‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕನ ವಿರುದ್ಧ 1.10 ಕೋಟಿ ರೂಪಾಯಿ ವಂಚನೆ ಆರೋಪ; ಕೇಸ್ ದಾಖಲು
ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ವಿರುದ್ಧ ಆರೋಪ ಕೇಳಿಬಂದಿದೆ. ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆ ಎಂದು ದೂರು ದಾಖಲಾಗಿದೆ.

ನಟ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ (Niranjan Sudhindra) ಅವರು ನಟಿಸುತ್ತಿರುವ ‘ಸೂಪರ್ ಸ್ಟಾರ್’ ಸಿನಿಮಾ (Super Star Movie) ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಕಾರಣಾಂತರಗಳಿಂದ ಈ ಚಿತ್ರದ ರಿಲೀಸ್ ತಡವಾಗಿದೆ. ಈಗ ಈ ಸಿನಿಮಾ ವಿವಾದಕ್ಕೆ ಕಾರಣ ಆಗಿದೆ. ‘ಸೂಪರ್ ಸ್ಟಾರ್’ ಚಿತ್ರದ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು (Ramesh Venkatesh Babu) ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಬರೋಬ್ಬರಿ 1 ಕೋಟಿ 10 ಲಕ್ಷ ರೂಪಾಯಿ ವಂಚಿಸಿದ್ದಾರೆ ಎಂದು ಕೇಸ್ ದಾಖಲಾಗಿದೆ. ಈ ಚಿತ್ರಕ್ಕೆ ಆರಂಭದಲ್ಲಿ ಮೈಲಾರಿ ಅವರು ಹಣ ಹೂಡಿದ್ದರು. ನಂತರ ನಿರ್ಮಾಪಕರ ಸ್ಥಾನಕ್ಕೆ ಸತ್ಯನಾರಾಯಣ ಹಾಗೂ ರಮಾದೇವಿ ಬಂದರು. ಈಗ ಮೈಲಾರಿ ಅವರು ತಮಗೆ ವಂಚನೆ ಆಗಿದೆ ಎಂದು ಆರೋಪಿಸಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮೈಲಾರಿ ನೀಡಿದ ದೂರಿನ ಅನ್ವಯ ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರು ‘ಸಿನಿಮಾ ಸೂಪರ್ ಹಿಟ್ ಆಗುತ್ತದೆ, ಹಣ ಬರುತ್ತದೆ’ ಎಂದು ಪ್ರಚೋದನೆ ನೀಡಿದ್ದರು. ಹಾಗಾಗಿ ಮಾತೃಶ್ರೀ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ಮೈಲಾರಿ ಹಣ ಹೂಡಿದ್ದರು. ಆದರೆ ಕೊವಿಡ್ ಹಿನ್ನೆಲೆಯಲ್ಲಿ ಚಿತ್ರದ ಕೆಲಸಗಳು ತಡವಾದವು. ಚಿತ್ರೀಕರಣ ಸ್ಥಗಿತಗೊಂಡಿತ್ತು. ನಂತರ ರಮೇಶ್ ವೆಂಕಟೇಶ್ ಬಾಬು ಅವರು ಸತ್ಯನಾರಾಯಣ ಎಂಬುವವರ ಜೊತೆ ಸೇರಿ ಚಿತ್ರದ ಮಾಲಿಕತ್ವ ಬದಲಿಸಿದ್ದಾರೆ ಎಂದು ಮೈಲಾರಿ ಆರೋಪಿಸಿದ್ದಾರೆ.
ನಿರ್ದೇಶಕ ರಮೇಶ್ ವೆಂಕಟೇಶ್ ಬಾಬು ಅವರು ನಿರ್ಮಾಪಕ ಮೈಲಾರಿ ಅವರಿಂದ 1 ಕೋಟಿ 10 ಲಕ್ಷ ರೂಪಾಯಿ ಪಡೆದು, ಅದನ್ನು ಕಲಾವಿದರಿಗೂ ನೀಡದೇ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪ ಎದುರಾಗಿದೆ. ಇದಕ್ಕೆ ಸಂಬಂಧಿಸಿದಂತೆ ರಮೇಶ್ ವೆಂಕಟೇಶ್ ಬಾಬು ಮತ್ತು ಹೊಸ ನಿರ್ಮಾಪಕರಾದ ಸತ್ಯನಾರಾಯಣ ಹಾಗೂ ರಮಾದೇವಿ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ತಾವು ಹಾಕಿದ ಬಂಡವಾಳವನ್ನು ವಾಪಸ್ ನೀಡುವಂತೆ ಮೈಲಾರಿ ಅವರು ಕೇಳಿದ್ದಾರೆ. ಆದರೆ ತಮಗೆ ಪ್ರಾಣ ಬೆದರಿಕೆ ಮತ್ತು ಧಮ್ಕಿ ಹಾಕಲಾಗಿದೆ ಎಂದು ಮೈಲಾರಿ ಆರೋಪಿಸಿದ್ದಾರೆ. ಇದರಿಂದ ‘ಸೂಪರ್ ಸ್ಟಾರ್’ ಚಿತ್ರತಂಡಕ್ಕೆ ಸಂಕಷ್ಟ ಎದುರಾಗಿದೆ.
‘ಸೂಪರ್ ಸ್ಟಾರ್’ ಚಿತ್ರಕ್ಕಾಗಿ ನಿರಂಜನ್ ಸುಧೀಂದ್ರ ಅವರು ಸಾಕಷ್ಟು ಕಷ್ಟಪಟ್ಟಿದ್ದಾರೆ. ಕೆಲವೇ ತಿಂಗಳ ಹಿಂದೆ ಈ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿತ್ತು. ಈ ಸಿನಿಮಾದ ಬಿಡುಗಡೆಗಾಗಿ ಅವರ ಅಭಿಮಾನಿಗಳು ಕಾದಿದ್ದಾರೆ. ಆದರೆ ವಿವಾದದ ಕಾರಣದಿಂದ ಈ ಚಿತ್ರ ಸುದ್ದಿ ಆಗುವಂತಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:27 pm, Mon, 14 November 22








