Rajat Bedi: ಬಾಲಿವುಡ್ ನಟ ರಜತ್ ಬೇಡಿ ಕಾರು ಡಿಕ್ಕಿ; ಚಿಂತಾಜನಕ ಸ್ಥಿತಿಯಲ್ಲಿ ಪಾದಚಾರಿ: ಕೇಸ್ ದಾಖಲು
Rajat Bedi | Car Accident: ರಾಜೇಶ್ ಎಂಬ ಪಾದಚಾರಿಗೆ ನಟ ರಜತ್ ಬೇಡಿ ಕಾರು ಡಿಕ್ಕಿ ಹೊಡೆದಿದೆ. ರಾಜೇಶ್ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.
ಬಾಲಿವುಡ್ನ ಖ್ಯಾತ ನಟ ರಜತ್ ಬೇಡಿ ಅವರ ಕಾರು ಅಪಘಾತಕ್ಕೆ ಒಳಗಾಗಿದೆ. ಮುಂಬೈನಲ್ಲಿ ಪಾದಚಾರಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ 40ರ ಪ್ರಾಯದ ವ್ಯಕ್ತಿಯ ಸ್ಥಿತಿ ಚಿಂತಾಜನಕ ಆಗಿದೆ. ಕೂಡಲೇ ಅವರನ್ನು ಕೂಪರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಎನ್ ನಗರ್ ಪೊಲೀಸ್ ಠಾಣೆಯಲ್ಲಿ ರಜತ್ ಬೇಡಿ ವಿರುದ್ಧ ಕೇಸ್ ದಾಖಲಾಗಿದೆ. ಬಾಲಿವುಡ್ನ ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ರಾಜೇಶ್ ಎಂದು ಗುರುತಿಸಲಾಗಿದೆ. ಇದುವರೆಗೂ ಪೊಲೀಸರು ರಜತ್ ಬೇಡಿಯನ್ನು ಬಂಧಿಸಿಲ್ಲ.
ಅಪಘಾತ ನಡೆದ ತಕ್ಷಣ ಗಾಯಾಳುವನ್ನು ರಜತ್ ಬೇಡಿಯವರೇ ಕೂಪರ್ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಡಿಎನ್ ನಗರ್ ಪೊಲೀಸ್ ಠಾಣೆಗೆ ಬಂದು ಪೊಲೀಸರಿಗೆ ವಿಷಯ ತಿಳಿಸಿದರು ಎನ್ನಲಾಗಿದೆ. ಅಪಘಾತಕ್ಕೆ ಒಳಗಾಗಿರುವ ರಾಜೇಶ್ ಕುಟುಂಬಕ್ಕೆ ಸಹಾಯ ಮಾಡುವುದಾಗಿ ರಜತ್ ಬೇಡಿ ಭರವಸೆ ನೀಡಿದ್ದರು. ಆದರೆ ಆಸ್ಪತ್ರೆಗೆ ದಾಖಲಿಸಿ ಹೋದ ಬಳಿಕ ಅವರು ಮತ್ತೆ ಆಸ್ಪತ್ರೆಯ ಕಡೆಗೆ ತಲೆ ಹಾಕಿಲ್ಲ ಎಂದು ಕುಟುಂಬದವರು ದೂರಿದ್ದಾರೆ.
‘ಸದ್ಯ ಗಾಯಾಳು ರಾಜೇಶ್ ಪರಿಸ್ಥಿತಿ ಚಿಂತಾಜನಕವಾಗಿದೆ. ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿದೆ. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆಕ್ಸಿಜನ್ ಸಪೋರ್ಟ್ನಲ್ಲಿ ಇದ್ದಾರೆ. ಅವರಿಗೆ ತುರ್ತಾಗಿ ರಕ್ತದ ಅವಶ್ಯಕತೆ ಇದೆ’ ಎಂದು ಕೂಪರ್ ಆಸ್ಪತ್ರೆಯ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ಸ್ವಲ್ಪ ಹೊತ್ತಿನಲ್ಲಿ ವಾಪಸ್ ಬರುತ್ತೇನೆ ಅಂತ ಹೇಳಿಹೋದ ರಜತ್ ಬೇಡಿ ಅವರು ನಂತರ ಮರಳಿ ಬಂದಿಲ್ಲ’ ಎಂದು ರಾಜೇಶ್ ಪತ್ನಿ ಹೇಳಿದ್ದಾರೆ. ರಾಜೇಶ್ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.
‘ಡಿಎನ್ ನಗರ್ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಆದರೆ ಇನ್ನೂ ಅವರು ರಜತ್ ಬೇಡಿಯನ್ನು ಬಂಧಿಸಿಲ್ಲ. ನನ್ನ ಗಂಡನಿಗೆ ಏನಾದರೂ ಆದರೆ ಅದಕ್ಕೆ ರಜತ್ ಬೇಡಿಯೇ ಕಾರಣ’ ಎಂದು ರಾಜೇಶ್ ಪತ್ನಿ ಅಳಲು ತೋಡಿಕೊಂಡಿದ್ದಾರೆ. ‘ಕೊಯಿ ಮಿಲ್ ಗಯಾ’, ‘ಖಾಮೋಶ್’, ‘ದಿ ಟ್ರೇನ್’, ‘ಪಾರ್ಟ್ನರ್’, ‘ಅಕ್ಸರ್’ ಸೇರಿದಂತೆ 40ಕ್ಕೂ ಅಧಿಕ ಸಿನಿಮಾಗಳಲ್ಲಿ ರಜತ್ ಬೇಡಿ ನಟಿಸಿದ್ದಾರೆ. ಕನ್ನಡದ ‘ಜಗ್ಗುದಾದ’ ಸಿನಿಮಾದಲ್ಲೂ ಅವರೊಂದು ಪಾತ್ರ ಮಾಡಿದ್ದಾರೆ.
ಇದನ್ನೂ ಓದಿ:
ಖ್ಯಾತ ನಟಿ ಯಶಿಕಾ ಆನಂದ್ ಭೀಕರ ಕಾರು ಅಪಘಾತ; ಸ್ನೇಹಿತೆ ಸ್ಥಳದಲ್ಲೇ ಸಾವು
ಭೀಕರ ಅಪಘಾತದ ಇಂಚಿಂಚೂ ವಿವರ; ಹಾಸಿಗೆಯಲ್ಲೇ ನರಕ ನೋಡುತ್ತಿರುವ ನಟಿ ಯಶಿಕಾ ಆನಂದ್