ವಿವಾದ ಸೃಷ್ಟಿಸಿರುವ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಲುಕ್‌ಔಟ್ ನೋಟಿಸ್
ಮಧ್ಯಪ್ರದೇಶ ಪೊಲೀಸರು ಚಲನಚಿತ್ರ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದ್ದಾರೆ. ಐಪಿಸಿ ಸೆಕ್ಷನ್ 295 ಎ (ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು) ಅಡಿಯಲ್ಲಿ ಚಲನಚಿತ್ರ ನಿರ್ಮಾಪಕರ ವಿರುದ್ಧ ಬುಧವಾರ ಭೋಪಾಲ್‌ನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಕಾಳಿ (Kali God) ದೇವತೆ ಸಿಗರೇಟ್ ಸೇದುತ್ತಿರುವ ಪೋಸ್ಟರ್ ಹಂಚಿಕೊಳ್ಳುವ ಮೂಲಕ ನಿರ್ದೇಶಕಿ ಲೀನಾ ಮಣಿಮೇಕಲೈ (Leena Manimekalai ) ಅವರು ಸಾಕಷ್ಟು ವಿವಾದ ಸೃಷ್ಟಿ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರ ಬಂಧನಕ್ಕೆ ಆಗ್ರಹಗಳು ಕೇಳಿ ಬರುತ್ತಿವೆ. ಈ ಮಧ್ಯೆ ಅವರ ವಿರುದ್ಧ ಮಧ್ಯಪ್ರದೇಶ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ರಾಜ್ಯ ಗೃಹ ಸಚಿವಾಲಯದ ಆದೇಶದ ಮೇರೆಗೆ ಲುಕೌಟ್ ನೋಟಿಸ್ ಜಾರಿ ಆಗಿದೆ.
ಲೀನಾ ಮಣಿಮೇಕಲೈ ಅವರು ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಅದರ ಮೂಲಕ ಹಲವು ಪ್ರಯೋಗಗಳನ್ನು ಅವರು ಮಾಡಿದ್ದಾರೆ. ಅನೇಕ ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿ ಅವರು ಗುರುತಿಸಿಕೊಂಡಿದ್ದಾರೆ. ಹಲವಾರು ಚಿತ್ರೋತ್ಸವಗಳಲ್ಲಿ ಅವರ ಡಾಕ್ಯುಮೆಂಟರಿಗಳು ಪ್ರದರ್ಶನ ಆಗಿದ್ದೂ ಅಲ್ಲದೇ ಒಂದಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿವೆ. ಈಗ ‘ಕಾಳಿ’ ಡಾಕ್ಯುಮೆಂಟರಿ ಮೂಲಕ ಅವರು ವಿವಾದ ಎಬ್ಬಿಸಿದ್ದಾರೆ.
ಜುಲೈ 4ರಂದು ಲೀನಾ ಮಣಿಮೇಕಲೈ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ‘ಕಾಳಿ’ ಪೋಸ್ಟರ್ ಶೇರ್ ಮಾಡಿಕೊಂಡರು. ಕೂಡಲೇ ಅದು ವೈರಲ್ ಆಯಿತು. ಬಿಟ್ಟಿ ಪ್ರಚಾರ ಪಡೆಯುವ ಕಾರಣದಿಂದಲೇ ಲೀನಾ ಮಣಿಮೇಕಲೈ ಅವರು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸಿನಿಮಾ, ಪೇಟಿಂಗ್, ಡಾಕ್ಯುಮೆಂಟರಿ, ವೆಬ್ ಸಿರೀಸ್ಗಳಲ್ಲಿ ಹಿಂದೂ ದೇವರನ್ನು ಅವಹೇಳನಕಾರಿಯಾಗಿ ಚಿತ್ರಿಸುವ ಮೂಲಕ ಈಗಾಗಲೇ ಅನೇಕ ನಿರ್ದೇಶಕರು ಹಿಂದೂಗಳ ವಿರೋಧ ಎದುರಿಸಿದ್ದಾರೆ. ಅಂಥವರ ಸಾಲಿಗೆ ಲೀನಾ ಮಣಿಮೇಕಲೈ ಸೇರ್ಪಡೆ ಆಗಿದ್ದಾರೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ಆರೋಪದಲ್ಲಿ ಅವರ ವಿರುದ್ಧ ದೂರು ನೀಡಲಾಗಿದೆ. ಅವರನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ. ಈ ಕಾರಣದಿಂದ ಮಧ್ಯ ಪ್ರದೇಶ ಸರ್ಕಾರ ಅವರ ವಿರುದ್ಧ ಲುಕೌಟ್ ನೋಟಿಸ್ ಹೊರಡಿಸಲು ಪೊಲೀಸರಿಗೆ ಸೂಚನೆ ನೀಡಿದೆ. ಅದರಂತೆ ಲೀನಾ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಆಗಿದೆ.
ಕಾಳಿ ದೇವಿಯ ಪೋಸ್ಟರ್ ತಡೆ ಹಿಡಿಯುವಂತೆ ಟ್ವಿಟರ್ ಸಂಸ್ಥೆಗೆ ಸರ್ಕಾರದಿಂದ ಸೂಚನೆ ನೀಡಲಾಯಿತು. ಅದನ್ನು ಟ್ವಿಟರ್ ಸಂಸ್ಥೆ ಪಾಲಿಸಿದೆ. ಅದರ ಪರಿಣಾಮವಾಗಿ ಜುಲೈ 5ರಿಂದ ಭಾರತದಲ್ಲಿರುವ ಟ್ವಿಟರ್ ಬಳಕೆದಾರರಿಗೆ ಆ ಪೋಸ್ಟರ್ ಕಾಣಿಸುತ್ತಿಲ್ಲ. ಲೀನಾ ಅವರು ಮೂಲತಃ ತಮಿಳುನಾಡಿನವರು. ಆದರೆ, ಅವರು ವಾಸವಾಗಿರುವುದು ಕೆನಡಾದಲ್ಲಿ. ಹೀಗಾಗಿ, ಅವರನ್ನು ಬಂಧಿಸುವುದು ಸದ್ಯಕ್ಕಂತೂ ಅಸಾಧ್ಯದ ಮಾತಾಗಿದೆ.
Published On - 8:23 pm, Thu, 7 July 22