ಸಿಂಗಲ್ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್ ಟಿಕೆಟ್ ದರದಲ್ಲಿ (Cinema Ticket Price) ಭಾರೀ ವ್ಯತ್ಯಾಸ ಇದೆ. ಅದರಲ್ಲೂ ಪರಭಾಷೆಯ ಸಿನಿಮಾಗಳು ಬಂದರೆ ಮಲ್ಟಿಪ್ಲೆಕ್ಸ್ಗಳು ಜನರಿಂದ ದೊಡ್ಡ ಮೊತ್ತದ ಹಣವನ್ನು ಲೂಟಿ ಮಾಡುತ್ತಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವ ಸೂಚನೆ ಕೊಟ್ಟಿದೆ. ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಥಿಯೇಟರ್ಗೆ ಒಂದೇ ರೀತಿಯ ದರ ನಿಗದಿ ಮಾಡುವ ಬಗ್ಗೆ ಆಲೋಚನೆ ಮಾಡಿದೆ. ಪರಿಷತ್ ಕಲಾಪದಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು, ಸರ್ಕಾರದ ಕಡೆಯಿಂದ ಪ್ರತಿಕ್ರಿಯೆ ಬಂದಿದೆ.
ಪರಿಷತ್ ಕಲಾಪದಲ್ಲಿ ಎಂಎಲ್ಸಿ ಗೋವಿಂದ ರಾಜು ಏಕ ರೂಪದ ದರ ವಿಚಾರವನ್ನು ಸರ್ಕಾರದ ಮುಂದೆ ಪ್ರಸ್ತಾಪ ಮಾಡಿದರು. ‘ಚಿತ್ರ ಮಂದಿರಗಳಲ್ಲಿ ಒಂದೊಂದು ಸಿನಿಮಾಗೆ ಒಂದೊಂದು ದರ ನಿಗದಿ ಮಾಡಲಾಗುತ್ತಿದೆ. ಕನ್ನಡ ಸಿನಿಮಾಗೆ ಒಂದು ದರ, ಅನ್ಯಭಾಷೆ ಸಿನಿಮಾಗೆ ಇನ್ನೊಂದು ದರ ನಿಗದಿ ಮಾಡಲಾಗುತ್ತಿದೆ. ಕನ್ನಡಕ್ಕೆ ಬಹಳ ಕಡಿಮೆ, ಆದರೆ ಬೇರೆ ಭಾಷೆಯ ಚಿತ್ರಗಳಿಗೆ 500 ರೂಪಾಯಿಯಿಂದ 1000 ರೂಪಾಯಿವರೆಗೆ ವಸೂಲಿ ಮಾಡುತ್ತಾರೆ. ಸರ್ಕಾರದ ಪರಿಮಿತಿಯಲ್ಲೇ ದರ ನಿಯಂತ್ರಣ ಇದ್ದರೂ ನಿಯಂತ್ರಣ ಮಾಡುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು.
2017ರ ಬಜೆಟ್ನಲ್ಲಿ ಸಿದ್ದರಾಮಯ್ಯ ಅವರು 200 ರೂಪಾಯಿ ದರ ನಿಗದಿ ಮಾಡುತ್ತೇವೆ ಎಂದಿದ್ದರು. ಅದೂ ಜಾರಿಗೆ ಬಂದಿಲ್ಲ. ಇದಕ್ಕೆ ಗೃಹ ಸಚಿವ ಪರಮೇಶ್ವರ್ ಉತ್ತರಿಸಿದ್ದಾರೆ. ‘ಚಿತ್ರ ಮಂದಿರದಲ್ಲಿ ಮಾಲೀಕರೇ ಟಿಕೆಟ್ ದರ ನಿಗದಿ ಮಾಡುವ ಪದ್ಧತಿ ಇದೆ. ಸಿದ್ದರಾಮಯ್ಯ 2017ರ ಬಜೆಟ್ನಲ್ಲಿ ಏಕರೂಪ ದರ ಪ್ರಸ್ತಾಪ ಮಾಡಿ ಆದೇಶ ಜಾರಿ ಮಾಡಿದ್ದರು. ನೀವು ಹೇಳಿದಂತೆ 200 ರೂಪಾಯಿ ದರ ನಿಗದಿ ಮಾಡಲಾಗಿತ್ತು. ಆದೇಶ ಮಾಡಿದ ಮೇಲೆ ಥಿಯೇಟರ್ ಮಾಲೀಕರು ಸ್ಟೇ ತಂದಿದ್ದಾರೆ. ಸ್ಟೇ ತಂದ ಮೇಲೆ ಸರ್ಕಾರ ಆ ಆದೇಶವನ್ನು ವಾಪಸ್ ಪಡೆದಿದೆ’ ಎಂದರು ಪರಮೇಶ್ವರ್.
ಇದನ್ನೂ ಓದಿ: ‘ಸಿಂಗಂ ಅಗೇನ್’ ಚಿತ್ರಕ್ಕೆ ಮಲ್ಟಿಪ್ಲೆಕ್ಸ್ನಲ್ಲಿ ಸಿಂಹಪಾಲು; ಉಳಿದ ಸಿನಿಮಾಗಳಿಗೆ ಸಂಕಷ್ಟ
‘ಕೇವಲ ಸಿನಿಮಾ ಟಿಕೆಟ್ ದರ ಮಾತ್ರವಲ್ಲದೆ, ವೀಕ್ಷಣೆಗೆ ತೆರಳಿದ ವೇಳೆ ಪಾಪ್ ಕಾರ್ನ್, ವಾಟರ್ ಬಾಟಲ್ಗೂ ನೂರಿನ್ನೂರು ರೂಪಾಯಿ ದರ ವಿಧಿಸಿ ತೊಂದರೆ ಕೊಡ್ತಾರೆ. ಇಷ್ಟ ಬಂದ ರೇಟ್ನಲ್ಲಿ ಮಾರಾಟ ಮಾಡ್ತಿರೋದ್ರಿಂದ ಗ್ರಾಹಕರಿಗೆ ಸಮಸ್ಯೆ ಆಗ್ತಿದೆ’ ಎಂದು ಗೋವಿಂದ ರಾಜು ಹೇಳಿದರು. ಆಗ ಪ್ರತಿಕ್ರಿಯಿಸಿದ ಡಾ.ಜಿ ಪರಮೇಶ್ವರ್, ‘ಅದನ್ನು ರೆಗ್ಯುಲೇಟ್ ಮಾಡಲು ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:32 am, Fri, 7 March 25