Super Star Krishna: ಮಹೇಶ್ ಬಾಬು ತಂದೆ ಸೂಪರ್ ಸ್ಟಾರ್ ಕೃಷ್ಣ ಆರೋಗ್ಯದಲ್ಲಿ ಏರುಪೇರು; ‘ಪ್ರಿನ್ಸ್’ ಮನೆಯಲ್ಲಿ ಆತಂಕ
Mahesh Babu | Super Star Krishna: ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಭಾನುವಾರ (ನ.13) ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.

ಟಾಲಿವುಡ್ ನಟ ಮಹೇಶ್ ಬಾಬು (Mahesh Babu) ಅವರ ಕುಟುಂಬಕ್ಕೆ ಪದೇಪದೇ ಸಂಕಷ್ಟ ಎದುರಾಗುತ್ತಿದೆ. ಕೆಲವೇ ದಿನಗಳ ಹಿಂದೆ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನರಾದ ಸುದ್ದಿ ಇಡೀ ತೆಲುಗು ಚಿತ್ರರಂಗಕ್ಕೆ ಬೇಸರ ಮೂಡಿಸಿತ್ತು. ಆ ನೋವು ಮಾಸುವ ಮುನ್ನವೇ ‘ಪ್ರಿನ್ಸ್’ ತಂದೆ ಸೂಪರ್ ಸ್ಟಾರ್ ಕೃಷ್ಣ ಘಟ್ಟಮನೇನಿ (Krishna Ghattamaneni) ಅವರ ಆರೋಗ್ಯದಲ್ಲಿ ಏರುಪೇರು ಆಗಿರುವ ಸುದ್ದಿ ಕೇಳಿಬಂದಿದೆ. ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಕೃಷ್ಣ ಅವರ ಆರೋಗ್ಯ (Super Star Krishna Health) ಸದ್ಯಕ್ಕೆ ಸ್ಟೇಬಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಕುಟುಂಬದವರಿಂದ ಇನ್ನಷ್ಟೇ ಅಧಿಕೃತ ಹೇಳಿಕೆ ಹೊರಬರಬೇಕಿದೆ. ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ನಿರೀಕ್ಷಿಸಲಾಗುತ್ತಿದೆ.
ನವೆಂಬರ್ 13ರಂದು ಮಹೇಶ್ ಬಾಬು ತಂದೆ ಕೃಷ್ಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅವರಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಈ ಸುದ್ದಿ ಹೊರಬಿದ್ದ ನಂತರ ಅನೇಕ ಅಂಕೆ-ಕಂತೆಗಳು ಹರಿದಾಡಲು ಆರಂಭಿಸಿವೆ. ಕೃಷ್ಣ ಅವರಿಗೆ ಹೃದಯಾಘಾತ ಆಗಿದೆ ಎಂದು ಕೂಡ ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸೂಪರ್ ಸ್ಟಾರ್ ಕೃಷ್ಣ ಅವರ ಆರೋಗ್ಯದ ಕುರಿತಂತೆ ಪಿಆರ್ ಸುರೇಶ್ ಕೊಂಡಿ ಅವರು ಟ್ವೀಟ್ ಮಾಡಿದ್ದಾರೆ. ‘ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದೆ. ಜನರಲ್ ಚೆಕಪ್ ಸಲುವಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಮಹೇಶ್ ಬಾಬು ಕುಟುಂಬದವರಿಂದ ಅಧಿಕೃತ ಹೇಳಿಕೆ ಪ್ರಕಟವಾದರೆ ಅಭಿಮಾನಿಗಳ ಆತಂಕ ಕಡಿಮೆ ಆಗಲಿದೆ.
ತೆಲುಗು ಚಿತ್ರರಂಗದಲ್ಲಿ ಕೃಷ್ಣ ಅವರು ಸೂಪರ್ ಸ್ಟಾರ್ ಆಗಿ ಮಿಂಚಿದವರು. 1965ರಲ್ಲಿ ಅವರು ನಟನೆಯ ಜರ್ನಿ ಆರಂಭಿಸಿದ್ದರು. ಪೌರಾಣಿಕ, ಐತಿಹಾಸಿಕ ಸೇರಿದಂತೆ ಹಲವು ಬಗೆಯ ಪಾತ್ರಗಳಿಗೆ ಜೀವ ತುಂಬುವ ಮೂಲಕ ಅವರು ಅಭಿಮಾನಿಗಳ ಮನ ಗೆದ್ದರು. ಕೃಷ್ಣ ಅವರ ಅಂದಾಜು 25 ಸಿನಿಮಾಗಳಲ್ಲಿ ಮಹೇಶ್ ಬಾಬು ಬಾಲ ನಟನಾಗಿ ಅಭಿನಯಿಸಿದ್ದರು.
ಸೆಪ್ಟೆಂಬರ್ 28ರಂದು ಕೃಷ್ಣ ಅವರ ಪತ್ನಿ ಇಂದಿರಾ ದೇವಿ ನಿಧನ ಹೊಂದಿದರು. ಆ ಬಳಿಕ ಕೃಷ್ಣ ಅವರು ಕೊಂಚ ಡಲ್ ಆದರು ಎನ್ನಲಾಗಿದೆ. ಈ ವರ್ಷ ಆರಂಭದಲ್ಲಿ ಕೃಷ್ಣ ಅವರ ಹಿರಿಯ ಪುತ್ರ ರಮೇಶ್ ಬಾಬು ಕೂಡ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಒಟ್ಟಿನಲ್ಲಿ ಮಹೇಶ್ ಬಾಬು ಕುಟುಂಬಕ್ಕೆ 2022ರಲ್ಲಿ ಒಂದರಮೇಲೊಂದು ಕಷ್ಟ ಎದುರಾಗುತ್ತಿದೆ. ಹೀಗಾಗಿ ಅವರ ಹೊಸ ಸಿನಿಮಾದ ಕೆಲಸಗಳು ವಿಳಂಬ ಆಗುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







