Mammootty Birthday: 70ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಮಾಲಿವುಡ್ ಸ್ಟಾರ್ ಮಮ್ಮುಟ್ಟಿ; ಕನ್ನಡದಲ್ಲೂ ಮಿಂಚಿದ್ದರು ಈ ನಟ!
ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿಯವರ ಜನ್ಮ ದಿನವಿಂದು. 70 ವರ್ಷ ಪೂರೈಸಿರುವ ಅವರೊಳಗಿನ ಮತ್ತಷ್ಟು ಮಾಗುತ್ತಾ, ಹೊಸ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತಿದ್ದಾನೆ. ಕನ್ನಡದಲ್ಲೂ ನಟಿಸಿರುವ ಮಮ್ಮುಟ್ಟಿಯವರ ಸಿನಿ ಪಯಣವನ್ನು ರೂಪಿಸಿರುವ ಸಂಗತಿಗಳ ಕುರಿತು ಅವರೇ ಮಾತನಾಡಿರುವ ಅಂಶಗಳು ಇಲ್ಲಿವೆ.
ಮಲಯಾಳಂನ ಖ್ಯಾತ ನಟ ಮಮ್ಮುಟ್ಟಿ ಇಂದಿಗೆ 70ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 1951ರ ಸೆಪ್ಟೆಂಬರ್ 7ರಂದು ಜನಿಸಿದ, ಮಮ್ಮುಟ್ಟಿಯ ಪೂರ್ಣ ನಾಮ ಮುಹಮ್ಮದ್ ಕುಟ್ಟಿ ಪನಪರಂಬಿಲ್ ಇಸ್ಮೈಲ್. 1971ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಇದುವರೆಗೆ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅವರು ಮಲಯಾಳಂನ ಬ್ಯುಸಿ ನಟರಲ್ಲೊಬ್ಬರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲದೇ ಹಿಂದಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲೂ ನಟಿಸಿ ಮಮ್ಮುಟ್ಟಿ ಸೈ ಎನಿಸಿಕೊಂಡಿದ್ದಾರೆ. ಅವರು ಕನ್ನಡದಲ್ಲಿ ನಟಿಸಿದ, ಅಭಯ ಸಿಂಹ ನಿರ್ದೇಶಿಸಿದ ‘ಶಿಕಾರಿ’ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಮಮ್ಮುಟ್ಟಿ ಅಭಿನಯಕ್ಕೆ ಇದುವರೆಗೆ 3 ರಾಷ್ಟ್ರ ಪ್ರಶಸ್ತಿ ಲಭಿಸಿದೆ. 7 ಕೇರಳ ರಾಜ್ಯ ಪ್ರಶಸ್ತಿ ಹಾಗೂ 13 ಫಿಲ್ಮ್ ಫೇರ್ ಪ್ರಶಸ್ತಿಗಳು ಲಭಿಸಿವೆ. ಸಿನಿ ರಂಗದ ಇವರ ಸಾಧನೆಗೆ 1998ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 1980ರ ಕಾಲಘಟ್ಟದ ನಂತರ ಮಲಯಾಳಂ ಚಿತ್ರರಂಗವನ್ನು ಅಕ್ಷರಶಃ ಆಳಿದ ನಟರೆಂದರೆ ಅದು ಮಮ್ಮುಟ್ಟಿ ಹಾಗೂ ಮೋಹನ್ ಲಾಲ್. ತಮ್ಮ ಮಾಸ್ ಹಾಗೂ ಪ್ರಯೋಗಾತ್ಮಕ ಚಿತ್ರಗಳಿಂದ ಈರ್ವರೂ ನಟರು ಖ್ಯಾತಿ ಗಳಿಸಿದ್ದಾರೆ. ಈಗಲೂ ಕೂಡ ಮಮ್ಮುಟ್ಟಿ ಮಾಸ್ ಚಿತ್ರಗಳೊಂದಿಗೆ ಪ್ರಯೋಗಾತ್ಮಕ ಚಿತ್ರಗಳಿಗೆ ಸದಾ ತೆರೆದುಕೊಂಡಿದ್ದಾರೆ.
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಮಮ್ಮುಟ್ಟಿ; ಯಶಸ್ಸಿಗೆ ಅವರೇ ತೆರೆದಿಟ್ಟ ಕಾರಣಗಳು ಇಲ್ಲಿವೆ:
1. ಹೃದಯದ ಮಾತಿಗೆ ಕಿವಿಗೊಡಿ: ಮಮ್ಮುಟ್ಟಿ ಚಿತ್ರರಂಗಕ್ಕೆ ಪ್ರವೇಶಿಸಿದ ಸಂದರ್ಭದಲ್ಲಿ ಅವರಿಗೆ ಬಹಳ ದೊಡ್ಡ ಯಶಸ್ಸೇನು ಸತತವಾಗಿ ದೊರೆಯಲಿಲ್ಲ. ಆಗ ನಿರ್ದೇಶಕರೊಬ್ಬರು, ನಿಮಗೆ ನಟನೆಯೂ ಬರುವುದಿಲ್ಲ. ನೃತ್ಯ ಕೂಡ ಬರುವುದಿಲ್ಲ. ನೀವು ಚಿತ್ರರಂಗ ಬಿಟ್ಟು ನಿಮ್ಮ ಉದ್ಯೋಗವಾದ ವಕೀಲಿ ವೃತ್ತಿಯನ್ನು ಮುಂದುವರೆಸಿ ಎಂದು ಸಲಹೆ ನೀಡಿದ್ದರಂತೆ. ಆದರೆ ಮಮ್ಮುಟ್ಟಿ, ಚಿತ್ರರಂಗದಲ್ಲೇ ಛಲದಿಂದ ನೆಲೆ ನಿಂತರು. ಅವರ 400ಕ್ಕೂ ಅಧಿಕ ಚಿತರಗಳ ಇತಿಹಾಸವನ್ನು ನೋಡಿದವರಿಗೆ ಅವರ ಸಿನಿ ಯಾತ್ರೆಯ ಅರಿವಾಗುತ್ತದೆ.
