ತಂತೆ. ಆ ವೇಳೆ ನಟಿ ಕಾದಂಬರಿಯ ತಂದೆಯ ಮೇಲೆ ಆದ ಹಲ್ಲೆಯಿಂದ ಅವರಿಗೆ ಕಿವಿ ಕೇಳಿಸದಂತಾಗಿದೆ. ಈ ವಿಷಯವನ್ನೆಲ್ಲ ನಟಿ ಮಾಧ್ಯಮದ ಮುಂದೆ ಇದೀಗ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ದರ್ಶನ್ ತೂಗುದೀಪ: ನಟನನ್ನು ಬಳ್ಳಾರಿಗೆ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಿದ್ದು ಗೊತ್ತೇ ಇಲ್ಲವೆಂದ ಗೃಹಸಚಿವ!
ಕೊಂಡಪಲ್ಲಿಯ ಸರ್ಕಾರಿ ಗೆಸ್ಟ್ ಹೌಸ್ನಲ್ಲಿ ಹಲವು ಪೊಲೀಸರು ಒಟ್ಟಾಗಿ ತಮ್ಮ ಮೇಲೆ ದೌರ್ಜನ್ಯ ಮಾಡಿದ್ದಾಗಿ, ಅತ್ಯಾಚಾರ ಯತ್ನ ಮಾಡಿರುವುದಾಗಿಯೂ ನಟಿ ಹೇಳಿಕೊಂಡಿದ್ದಾರೆ. ಅಲ್ಲದೆ ವೈಸಿಪಿ ಮುಖಂಡ ಕುಕ್ಕಲ ವಿದ್ಯಾಸಾಗರ್ ತನ್ನ ಜಮೀನು, ಮನೆಯ ನಕಲಿ ದಾಖಲೆ ಸೃಷ್ಟಿಸಿಕೊಂಡು ಮೋಸ ಮಾಡಲು ಸಹ ಯತ್ನಿಸಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಮೂವರು ಐಪಿಎಸ್ ಹಾಗೂ ಐಎಎಸ್ ಅಧಿಕಾರಿ ಸಹ ಶಾಮೀಲಾಗಿರುವ ಬಗ್ಗೆ ವಿಷಯ ಬಹಿರಂಗವಾಗಿದೆ.
ಅಂದಹಾಗೆ ನಟಿ ಕಾದಂಬರಿ ಅವರದ್ದು ವೈದ್ಯಕೀಯ ಹಿನ್ನೆಲೆಯ ಕುಟುಂಬವಾಗಿದ್ದು, ಕಾದಂಬರಿಯ ಅಜ್ಜ ಗುಜರಾತ್ನ ಜನಪ್ರಿಯ ವೈದ್ಯರು. ಅವರು ನಿವೃತ್ತರಾದಾಗ ಆಗ ಗುಜರಾತ್ನ ಸಿಎಂ ಆಗಿದ್ದ ನರೇಂದ್ರ ಮೋದಿ ಖುದ್ದಾಗಿ ಕಾದಂಬರಿಯ ತಾತನವರಿಗೆ ಪತ್ರ ಬರೆದು ಧನ್ಯವಾದ ಅರ್ಪಿಸಿದ್ದರು. ಕಾದಂಬರಿಯ ತಂದೆ, ಸಹೋದರ ಸಹ ವೈದ್ಯರೇ. ಮಾತ್ರವಲ್ಲದೆ ಕಾದಂಬರಿ ಸಹ ವೈದ್ಯೆ ಆಗಿದ್ದರು. ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಜರ್ನಲ್ಗಳನ್ನು ಸಹ ಪ್ರಕಟಿಸಿದ್ದಾರೆ. ಆದರೆ ಈಗ ಊಹಿಸದ ರೀತಿಯ ಚಿತ್ರಹಿಂಸೆಯನ್ನು ಎದುರಿಸಿದ್ದಾರೆ.
ನಟಿಯನ್ನು ಗುರಿ ಮಾಡಿಕೊಂಡಿದ್ದೇಕೆ?
ಕಾದಂಬರಿ ಈ ಹಿಂದೆ ಜಿಂದಾಲ್ ಕುಟುಂಬದ ಪ್ರಮುಖ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಆ ದೂರನ್ನು ಹಿಂಪಡೆಯುವಂತೆ ಮಾಡಲು ಜಿಂದಾಲ್ ಕುಟುಂಬದ ಪ್ರಮುಖ ವ್ಯಕ್ತಿ, ಕೆಲ ಐಎಎಸ್ ಹಾಗೂ ಐಪಿಎಸ್ಗಳ ನೆರವು ಪಡೆದಿದ್ದರು. ಅದರಂತೆ ನಟಿಯ ಮೇಲೆ ವಿದ್ಯಾಸಾಗರ್ ಮೂಲಕ ಸುಳ್ಳು ಕೇಸು ದಾಖಲಿಸಿ, ನಟಿ ಹಾಗೂ ಅವರ ಇಡೀ ಕುಟುಂಬವನ್ನು ಬಂಧಿಸಿ, ಗೆಸ್ಟ್ ಹೌಸ್ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಲಾಗಿದೆ. ವಿಶೇಷವೆಂದರೆ ಈ ಘಟನೆ ಬಳಿಕ ಜಿಂದಾಲ್ ಕುಟುಂಬದ ವ್ಯಕ್ತಿಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ಸುಳ್ಳು ಕೇಸೆಂದು ಷರಾ ಬರೆದು ಪೊಲೀಸರು ಅಧಿಕೃತವಾಗಿ ಕ್ಲೋಸ್ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