ನಟ ನಾಗಭೂಷಣ್​ ಕಾರು ಅಪಘಾತ; ಪಾದಚಾರಿ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ

ಫುಟ್​ ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್​ ಅವರ ಕಾರು ಡಿಕ್ಕಿ ಆಗಿದೆ. ಈ ಅಪಘಾತದಲ್ಲಿ 48 ವರ್ಷದ ಪ್ರೇಮಾ ಎಸ್​. ನಿಧನರಾಗಿದ್ದಾರೆ. ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

ನಟ ನಾಗಭೂಷಣ್​ ಕಾರು ಅಪಘಾತ; ಪಾದಚಾರಿ ಸಾವು; ಇನ್ನೊಬ್ಬರ ಸ್ಥಿತಿ ಗಂಭೀರ
ನಾಗಭೂಷಣ್​ ಕಾರು ಡಿಕ್ಕಿ
Follow us
ಮದನ್​ ಕುಮಾರ್​
|

Updated on:Oct 01, 2023 | 11:17 AM

ಕನ್ನಡ ಚಿತ್ರರಂಗದಲ್ಲಿ ಪೋಷಕ ನಟನಾಗಿ ಗುರುತಿಸಿಕೊಂಡಿರುವ ನಟ ನಾಗಭೂಷಣ್​ (Nagabhushana) ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಶನಿವಾರ (ಅಕ್ಟೋಬರ್​ 30) ಕೋಣನಕುಂಟೆ ಕ್ರಾಸ್​ ಬಳಿ ಈ ಅಪಘಾತ ನಡೆದಿದೆ. ಫುಟ್​ ಪಾತ್​ ಮೇಲೆ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ನಾಗಭೂಷಣ್​ ಅವರ ಕಾರು ಡಿಕ್ಕಿ ಆಗಿದೆ. ಈ ಅಪಘಾತದಲ್ಲಿ (Road Accident) 48 ವರ್ಷದ ಪ್ರೇಮಾ​ ಎಸ್​. ನಿಧನರಾಗಿದ್ದಾರೆ. ಅವರ ಪತಿ ಕೃಷ್ಣ ಬಿ. ತೀವ್ರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮಾ ಮತ್ತು ಕೃಷ್ಣ ದಂಪತಿಯ ಪುತ್ರ ಪಾರ್ಥ ಕೆ. ಅವರು ದೂರು ನೀಡಿದ್ದಾರೆ. ಕುಮಾರಸ್ವಾಮಿ ಲೇಔಟ್​ ಸಂಚಾರ ಪೊಲೀಸ್ ಠಾಣೆಯಲ್ಲಿ ಕೇಸ್​ ದಾಖಲು (Accident Case) ಮಾಡಲಾಗಿದೆ.

ಅಪಘಾತ ನಡೆದ ಬಳಿಕ ಗಾಯಾಳುಗಳನ್ನು ನಾಗಭೂಷಣ್​ ಅವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಾರ್ಗ ಮಧ್ಯದಲ್ಲಿ ಪ್ರೇಮಾ ನಿಧನರಾಗಿದ್ದಾರೆ. ವಿಷಯ ತಿಳಿದ ಬಳಿಕ ಅವರ ಪುತ್ರ ಪಾರ್ಥ ಅವರು ಆಗಮಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಕೃಷ್ಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ನಾಗಭೂಷಣ್​ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಘಟನೆಯ ಬಗ್ಗೆ ನಾಗಭೂಷಣ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.

ನಾಗಭೂಷಣ್​ ಹೇಳಿಕೆ:

