ಕೇವಲ 1 ಸಿನಿಮಾ ಹಿಟ್ ನೀಡಿದ ನಟನಿಂದ ಮಹೇಶ್ ಬಾಬುಗೆ ಅವಮಾನ; ಫ್ಯಾನ್ಸ್ ಗರಂ

ನಟ ಮಹೇಶ್ ಬಾಬು ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ನಿನ್ನೆ ಮೊನ್ನೆ ಬಂದ ಹೊಸ ಹೀರೋಗಳೆಲ್ಲ ಮಹೇಶ್​ ಬಾಬು ಅವರಿಗೆ ಅವಮಾನ ಮಾಡಿದರೆ ಅವರ ಫ್ಯಾನ್ಸ್ ಖಂಡಿತವಾಗಿಯೂ ಸಹಿಸಿಕೊಳ್ಳುವುದಿಲ್ಲ. ‘ಹನುಮಾನ್’ ಸಿನಿಮಾದ ನಟ ತೇಜ ಸಜ್ಜಾ ಅವಮಾನ ಮಾಡಿದ್ದಾರೆ. ಮಹೇಶ್ ಬಾಬು ಫ್ಯಾನ್ಸ್​ ತಿರುಗಿಬಿದ್ದಿದ್ದಾರೆ.

ಕೇವಲ 1 ಸಿನಿಮಾ ಹಿಟ್ ನೀಡಿದ ನಟನಿಂದ ಮಹೇಶ್ ಬಾಬುಗೆ ಅವಮಾನ; ಫ್ಯಾನ್ಸ್ ಗರಂ
ತೇಜ ಸಜ್ಜಾ, ಮಹೇಶ್ ಬಾಬು
Follow us
ಮದನ್​ ಕುಮಾರ್​
|

Updated on: Nov 06, 2024 | 5:41 PM

2024ರ ಆರಂಭದಲ್ಲೇ ಟಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ ಕ್ಲ್ಯಾಶ್ ಆಗಿತ್ತು. ಸ್ಟಾರ್​ ನಟರ ಸಿನಿಮಾಗಳ ಎದುರಲ್ಲಿ ಹೊಸ ಹೀರೋಗಳ ಸಿನಿಮಾ ಕೂಡ ಬಿಡುಗಡೆ ಆಗಿತ್ತು. ತೇಜ ಸಜ್ಜಾ ನಟನೆಯ ‘ಹನುಮಾನ್’ ಹಾಗೂ ಮಹೇಶ್ ಬಾಬು ಅಭಿನಯದ ‘ಗುಂಟೂರು ಖಾರಂ’ ಸಿನಿಮಾಗಳು ಏಕಕಾಲಕ್ಕೆ ರಿಲೀಸ್ ಆಗಿದ್ದವು. ಆದರೆ ಗೆದ್ದಿದ್ದು ‘ಹನುಮಾನ್’ ಸಿನಿಮಾ. ಹೌದು, ತೇಜ ಸಜ್ಜಾ ಅವರು ಆ ಸಿನಿಮಾ ಮೂಲಕ ಭರ್ಜರಿ ಯಶಸ್ಸು ಕಂಡರು. ಸ್ಟಾರ್ ಹೀರೋಗಳಿಗೆ ಅವರು ಟಕ್ಕರ್ ನೀಡಿದರು. ಆದರೆ ಆ ಯಶಸ್ಸಿನ ಅಹಂ ಅವರ ತಲೆಗೆ ಏರಿದಂತಿದೆ. ಅದಕ್ಕೆ ಒಂದು ನಿದರ್ಶನ ಸಿಕ್ಕಿದೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ರಾಣಾ ದಗ್ಗುಬಾಟಿ ಮತ್ತು ತೇಜ ಸಜ್ಜಾ ಅವರು ಜೊತೆಯಾಗಿ ವೇದಿಕೆ ಹಂಚಿಕೊಂಡಿದ್ದರು. ಅವರಿಬ್ಬರ ನಡುವೆ ನಡೆದ ಸಂಭಾಷಣೆಯಿಂದ ಮಹೇಶ್ ಬಾಬು ಅವರಿಗೆ ಅವಮಾನ ಆಗಿದೆ. ಅವರಿಬ್ಬರು ಮಾತನಾಡುವಾಗ 2024ರ ಸಂಕ್ರಾಂತಿ ಕ್ಲ್ಯಾಶ್ ಮತ್ತು ಮಹೇಶ್ ಬಾಬು ಬಗ್ಗೆ ಪ್ರಸ್ತಾಪ ಆಗಿದೆ. ಆ ಮಾತುಕಥೆಯಿಂದ ‘ಪ್ರಿನ್ಸ್’ ಅಭಿಮಾನಿಗಳಿಗೆ ನೋವಾಗಿದೆ.

