Kichcha Sudeep: ‘ಬಿಗ್ ಬಾಸ್ ಕನ್ನಡ ಸೀಸನ್ 12’ರ ನಿರೂಪಣೆ ಬಗ್ಗೆ ನಿಲುವು ತಿಳಿಸಿದ ಸುದೀಪ್
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 11 ರ ನಂತರ ಕಿಚ್ಚ ಸುದೀಪ್ ಅವರು ನಿರೂಪಣೆಯಿಂದ ಹಿಂದೆ ಸರಿದಿದ್ದರು. ಆದರೆ, 12ನೇ ಸೀಸನ್‌ಗೆ ಅವರು ಮರಳುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಸುದೀಪ್ ಅವರು ಕೆಲವು ಷರತ್ತುಗಳನ್ನು ವಿಧಿಸಿದ್ದಾರೆ ಎಂಬ ವದಂತಿಗಳಿವೆ. ಇತ್ತೀಚಿನ ಸಂದರ್ಶನದಲ್ಲಿ, ಈ ವಿಷಯದ ಬಗ್ಗೆ ಅವರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಮಧ್ಯದಲ್ಲೇ ತಾವು ‘ಬಿಗ್ ಬಾಸ್’ ನಡೆಸಿಕೊಡೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದರು. ಕೇವಲ ಒಂದು ಬಾರಿಯಲ್ಲ ಎರಡೆರಡು ಬಾರಿ ಟ್ವೀಟ್ ಮಾಡಿ ಈ ಮಾತುಗಳನ್ನು ಹೇಳಿದ್ದರು. ಈಗ ಬಿಗ್ ಬಾಸ್ 12ನೇ ಸೀಸನ್ ಆರಂಭಕ್ಕೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ. ಸುದೀಪ್ ಮತ್ತೆ ನಿರೂಪಣೆ ಮಾಡುತ್ತಾರೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಅವರು ಮಾಡೋದಿಲ್ಲ ಎನ್ನುತ್ತಿದ್ದಾರೆ. ಈ ಮಧ್ಯೆ ಸುದೀಪ್ (Kichcha Sudeep) ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ಸುದೀಪ್ ವಾಹಿನಿಯ ಮುಂದೆ ಒಂದಷ್ಟು ಷರತ್ತುಗಳನ್ನು ಇಟ್ಟಿದ್ದು, ಈ ಷರತ್ತು ಪೂರೈಸಿದರೆ ಮತ್ತೆ ನಿರೂಪಣೆ ಮಾಡಲು ಅವರು ಸಿದ್ಧ ಎಂದು ವರದಿ ಆಗಿತ್ತು. ಈ ಅಂತೆಕಂತೆ ಚರ್ಚೆಯಲ್ಲಿರುವಾಗಲೇ ಕೆಲವರು, ‘ಸುದೀಪ್ ತಮ್ಮ ಮಾತಿಗೆ ಬದ್ಧರಾಗಿರಬೇಕು’ ಎಂದು ಹೇಳಿದ್ದು ಇದೆ. ಇನ್ನೂ ಕೆಲವರು ಸುದೀಪ್ ಅವರನ್ನು ಮತ್ತೆ ನಿರೂಪಣೆಯ ಸ್ಥಾನದಲ್ಲಿ ನೋಡಲು ಇಚ್ಛಿಸುತ್ತಿದ್ದಾರೆ. ಈಗ ಸುದೀಪ್ ಅವರೇ ಈ ಬಗ್ಗೆ ಮಾತನಾಡಿದ್ದಾರೆ.
ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಸುದೀಪ್ ಅವರು ಈ ಬಗ್ಗೆ ಮಾತನಾಡಿದ್ದು, ಇದು ಮಾತನಾಡಲು ಸೂಕ್ತ ವೇದಿಕೆ ಅಲ್ಲ ಎಂದಿದ್ದಾರೆ. ಅಲ್ಲದೆ, ಅವರು ಆ ಬಗ್ಗೆ ಮಾತನಾಡಿದರೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತಾರಂತೆ. ಆಗ ಆರಂಭ ಹಾಗೂ ಅಂತ್ಯ ಎರಡೂ ಸಿಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ ಈ ಬಾರಿಯ ಬಿಗ್ ಬಾಸ್ಗೆ ಪಡೆಯೋ ಸಂಭಾವನೆ ಇಷ್ಟೊಂದಾ?
ಬಿಗ್ ಬಾಸ್ನಲ್ಲಿ ಕನ್ನಡದ ಬದಲು ಬೇರೆ ಭಾಷೆ ಬಳಕೆ ಆದರೆ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು..’ ಎಂದು ಹಾಡು ಹಾಕುತ್ತಿದ್ದರು. ಆದರೆ, ಸೀಸನ್ 11ರಲ್ಲಿ ಅದು ಮಾಯವಾಗಿತ್ತು. ‘ಶೋನಲ್ಲಿ ಕನ್ನಡ ಬಳಕೆ ಆಗಲೇಬೇಕು ಎಂದು ಸುದೀಪ್ ಕಂಡೀಷನ್ ಹಾಕಿದ್ದರು ಮತ್ತು ಒಪ್ಪದಿದ್ದಾಗ ಶೋನಿಂದ ಹೊರ ಬರಲು ನಿರ್ಧರಿಸಿದರು’ ಎಂಬ ಸುದ್ದಿಯೂ ಇದೆ. ಇದನ್ನು ಸುದೀಪ್ ಒಪ್ಪಲೂ ಇಲ್ಲ, ತಳ್ಳಿ ಹಾಕಿಯೂ ಇಲ್ಲ. ಇದರಲ್ಲಿ ಕೆಲವು ಸತ್ಯ ಎಂದಿರುವ ಅವರು, ಕೆಲವು ವಾಸ್ತವಕ್ಕೆ ದೂರ ಎಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:50 am, Fri, 20 June 25