ಯಶಸ್ವಿ ನಿರ್ದೇಶಕ ರಾಜಮೌಳಿ (SS Rajamouli) ಅವರ ಜೊತೆ ಕೆಲಸ ಮಾಡಲು ಎಲ್ಲ ಹೀರೋಗಳು ನಾಮುಂದು ತಾಮುಂದು ಎನ್ನುತ್ತಾರೆ. ಯಾಕೆಂದರೆ, ರಾಜಮೌಳಿ ನಿರ್ದೇಶನದ ಚಿತ್ರದಲ್ಲಿ ನಟಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಎಲ್ಲರಿಗೂ ತಿಳಿದಿದೆ. ಈವರೆಗೂ ರಾಜಮೌಳಿ ಸೋತಿದ್ದೇ ಇಲ್ಲ. ಅವರ ಸಿನಿಮಾಗಳು ವಿಶ್ವಮಟ್ಟದಲ್ಲಿ ಸೌಂಡು ಮಾಡುತ್ತವೆ. ಈ ವರ್ಷ ತೆರೆಕಂಡ ‘ಆರ್ಆರ್ಆರ್’ (RRR) ಚಿತ್ರ ಬ್ಲಾಕ್ಬಸ್ಟರ್ ಹಿಟ್ ಆಯಿತು. ಈ ಸಿನಿಮಾದಿಂದ ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ ಅವರಿಗೆ ಭರ್ಜರಿ ಗೆಲುವು ಸಿಕ್ಕಿದೆ. ರಾಜಮೌಳಿ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಟಾಲಿವುಡ್ ‘ಪ್ರಿನ್ಸ್’ ಮಹೇಶ್ ಬಾಬು (Mahesh Babu) ಜೊತೆ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಈ ಪ್ರಾಜೆಕ್ಟ್ ಕುರಿತು ಕೆಲವು ಇಂಟರೆಸ್ಟಿಂಗ್ ಗಾಸಿಪ್ಗಳು ಕೇಳಿಬರುತ್ತಿವೆ.
ರಾಜಮೌಳಿ ಅವರ ಸಿನಿಮಾಗಳು ಹೇಗಿರುತ್ತವೆ ಎಂಬುದು ಎಲ್ಲರಿಗೂ ಗೊತ್ತಿದೆ. ಒಂದು ಚಿತ್ರಕ್ಕಾಗಿ ಅವರು ಹಲವು ವರ್ಷ ಮೀಸಲಿಡುತ್ತಾರೆ. ನಟರಿಂದ ನೂರಾರು ದಿನಗಳ ಡೇಟ್ಸ್ ಕೇಳುತ್ತಾರೆ. ಪಾತ್ರಕ್ಕೆ ತಕ್ಕಂತೆ ಗೆಟಪ್ ಬದಲಿಸಿಕೊಳ್ಳಬೇಕು ಎಂದು ಕೂಡ ಕಲಾವಿದರಿಗೆ ಅವರು ತಾಕೀತು ಮಾಡುತ್ತಾರೆ. ಆದರೆ ಈ ಕಂಡೀಷನ್ಗೆ ಒಪ್ಪಿಕೊಳ್ಳಲು ಮಹೇಶ್ ಬಾಬು ಸಿದ್ಧರಿಲ್ಲ ಎಂಬ ಗುಸುಗುಸು ಹಬ್ಬಿದೆ.
ರಾಜಮೌಳಿ ಜೊತೆ ಸೇರಿಕೊಂಡು ಒಂದೇ ಸಿನಿಮಾಗಾಗಿ ಎರಡು-ಮೂರು ವರ್ಷ ಮೀಸಲಿಡಲು ಮಹೇಶ್ ಬಾಬು ಸಿದ್ಧರಿಲ್ಲ. ಹಾಗಾಗಿ ಅವರು ಕೆಲವು ಕಂಡೀಷನ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಚಿತ್ರದಲ್ಲಿ ತಮಗೆ ಯಾವುದೇ ವಿಶೇಷ ಗೆಟಪ್ ಇರಬಾರದು. ಆ ಮೂಲಕ ಏಕಕಾಲಕ್ಕೆ ತಾವು ಬೇರೆ ಸಿನಿಮಾದಲ್ಲೂ ತೊಡಗಿಕೊಳ್ಳಲು ಅನುಕೂಲ ಆಗಬೇಕು ಎಂದು ರಾಜಮೌಳಿಗೆ ಮಹೇಶ್ ಬಾಬು ಹೇಳಿದ್ದಾರೆ ಎನ್ನಲಾಗಿದೆ.
ರಾಜಮೌಳಿಯ ಚಿತ್ರದಲ್ಲಿ ದೊಡ್ಡ ದೊಡ್ಡ ಪೋಷಕ ಕಲಾವಿದರು ಇರುತ್ತಾರೆ. ಆಗ ಸಹಜವಾಗಿಯೇ ಡೇಟ್ ಕ್ಲ್ಯಾಶ್ ಆಗುವ ಸಾಧ್ಯತೆ ಇರುತ್ತದೆ. ಇದು ಮಹೇಶ್ ಬಾಬುಗೆ ಇಷ್ಟವಿಲ್ಲ. ‘ನಮಗೆ ಅಂಥ ಬ್ಯುಸಿ ಕಲಾವಿದರು ಬೇಡ. ನನ್ನ ಡೇಟ್ಸ್ಗೆ ಯಾವಾಗ ಬೇಕಿದ್ದರೂ ಅಡ್ಜೆಸ್ಟ್ ಮಾಡಿಕೊಳ್ಳುವಂತಹ ಕಲಾವಿದರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ’ ಎಂದು ಮಹೇಶ್ ಬಾಬು ಕಂಡೀಷನ್ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರಗಳ ಬಗ್ಗೆ ಚಿತ್ರತಂಡದ ಯಾರೊಬ್ಬರೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಸದ್ಯ ಕೇಳಿಬಂದಿರುವುದೆಲ್ಲ ಬರೀ ಅಂತೆ-ಕಂತೆಗಳು ಮಾತ್ರ.
ಇದನ್ನೂ ಓದಿ: MM Keeravani Birthday: ರಾಜಮೌಳಿ ಚಿತ್ರಗಳ ಖಾಯಂ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಸಂಭಾವನೆ ಎಷ್ಟು?
Sonu Sood: ರಾಜಮೌಳಿ ‘ಬಾಹುಬಲಿ’ ಚಿತ್ರದ ಆಫರ್ ಕೊಟ್ರೂ ಒಪ್ಪಿಕೊಂಡಿರಲಿಲ್ಲ ಸೋನು ಸೂದ್; ಕಾರಣ ಏನು?