‘ಕಣ್ಣಪ್ಪ’ನ ಟ್ರೋಲ್ ಮಾಡಿದರೆ ಸುಮ್ಮನಿರಲ್ಲ: ಚಿತ್ರತಂಡದ ಎಚ್ಚರಿಕೆ
Kannappa movie: ಮಂಚು ವಿಷ್ಣು ನಟಿಸಿರುವ ‘ಕಣ್ಣಪ್ಪ’ ಸಿನಿಮಾ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಇದೀಗ ಸಿನಿಮಾದ ನಿರ್ಮಾಣ ತಂಡ ಬಹಿರಂಗ ಹೇಳಿಕೆ ಬಿಡುಗಡೆ ಮಾಡಿದ್ದು, ಸಿನಿಮಾ ವಿಮರ್ಶಕರಿಗೆ, ಟ್ರೋಲರ್ಗಳಿಗೆ ಮತ್ತು ಪೈರಸಿ ಕಾಪಿ ಮಾಡುವವರಿಗೆ ಎಚ್ಚೆರಿಕೆ ನೀಡಿದ್ದಾರೆ. ‘ಕಣ್ಣಪ್ಪ’ ಸಿನಿಮಾ ಜೂನ್ 27 ರಂದು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಆಗಲಿದೆ.

ಪ್ರಭಾಸ್ (Prabhas), ಮೋಹನ್ಲಾಲ್, ಅಕ್ಷಯ್ ಕುಮಾರ್ ಅವರುಗಳು ಅತಿಥಿ ಪಾತ್ರದಲ್ಲಿ ನಟಿಸಿರುವ ಬಹು ಕೋಟಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ‘ಕಣ್ಣಪ್ಪ’ ಇನ್ನೆರಡು ದಿನಗಳಲ್ಲಿ ಬಿಡುಗಡೆ ಆಗಲಿದೆ. ಮಂಚು ವಿಷ್ಣು ನಾಯಕನಾಗಿ ನಟಿಸಿರುವ ಈ ಸಿನಿಮಾಕ್ಕೆ ಅವರ ತಂದೆ ಮೋಹನ್ ಬಾಬು ಬಂಡವಾಳ ಹೂಡಿದ್ದಾರೆ. ಭಾರಿ ದೊಡ್ಡ ಬಜೆಟ್ ನಲ್ಲಿ ಸಿನಿಮಾ ನಿರ್ಮಿಸಲಾಗಿದ್ದು, ಸಿನಿಮಾ ಅನ್ನು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಆದರೆ ಬಿಡುಗಡೆಗೆ ಎರಡು ದಿನ ಮುಂಚೆ ನಿರ್ಮಾಪಕರು, ಸಿನಿಮಾ ವಿಮರ್ಶಕರಿಗೆ, ಟ್ರೋಲ್ ಪೇಜುಗಳಿನವರಿಗೆ ಎಚ್ಚರಿಕೆ ನೀಡಿದ್ದಾರೆ.
ಮೋಹನ್ ಬಾಬು ಹಾಗೂ ಮಂಚು ವಿಷ್ಣು ಒಟ್ಟಿಗೆ 24 ಫ್ರೇಮ್ ವರ್ಕ್ಸ್ ನಿರ್ಮಾಣ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ನಿರ್ಮಾಣ ಸಂಸ್ಥೆಯ ಮೂಲಕ ಸುದೀರ್ಘ ಹೇಳಿಕೆಯೊಂದನ್ನು ಬಿಡುಗಡೆ ಮಾಡಲಾಗಿದ್ದು, ‘ನಾವು ಸಿನಿಮಾದ ಬಿಡುಗಡೆಗೆ ಅಗತ್ಯವಿರುವ ಎಲ್ಲ ಅನುಮತಿಗಳನ್ನು ಪರವಾನಗಿಗಳನ್ನು ತೆಗೆದುಕೊಂಡಿದ್ದೇವೆ. ಅದರ ಜೊತೆಗೆ ದೆಹಲಿ ಹೈಕೋರ್ಟ್, ಸಿನಿಮಾದ ನಟರಾದ ಮಂಚು ವಿಷ್ಣು ಮತ್ತು ಮೋಹನ್ ಬಾಬು ಅವರಿಗೆ ವ್ಯಕ್ತಿತ್ವ ಹಾಗೂ ಪ್ರಚಾರ ಹಕ್ಕಿನಡಿ ರಕ್ಷಣೆ ನೀಡಿದೆ. ಹಾಗೂ ಸಿನಿಮಾದ ಕತೆ ಇನ್ನಿತರೆ ಕ್ರಿಯಾಶೀಲ ವಿಚಾರಗಳಿಗೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯಗಳನ್ನು ಪಡೆದಿದ್ದೇವೆ’ ಎಂದಿದೆ.
