ಮೂರು ದಿನಕ್ಕೆ 10 ಕೋಟಿ ರೂ. ಗಳಿಸಿಲ್ಲ ‘ಲಾಲ್ ಸಲಾಂ’; ಸಂಕಷ್ಟದಲ್ಲಿ ರಜನಿಕಾಂತ್ ಸಿನಿಮಾ
ಕೇವಲ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ‘ಲಾಲ್ ಸಲಾಂ’ ರಿಲೀಸ್ ಆಗಿದೆ. ಆದರೆ, ಅಲ್ಲಿ ಈ ಚಿತ್ರವನ್ನು ಜನರು ನೋಡುತ್ತಿಲ್ಲ. ಈ ಕಾರಣದಿಂದಲೇ ಅನೇಕ ಕಡೆಗಳಲ್ಲಿ ಶೋ ರದ್ದು ಮಾಡಲಾಗಿದೆ. ಸಿನಿಮಾ ನೋಡಲು ಬಂದ ಕೆಲವೇ ಕೆಲವು ಜನರಿಗೆ ಟಿಕೆಟ್ ಹಣ ಹಿಂದಿರುಗಿಸಲಾಗಿದೆ.

ರಜನಿಕಾಂತ್ (Rajnikanth) ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತವೆ. ಅವರ ನಟನೆಯ ‘ಜೈಲರ್’ ಚಿತ್ರ 600 ಕೋಟಿ ರೂಪಾಯಿ ಬಾಚಿಕೊಂಡಿದ್ದೇ ಇದಕ್ಕೆ ಉತ್ತಮ ಉದಾಹರಣೆ. 2023 ಅವರಿಗೆ ಆಶಾದಾಯಕವಾಗಿತ್ತು. ಈಗ 2024ರ ಆರಂಭದಲ್ಲೇ ಅವರಿಗೆ ಹಿನ್ನಡೆ ಆಗಿದೆ. ಅವರ ನಟನೆಯ ‘ಲಾಲ್ ಸಲಾಂ’ ಸಿನಿಮಾ ಕಳಪೆ ಕಲೆಕ್ಷನ್ ಮಾಡುತ್ತಿದೆ. ಮೂರು ದಿನಕ್ಕೆ ಈ ಚಿತ್ರ 10 ಕೋಟಿ ರೂಪಾಯಿ ಗಳಿಕೆ ಮಾಡಲು ಒದ್ದಾಡಿದೆ. ಭಾನುವಾರ ಕೂಡ ಚಿತ್ರಕ್ಕೆ ದೊಡ್ಡ ಮಟ್ಟದ ಗಳಿಕೆ ಆಗಿಲ್ಲ ಅನ್ನೋದು ಬೇಸರದ ವಿಚಾರ.
ಸಾಮಾನ್ಯವಾಗಿ ಯಾವುದೇ ಸ್ಟಾರ್ ಹೀರೋ ಸಿನಿಮಾ ರಿಲೀಸ್ ಆದಾಗ ವಾರದ ದಿನಗಳಲ್ಲಿ ಕಡಿಮೆ ಗಳಿಕೆ ಆದರೂ ವಾರಾಂತ್ಯಕ್ಕೆ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತವೆ. ‘ಲಾಲ್ ಸಲಾಂ’ ಚಿತ್ರದ ವಿಚಾರದಲ್ಲಿ ಹಾಗೆ ಆಗುತ್ತಿಲ್ಲ. ಈ ಸಿನಿಮಾ ಮೊದಲ ದಿನ ಅಂದರೆ ಡಿಸೆಂಬರ್ 9ರಂದು 3.55 ಕೋಟಿ ರೂಪಾಯಿ ಬಾಚಿಕೊಂಡಿತು. ಶನಿವಾರ (ಫೆಬ್ರವರಿ 10) ಈ ಚಿತ್ರದ ಗಳಿಕೆ ಮತ್ತಷ್ಟು ಕಡಿಮೆ ಆಯಿತು. ಈ ಚಿತ್ರ ಶನಿವಾರ ಬಾಚಿಕೊಂಡಿದ್ದು ಕೇವಲ 3.25 ಕೋಟಿ ರೂಪಾಯಿ ಮಾತ್ರ. ಮೂರನೇ ದಿನವಾದ ಭಾನುವಾರ (ಫೆಬ್ರವರಿ 12) ಈ ಚಿತ್ರ 3 ಕೋಟಿ ರೂಪಾಯಿ ಅಷ್ಟೇ ಗಳಿಕೆ ಮಾಡಲು ಶಕ್ತವಾಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ 9.70 ಕೋಟಿ ರೂಪಾಯಿ ಆಗಿದೆ.