2. ನಿರ್ದೇಶಕರಿಗೆ ನನ್ನ ಅವಶ್ಯಕತೆ ಇಲ್ಲ, ನಟನಾಗಿ ನನಗೆ ಅವರ ಅವಶ್ಯಕತೆ ಇದೆ: ಮಮ್ಮುಟ್ಟಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘‘ನನಗೆ ಅವಕಾಶ ಬೇಕಾದರೆ ನಾನೇ ಕೇಳಬೇಕು. ಖ್ಯಾತ ನಿರ್ದೇಶಕರಿಗೆ ನಾನೇ ಬೇಕೆಂದೇನು ಇಲ್ಲ. ಆದರೆ, ಒಬ್ಬ ನಟನಾಗಿ ನನಗೆ ಅಂತಹ ನಿರ್ದೇಶಕರ ಅವಶ್ಯಕತೆ ಇದೆ. ಆದ್ದರಿಂದ ಅವಕಾಶ ಕೇಳುವುದರಲ್ಲಿ ಒಬ್ಬ ನಟ ಹಿಂಜರಿಕೆ ಮಾಡಿಕೊಳ್ಳಲೇಬಾರದು’’ ಎಂದಿದ್ದರು. ಈ ಮಾತು ಎಲ್ಲಾ ಕಲಾವಿದರಿಗೆ ಕಿವಿಮಾತಿನಂತಿತ್ತು. ಆದರೆ ಮಮ್ಮುಟ್ಟಿ ಜೀವನದಲ್ಲಿ ಪಾಲಿಸಿಕೊಂಡು ಬಂದ ನಿಲುವು ಇದೇ ಆಗಿತ್ತು.
3. ಪ್ರತಿಭೆಯನ್ನು ಪರಿಶ್ರಮ ಮೀರಿಸುತ್ತದೆ: ನಟನಾಗಿ ಮಮ್ಮುಟ್ಟಿ ಮೊದಲಿನಿಂದಲೂ ಪ್ರತಿಭಾವಂತರೇನು ಅಲ್ಲ. ಪರಿಶ್ರಮದಿಂದ ಅವರು ಮೇಲೆ ಬಂದವರು. ಈ ಕುರಿತು ಅವರು ಹಲವಾರು ಸಂದರ್ಶನಗಳಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಕಠಿಣ ಪರಿಶ್ರಮ ಒಂದಲ್ಲಾ ಒಂದು ದಿನ ಬೆಲೆ ನೀಡಿಯೇ ನೀಡುತ್ತದೆ. ಸತತ ಪರಿಶ್ರಮದಿಂದಾಗಿ ಪ್ರತಿಭಾವಂತರನ್ನೂ ಮೀರಿಸಲು ಸಾಧ್ಯವಿದೆ ಎನ್ನುವುದು ಮಮ್ಮುಟ್ಟಿ ನಂಬಿಕೆಯಾಗಿದೆ.
4. ನಟನೆಯ ಹಸಿವಿರಬೇಕು: ಖ್ಯಾತ ವಾಹಿನಿಯಾದ ಬಿಇಬಿಸಿಯಲ್ಲಿ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಮಮ್ಮುಟ್ಟಿ, ತಮ್ಮೊಳಗಿನ ನಟನಾ ಹಸಿವನ್ನು ತಿಳಿಸಿದ್ದರು. ನನ್ನೊಳಗಿನ ನಟ ಇನ್ನೇನನ್ನು ಹೊಸದಾಗಿ ಮಾಡಬಲ್ಲ ಎಂದು ನಾನು ಯಾವಾಗಲೂ ಯೋಚಿಸುತ್ತಿರುತ್ತೇನೆ. ಬಹುಶಃ ಅದೇ ನನಗೆ ಹೊಸ ರೀತಿಯ ಪಾತ್ರಗಳು ಹಾಗೂ ವಿವಿಧ ಭಾಷೆಗಳಿಂದ ಅವಕಾಶಗಳನ್ನು ನೀಡಿದೆ ಎಂದು ಹೇಳಿದ್ದಾರೆ.
ಮಮ್ಮುಟ್ಟಿಯ ಮಗನಾಗಿರುವ ದುಲ್ಖರ್ ಸಲ್ಮಾನ್ ತಮ್ಮ ವಿಭಿನ್ನ ಶೈಲಿಯ ಚಿತ್ರಗಳಿಂದ ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ:
‘ನೀನೂ ಸತ್ತು ಹೋಗು’: ಸಿದ್ದಾರ್ಥ್ ಶುಕ್ಲಾ ನಿಧನದ ಬಳಿಕ ಕಿಡಿಗೇಡಿಗಳಿಂದ ನಟಿಗೆ ಮೆಸೇಜ್; ಆಸ್ಪತ್ರೆಗೆ ದಾಖಲು
KBC 13: ರಣವೀರ್ ನೀಡಿದ್ದ ಮಾತನ್ನು ನಡೆಸಿಕೊಟ್ಟಿಲ್ಲ ಎಂದು ಅಮಿತಾಭ್ ಬಳಿ ದೂರಿದ ದೀಪಿಕಾ; ಅಷ್ಟಕ್ಕೂ ಕಂಪ್ಲೇಂಟ್ ಏನು?
(Malayalam actor who is also acted in a Kannada movie Mammootty turns 70 today)