‘ಸಿನಿಮಾ ವಿಮರ್ಶಕರು ಮೊದಲು ಸಿನಿಮಾ ನೋಡಿ, ಸಿನಿಮಾದ ವಿಷಯವನ್ನು ಗೌರವಿಸಿ, ಸಿನಿಮಾ ಮಾಡಿರುವ ಉದ್ದೇಶವನ್ನು ಅರ್ಥ ಮಾಡಿಕೊಂಡು, ಸಿನಿಮಾದ ಬಗ್ಗೆ ಗೌರವದಿಂದಲೇ ಅಭಿಪ್ರಾಯ ವ್ಯಕ್ತಪಡಿಸಬೇಕು, ಅದರ ಹೊರತಾಗಿ ಸಿನಿಮಾದ ಬಗ್ಗೆ ನಿಂದನೆ, ಹೀಗಳಿಕೆ ಅಥವಾ ದುರುದ್ದೇಶಪೂರಿತವಾಗಿ ನೆಗೆಟಿವ್ ವಿಮರ್ಶೆಗಳನ್ನು ನೀಡುವುದನ್ನು ಸಹಿಸುವುದಿಲ್ಲ’ ಎಂದು ವಿಮರ್ಶಕರಿಗೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ:ಬಿಡುಗಡೆಗೂ ಮುನ್ನವೇ ‘ಕಣ್ಣಪ್ಪ’ ಸಿನಿಮಾ ನೋಡಿ ಭೇಷ್ ಎಂದ ರಜನಿಕಾಂತ್
ಮುಂದುವರೆದು, ‘ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಾವು ಗೌರವಿಸುತ್ತೇವೆ. ಆದರೆ ದುರುದ್ದೇಶಪೂರಿತ, ನಿಂದನೆಗಳನ್ನು ಸಹಿಸಲಾಗದು. ಕೇರಳ ಹೈಕೋರ್ಟ್ ನೀಡಿರುವ ಇತ್ತೀಚೆಗಿನ ಆದೇಶದಂತೆ ಯಾವುದೇ ಕ್ರಿಯಾತ್ಮಕ ಕಲೆಯ ವಿರುದ್ಧ ಉದ್ದೇಶಪೂರ್ವಕವಾಗಿ ಟೀಕೆ ಮಾಡುವುದು, ಹೀಗಳೆಯುವುದು ಅಪರಾಧವಾಗಿದೆ’ ಎಂದಿದ್ದಾರೆ. ಅಲ್ಲದೆ, ಸಿನಿಮಾದ ಚಿತ್ರಗಳನ್ನು, ವಿಡಿಯೋಗಳನ್ನು, ಪೂರ್ಣ ಸಿನಿಮಾವನ್ನು ಸಾಮಾಜಿಕ ಜಾಲತಾಣ ಅಥವಾ ಯಾವುದೇ ಆನ್ಲೈನ್ ವೇದಿಕೆಗಳಲ್ಲಿ ಪ್ರದರ್ಶಿಸುವುದನ್ನು ನಿರ್ಬಂಧಿಸಲಾಗಿದ್ದು ಹಾಗೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.
‘ಕಣ್ಣಪ್ಪ’ ಸಿನಿಮಾವು ಬೇಡರ ಕಣ್ಣಪ್ಪನ ಕತೆಯಾಗಿದ್ದು, ಸಿನಿಮಾನಲ್ಲಿ ಮಂಚು ವಿಷ್ಣು ಬೇಡರ ಕಣ್ಣಪ್ಪನ ಪಾತ್ರದಲ್ಲಿ ನಟಿಸಿದ್ದಾರೆ. ಅಕ್ಷಯ್ ಕುಮಾರ್, ಶಿವನ ಪಾತ್ರದಲ್ಲಿ, ಪ್ರಭಾಸ್ ಶಿವಗಣ ಸದಸ್ಯನ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಮೋಹನ್ಲಾಲ್, ಮೋಹನ್ ಬಾಬು, ಕಾಜೊಲ್ ಅಗರ್ವಾಲ್ ಅವರುಗಳ ಅತಿಥಿ ಪಾತ್ರಗಳು ಇವೆ. ಸಿನಿಮಾದ ನಾಯಕಿಯಾಗಿ ಪ್ರೀತಿ ಮುಕುಂದನ್ ನಟಿಸಿದ್ದಾರೆ. ಬ್ರಹ್ಮಾನಂದಂ, ದೇವರಾಜ್ ಇನ್ನೂ ಕೆಲವು ಹಿರಿಯ ಕಲಾವಿದರು ಸಿನಿಮಾನಲ್ಲಿದ್ದಾರೆ. ಸಿನಿಮಾ ಅನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




