Kalki 2898: ಮುಖ ತೋರಿಸದೆಯೂ ಗಮನ ಸೆಳೆದ ‘ಕಲ್ಕಿ’ಯ ಕೃಷ್ಣ, ಯಾರು ಈ ಯುವನಟ?

ಪ್ರಭಾಸ್ ನಟಿಸಿರುವ ‘ಕಲ್ಕಿ 2898 ಎಡಿ’ ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದೆ. ಸಿನಿಮಾದಲ್ಲಿ ತೋರಿಸಲಾಗಿರುವ ಕುರುಕ್ಷೇತ್ರದ ದೃಶ್ಯಗಳಿಗೆ ಭಾರಿ ಪ್ರಶಂಸೆ ದೊರೆತಿದೆ. ಆದರೆ ಆ ದೃಶ್ಯಗಳಲ್ಲಿ ಕೃಷ್ಣನ ಮುಖ ಏಕೆ ತೋರಿಸಿಲ್ಲ ಎಂಬ ಚರ್ಚೆ ಶುರುವಾಗಿದೆ. ಜೊತೆಗೆ ಮುಖ ತೋರಿಸದಿದ್ದರೂ ಗಮನ ಸೆಳೆದಿರುವ ಆ ಕೃಷ್ಣ ಪಾತ್ರಧಾರಿ ಯಾರು ಎಂಬ ಹುಡುಕಾಟವೂ ಆರಂಭವಾಗಿದೆ. ಉತ್ತರ ಇಲ್ಲಿದೆ.

Kalki 2898: ಮುಖ ತೋರಿಸದೆಯೂ ಗಮನ ಸೆಳೆದ ‘ಕಲ್ಕಿ’ಯ ಕೃಷ್ಣ, ಯಾರು ಈ ಯುವನಟ?
ಕಲ್ಕಿ ಸಿನಿಮಾದ ಕೃಷ್ಣ ಪಾತ್ರಧಾರಿ
Follow us
|

Updated on:Jun 28, 2024 | 10:09 AM

ಕಲ್ಕಿ 2898 ಎಡಿ’ (Kalki 2898 AD) ಸಿನಿಮಾ ನಿನ್ನೆಯಷ್ಟೆ ಬಿಡುಗಡೆ ಆಗಿದ್ದು ಮೊದಲ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ. ಕಲೆಕ್ಷನ್ ವಿಷಯದಲ್ಲಿ ಮಾತ್ರವೇ ಅಲ್ಲದೆ ಕಂಟೆಂಟ್ ವಿಚಾರವಾಗಿ, ಮೇಕಿಂಗ್, ಕಲಾವಿದರ ನಟನೆ, ಕುರುಕ್ಷೇತ್ರದ ಯುದ್ಧಗಳನ್ನು ತೋರಿಸಿರುವ ರೀತಿ ಎಲ್ಲದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಕುರುಕ್ಷೇತ್ರದ ದೃಶ್ಯಗಳನ್ನು ನಾಗ್ ಅಶ್ವಿನ್ ಕಟ್ಟಿಕೊಟ್ಟಿರುವ ರೀತಿಗೆ ಜನ ಭೇಷ್ ಎಂದಿದ್ದಾರೆ. ಕುರುಕ್ಷೇತ್ರದ ದೃಶ್ಯಗಳಲ್ಲಿ ಮುಖ್ಯವಾಗಿ ಗಮನ ಸೆಳೆಯುವುದು ಭಗವಾನ್ ಕೃಷ್ಣನ ಪಾತ್ರ. ವಿಶೇಷವೆಂದರೆ ಕುರುಕ್ಷೇತ್ರದ ದೃಶ್ಯಗಳಲ್ಲಿ ಎಲ್ಲರ ಮುಖಗಳನ್ನು ನಾಗ್ ಅಶ್ವಿನ್ ತೋರಿಸಿದ್ದಾರೆ ಆದರೆ ಕೃಷ್ಣನ ಮುಖ ದರ್ಶನ ಮಾಡಿಸಿಲ್ಲ. ಆದರೂ ಸಹ ಕೃಷ್ಣನ ಪಾತ್ರಧಾರಿ ತನ್ನ ಆಂಗಿಕ ಅಭಿನಯ, ಧ್ವನಿಯ ಏರಿಳಿತ, ದೇಹದ ಕಟ್ಟುಮಸ್ತುತನ, ನಿಲುವಿನಿಂದಲೇ ಗಮನ ಸೆಳೆದಿದ್ದಾನೆ. ಅಂದಹಾಗೆ ಯಾರು ಈ ನಟ?

‘ಕಲ್ಕಿ’ ಸಿನಿಮಾದಲ್ಲಿ ಕೆಲವು ಬಾರಿ ಕುರುಕ್ಷೇತ್ರದ ದೃಶ್ಯಗಳು ತೋರಿಸಲಾಗಿದೆ. ಅರ್ಜುನ, ಅಶ್ವತ್ಥಾಮ, ಕರ್ಣ ಎಲ್ಲರ ಮುಖವನ್ನು ತೋರಿಸಲಾಗಿದೆ ಆದರೆ ಸಿನಿಮಾದ ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಕಾಣಿಸಿಕೊಳ್ಳುವ ಹಾಗೂ ಕತೆಗೆ ಮುಖ್ಯ ತಿರುವು ನೀಡುವ ಕೃಷ್ಣನ ಮುಖವನ್ನು ಮಾತ್ರ ತೋರಿಸಲಾಗಿಲ್ಲ. ಅಂದಹಾಗೆ ಕೃಷ್ಣನ ಪಾತ್ರದಲ್ಲಿ ನಟಿಸಿರುವುದು ಯುವನಟ ಕೃಷ್ಣ ಕುಮಾರ್. ಹೌದು, ಕೃಷ್ಣನ ಪಾತ್ರದಲ್ಲಿ ನಟಿಸಿರುವ ನಟನ ಹೆಸರೂ ಸಹ ಕೃಷ್ಣನೇ ಆಗಿದೆ.