‘ಅಕ್ಟೋಬರ್​ 30ರಂದು ನಾನು ನನ್ನ ಸ್ನೇಹಿತರನ್ನು ನೋಡಲು ಆರ್.ಆರ್ ನಗರಕ್ಕೆ ಹೋಗಿ, ಸ್ನೇಹಿತರನ್ನು ಭೇಟಿ ಮಾಡಿಕೊಂಡು ವಾಪಸ್ಸು ಜೆ.ಪಿ. ನಗರದಲ್ಲಿರುವ ನಮ್ಮ ಮನೆಗೆ ಹೋಗಲು ನನ್ನ ಮಾಲೀಕತ್ವದ ಕೀಯ ಸೆಲ್ಟೋಸ್ ಕಾರ್ ನಂಬರ್ ಕೆಎ-09 ಎಂಜಿ 5335ರ ವಾಹನವನ್ನು ಚಾಲನೆ ಮಾಡಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿ ಉತ್ತರಹಳ್ಳಿ ಕಡೆಯಿಂದ ಕೋಣನಕುಂಟೆ ಕ್ರಾಸ್ ಕಡೆಗೆ ಹೋಗಲು ವಸಂತಪುರ ಮುಖ್ಯರಸ್ತೆಯ ಸುಪ್ರಭಾತ ಶ್ರೀಂ ಬ್ರೀಜ್ ಅಪಾರ್ಟ್​ಮೆಂಟ್ ಹತ್ತಿರ ರಾತ್ರಿ ಸುಮಾರು 9.45 ಗಂಟೆಯ ಸಮಯದಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಒಬ್ಬ ಹೆಂಗಸು ಮತ್ತು ಒಬ್ಬರು ಗಂಡಸು ಪುಟ್ ಪಾತ್ ಮೇಲಿಂದ ರಸ್ತೆಯ ಕೆಳಗೆ ಇಳಿದು ಬಂದರು. ಅವರು ಬಂದಿದ್ದನ್ನು ನೋಡಿ ನನಗೆ ಗಾಬರಿಯಾಗಿ ನಾನು ರಸ್ತೆಗೆ ಬಂದಿದ್ದವರಿಗೆ ಡಿಕ್ಕಿ ಮಾಡಿ ನಂತರ ಮುಂದೆ ಹೋಗಿ ಪುಟ್ ಪಾತ್ ಮೇಲೆ ಇದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಮಾಡಿದನು’ ಎಂದು ನಾಗಭೂಷಣ್​ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಟ್​ ಆ್ಯಂಡ್​ ರನ್​ ಪ್ರಕರಣದಲ್ಲಿ ತಪ್ಪು ಒಪ್ಪಿಕೊಂಡ ಹಾಸ್ಯ ನಟ ಚಂದ್ರಪ್ರಭ; ಸಿಕ್ತು ಟ್ವಿಸ್ಟ್​

‘ಪಾದಚಾರಿ ಹೆಂಗಸಿನ ತಲೆಗೆ ಮತ್ತು ಮುಖಕ್ಕೆ ಜಾಸ್ತಿ ಏಟಾಗಿ ಮಾತಾನಾಡದ ಸ್ಥಿತಿಯಲ್ಲಿದ್ದರು. ಮತ್ತೊಬ್ಬ ಪಾದಚಾರಿ ಗಂಡಸಿಗೆ ಎರಡು ಕಾಲುಗಳಿಗೆ, ಹೊಟ್ಟೆ, ಬೆನ್ನು ಮತ್ತು ತಲೆಗೆ ಗಾಯವಾಗಿ ಮಾತಾನಾಡುತ್ತಿದ್ದರು. ನಾನು ಗಾಯಾಳುಗಳನ್ನು ನನ್ನ ಕಾರಿನಲ್ಲಿ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದಾಗ ನನ್ನ ಕಾರು ಸ್ಟಾಟ್ ಆಗಲಿಲ್ಲ. ನಾನು ಕಾರಿನಿಂದ ಕೆಳಕ್ಕೆ ಇಳಿದು ಒಂದು ಆಟೋರಿಕ್ಷಾದಲ್ಲಿ ಅಲ್ಲಿದ್ದ ಜನರ ಜೊತೆ ಸೇರಿಕೊಂಡು ಗಾಯಾಳುಗಳನ್ನು ಕೂರಿಸಿಕೊಂಡು ವಸಂತಪುರ ಮುಖ್ಯರಸ್ತೆಯಲ್ಲಿರುವ ಅಸ್ಟ್ರಾ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದಾಗ ವೈದ್ಯರು ಗಾಯಾಳು ಹೆಂಗಸನ್ನು ಪರೀಕ್ಷಿಸಿದರು. ಚಿಕಿತ್ಸೆಗೆ ಬರುವ ದಾರಿಯ ಮಧ್ಯದಲ್ಲಿ ಮಹಿಳೆ ಮೃತಪಟ್ಟಿರುವುದಾಗಿ ತಿಳಿಸಿದರು’ ಎಂದು ನಾಗಭೂಷಣ್​ ಹೇಳಿಕೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:50 am, Sun, 1 October 23