‘ಈಗಲೂ ಇವರು ಬದಲಾಗಿಲ್ಲ. ವಿವಾದಗಳಿಂದ ದೂರ ಇದ್ದಾರೆ. ಸೌಮ್ಯವಾಗಿ ಮಾತನಾಡುತ್ತಾರೆ, ಲಕ್ಷಾಂತರ ಜನರಿಗೆ ಇಷ್ಟ ಆಗಿದ್ದಾರೆ. ಲವರ್ ಬಾಯ್ ಮತ್ತು ಆ್ಯಕ್ಷನ್​ ಸ್ಟಾರ್​..’ ಎಂದು ರಾಣಾ ದಗ್ಗುಬಾಟಿ ಹೇಳುತ್ತಿರುವಾಗ ಅರ್ಧಕ್ಕೆ ತಡೆದ ತೇಜ ಸಜ್ಜಾ ಅವರು ‘ನನ್ನನ್ನು ಜಾಸ್ತಿ ಹೊಗಳಬೇಡಿ’ ಎಂದರು. ಅದಕ್ಕೆ ಉತ್ತರಿಸಿದ ರಾಣಾ ದಗ್ಗುಬಾಟಿ, ‘ನಾನು ಹೇಳಿದ್ದು ಮಹೇಶ್ ಬಾಬು ಬಗ್ಗೆ. ಆದರೆ ಈ ಮಾತುಗಳು ನಿಮಗೂ ಅನ್ವಯ ಆಗುತ್ತವೆ’ ಎಂದರು.

ಇದನ್ನೂ ಓದಿ: ‘ದೇವರ’ ಬಗ್ಗೆ ಮೌನ ತಾಳಿದ ಮಹೇಶ್ ಬಾಬು; ಸಿನಿಮಾ ಇಷ್ಟವಾಗಿಲ್ವಾ?

‘ಮಹೇಶ್ ಬಾಬು ಸೂಪರ್​ ಸ್ಟಾರ್​. ನೀವು ಸೂಪರ್​ ಹೀರೋ. ನಿಮ್ಮಿಬ್ಬರ ಸಿನಿಮಾಗಳು ಕೂಡ ಸಂಕ್ರಾಂತಿಗೆ ರಿಲೀಸ್ ಆಗಿತ್ತು’ ಎಂದು ರಾಣಾ ದಗ್ಗುಬಾಟಿ ಹೇಳಿದರು. ‘ಸಂಕ್ರಾಂತಿ ವಿಷಯದ ಬಗ್ಗೆ ಮಾತನಾಡೋದು ಬೇಡ’ ಎಂದು ತೇಜ ಸಜ್ಜಾ ಹೇಳಿದರು. ‘ಯಾಕೆ? ಅದು ಸೂಕ್ಷ್ಮವಾದ ವಿಷಯವೇ?’ ಎಂದು ರಾಣಾ ಪ್ರಶ್ನೆ ಮಾಡಿದರು. ಅವರಿಬ್ಬರ ನಡುವಿನ ಈ ಮಾತುಕಥೆಯಿಂದ ಮಹೇಶ್ ಬಾಬು ಅವರಿಗೆ ಅವಮಾನ ಆಗಿದೆ ಎಂದು ಫ್ಯಾನ್ಸ್ ಕ್ಲಾಸ್ ತೆಗೆದುಕೊಂಡಿದ್ದಾರೆ.

‘ತೇಜ ಸಜ್ಜಾ ಇನ್ನೂ ಒಂದೇ ಒಂದು ಹಿಟ್​ ಕೊಟ್ಟಿರುವುದು ಮಾತ್ರ. ಆದರೆ 25 ವರ್ಷಗಳಿಂದ ಚಿತ್ರರಂಗದಲ್ಲಿ ಇರುವ ಮಹೇಶ್ ಬಾಬು ಬಗ್ಗೆ ಅವರು ಲೇವಡಿ ಮಾಡುತ್ತಿದ್ದಾರೆ. ಇದು ಸರಿಯಲ್ಲ’ ಎಂದು ನೆಟ್ಟಿಗರು ಯುವ ನಟನಿಗೆ ಚಾಟಿ ಬೀಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.