ಕೃಷ್ಣ ಕುಮಾರ್, ತಮಿಳು ಮೂಲದ ನಟ, ತಮಿಳಿನ ಸೂಪರ್ ಹಿಟ್ ಸಿನಿಮಾ ‘ಸೂರರೈ ಪೊಟ್ರು’ನಲ್ಲಿ ಸೂರ್ಯನ ಗೆಳೆಯನ ಮಾತ್ರದಲ್ಲಿ ಕೃಷ್ಣ ಕುಮಾರ್ ನಟಿಸಿದ್ದಾರೆ. ಧನುಶ್ ನಟಿಸಿರುವ ‘ಮಾರನ್’ ಸಿನಿಮಾದಲ್ಲಿಯೂ ಸಹ ಧನುಶ್​ರ ಆಪ್ತ ಗೆಳೆಯನ ಪಾತ್ರದಲ್ಲಿ ಕೃಷ್ಣ ಕುಮಾರ್ ನಟಿಸಿದ್ದಾರೆ. ಇವು ಮಾತ್ರವೇ ಅಲ್ಲದೆ ತಮಿಳು ರಂಗಭೂಮಿಯಲ್ಲಿಯೂ ಕೃಷ್ಣ ಕುಮಾರ್ ಕೆಲಸ ಮಾಡಿದ್ದಾರೆ. ಕೆಲವು ಪ್ಲೇಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.

ಇದನ್ನೂ ಓದಿ:‘ಸೂಪರ್​ ಆಗಿದೆ’: ಬೆಂಗಳೂರಿನಲ್ಲಿ ‘ಕಲ್ಕಿ 2898 ಎಡಿ’ ನೋಡಿ ಕನ್ನಡಿಗರು ಖುಷ್

ಕೃಷ್ಣ ಕುಮಾರ್, ತಾವು ‘ಕಲ್ಕಿ’ ಸಿನಿಮಾನಲ್ಲಿ ಕೃಷ್ಣನ ಪಾತ್ರದಲ್ಲಿ ನಟಿಸಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿಕೊಂಡಿದ್ದರು, ಅಲ್ಲದೆ ಅಂಥಹಾ ಮಹಾನ್ ಪಾತ್ರದಲ್ಲಿ ನಟಿಸಲು ಅವಕಾಶ ದೊರೆತ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು. ಆದರೆ ಅವರ ಮುಖ ಸಿನಿಮಾದಲ್ಲಿ ಕಾಣುವುದಿಲ್ಲ ಆದರೂ ಆಂಗಿಕ ಅಭಿನಯ, ನಿಂತುಕೊಳ್ಳುವ ರೀತಿ, ಚಲಿಸುವ ರೀತಿಯಿಂದಲೇ ಕೃಷ್ಣ ಕುಮಾರ್ ಗಮನ ಸೆಳೆದಿದ್ದಾರೆ. ಕೃಷ್ಣ ಪಾತ್ರದ ಧ್ವನಿಯೂ ಅದ್ಭುತವಾಗಿದೆ ಆದರೆ ಪಾತ್ರಕ್ಕೆ ಧ್ವನಿ ನೀಡಿರುವುದು ಜನಪ್ರಿಯ ಡಬ್ಬಿಂಗ್ ಕಲಾವಿದ ಅರ್ಜುನ್ ದಾಸ್, ‘ವಿಕ್ರಂ’ ಸಿನಿಮಾನಲ್ಲಿ ಸೂರ್ಯರ ರೋಲೆಕ್ಸ್ ಪಾತ್ರಕ್ಕೆ ಇವರೇ ತೆಲುಗಿನಲ್ಲಿ ಡಬ್ಬಿಂಗ್ ಮಾಡಿದ್ದರು.

ಎಲ್ಲರ ಮುಖ ತೋರಿಸಿ ಕೃಷ್ಣನ ಮುಖವನ್ನು ಪಾತ್ರವೇ ಏಕೆ ತೋರಿಸಲಿಲ್ಲ ಎಂಬುದು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಕೆರಳಿಸಿದೆ. ಸಿನಿಮಾದ ಎರಡನೇ ಭಾಗದಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂಬ ನಿರೀಕ್ಷೆ ಸಿನಿಮಾ ಪ್ರೇಮಿಗಳದ್ದು, ಇನ್ನೊಂದು ವಾದವೆಂದರೆ ಕೃಷ್ಣನ ಪಾತ್ರಕ್ಕೆ ತೆಲುಗು ಚಿತ್ರರಂಗದ ದಂತಕತೆ ಎನ್​ಟಿಆರ್ ಮುಖವನ್ನು ಬಳಸಲು ನಿರ್ಧರಿಸಿರುವ ಕಾರಣ ಈಗ ಮುಖ ತೋರಿಸಿಲ್ಲ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:07 am, Fri, 28 June 24

ತಾಜಾ ಸುದ್ದಿ