ಕೇವಲ ತಮಿಳು ಮಾತ್ರವಲ್ಲದೆ ತೆಲುಗು ಭಾಷೆಯಲ್ಲೂ ‘ಲಾಲ್ ಸಲಾಂ’ ರಿಲೀಸ್ ಆಗಿದೆ. ಆದರೆ, ಅಲ್ಲಿ ಈ ಚಿತ್ರವನ್ನು ಜನರು ನೋಡುತ್ತಿಲ್ಲ. ಈ ಕಾರಣದಿಂದಲೇ ಅನೇಕ ಕಡೆಗಳಲ್ಲಿ ಶೋ ರದ್ದು ಮಾಡಲಾಗಿದೆ. ಸಿನಿಮಾ ನೋಡಲು ಬಂದ ಕೆಲವೇ ಕೆಲವು ಜನರಿಗೆ ಟಿಕೆಟ್ ಹಣ ಹಿಂದಿರುಗಿಸಲಾಗಿದೆ. ಈ ಚಿತ್ರ ಮೂರು ದಿನಕ್ಕೆ 10 ಕೋಟಿ ರೂಪಾಯಿ ಬಾಚಿಕೊಳ್ಳದೇ ಇರುವುದನ್ನು ನೋಡಿದರೆ ಈ ಚಿತ್ರದ ಸ್ಥಿತಿ ಮುಂದಿನ ದಿನಗಳಲ್ಲಿ ಮತ್ತಷ್ಟು ಹೀನಾಯ ಆಗಲಿದೆ.
ಇದನ್ನೂ ಓದಿ: ‘ಲಾಲ್ ಸಲಾಂ’ ಸೋಲಿನ ನಡುವೆ ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನೀಡಿದ ರಜನಿಕಾಂತ್
‘ಲಾಲ್ ಸಲಾಂ’ ಚಿತ್ರದಲ್ಲಿ ರಜನಿಕಾಂತ್ ಅವರದ್ದು ಅತಿಥಿ ಪಾತ್ರವಾದರೂ ಸುಮಾರು 40 ನಿಮಿಷ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರು 40 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಈ ಚಿತ್ರದಲ್ಲಿ ವಿಷ್ಣು ವಿಶಾಲ್, ವಿಕ್ರಾಂತ್ ಮೊದಲಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಧಾರ್ಮಿಕ ಭಾವೈಕ್ಯತೆ ಬಗ್ಗೆ ಇದೆ. ರಜನಿಕಾಂತ್ ಅವರು ಮೊಯಿದೀನ್ ಭಾಯ್ ಪಾತ್ರ ಮಾಡಿದ್ದಾರೆ. ಜೀವಿತಾ ಅವರು ಮೊಯಿದೀನ್ ಸಹೋದರಿಯ ಪಾತ್ರ ಮಾಡಿದ್ದಾರೆ. ರಜನಿಕಾಂತ್ ಮಗಳು ಐಶ್ವರ್ಯಾ ರಜನಿಕಾಂತ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಲೈಕಾ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ಈ ಚಿತ್ರಕ್ಕಾಗಿ ರಜನಿಕಾಂತ್ ದೊಡ್ಡ ಮೊತ್ತದ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