ಮುಂದುವರೆದ ಮಮಿತಾ ಬೈಜು ಮ್ಯಾಜಿಕ್, ಆರನೇ 100 ಕೋಟಿ ಸಿನಿಮಾ
Mamita Biju movie: ಒಂದರ ಹಿಂದೆ ಒಂದು ಸಿನಿಮಾಗಳು ಹಿಟ್ ಆಗುವುದು ಬಲು ಅಪರೂಪ. ಈಗಿನ ಸಮಯದಲ್ಲಂತೂ ಒಂದರ ಹಿಂದೊಂದು ಹಿಟ್ ಸಿನಿಮಾಗಳು ಕೊಡುವುದು ಬಹಳ ಕಷ್ಟ. ಅದರಲ್ಲೂ ವರ್ಷದಲ್ಲಿ ಐದಾರು ಸಿನಿಮಾಗಳಲ್ಲಿ ನಟಿಸುವವರಿಗಂತೂ ಇನ್ನೂ ಕಷ್ಟ. ಆದರೆ ನಟಿ ಮಮಿತಾ ಬಿಜು ಅವರಿಗೆ ಇಂಥ ಒಂದು ಅಪರೂಪದ ಅದೃಷ್ಟ ಒಲಿದಿದೆ.

ಸಿನಿಮಾ (Cinema) ರಂಗದಲ್ಲಿ ಸತತ ಯಶಸ್ಸು ಬಹುತೇಕ ಅಸಾಧ್ಯ. ಅಳೆದು ತೂಗಿ ಮೂರ್ನಾಲ್ಕು ವರ್ಷಕ್ಕೆ ಒಂದು ಸಿನಿಮಾ ಮಾಡುವವರಿಗೂ ಸಹ ಒಮ್ಮೊಮ್ಮೆ ಯಶಸ್ಸು ಕೈಕೊಡುತ್ತದೆ. ಅದರಲ್ಲೂ ವರ್ಷಕ್ಕೆ ನಾಲ್ಕೈದು ಸಿನಿಮಾನಲ್ಲಿ ನಟಿಸುವವರಿಗೆ ಸತತವಾಗಿ ಹಿಟ್ ಕೊಡುವುದು ಅಥವಾ ಹಿಟ್ ಸಿನಿಮಾಗಳನ್ನು ಆರಿಸಿ ಅವುಗಳಲ್ಲಿ ನಟಿಸುವುದು ಬಹುತೇಕ ಅಸಾಧ್ಯ. ಆದರೆ ಕೆಲವು ನಟ-ನಟಿಯರಿಗೆ ಅದೃಷ್ಟವಶಾತ್ ಇದು ಸಂಭವಿಸಿಬಿಡುತ್ತದೆ. ರಶ್ಮಿಕಾ ಮಂದಣ್ಣ ಅವರು ಒಂದರ ಹಿಂದೊಂದರಂತೆ 1000 ಕೋಟಿ ಗಳಿಸಿದ ಮೂರು ಸಿನಿಮಾಗಳಲ್ಲಿ ನಟಿಸಿದ್ದರು. ಅದು ಈಗಲೂ ದಾಖಲೆಯೇ ಆಗಿದೆ. ಇದೀಗ ಮತ್ತೊಬ್ಬ ನಟಿ ಒಂದರ ಹಿಂದೆ ಒಂದರಂತೆ 100 ಕೋಟಿ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಮಲಯಾಳಂ ನಟಿ ಮಮಿತಾ ಬಿಜು, ಕಳೆದ ಒಂದೆರಡು ವರ್ಷಗಳಲ್ಲಿ ದಕ್ಷಿಣದ ಹೊಸ ಸ್ಟಾರ್ ನಟಿಯಾಗಿ ಉದಯಿಸಿದ್ದಾರೆ. ಅವರು ನಟಿಸುತ್ತಿರುವ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೂಪರ್ ಹಿಟ್ ಆಗುತ್ತಲೇ ಇವೆ. 2024ರಲ್ಲಿ ಬಿಡುಗಡೆ ಆದ ‘ಪ್ರೇಮಲು’ ಸಿನಿಮಾ ಮಮಿತಾ ಬಿಜು ಜೀವನವನ್ನೇ ಬದಲಾಯಿಸಿತು. ಅದಕ್ಕೆ ಮುಂಚೆ ಹಲವಾರು ಸಿನಿಮಾಗಳಲ್ಲಿ ಮಮಿತಾ ಬಿಜು ನಟಿಸಿದ್ದರಾದರೂ ಯಾವುದೂ ಸಹ ಅವರಿಗೆ ಗುರುತು ತಂದುಕೊಟ್ಟಿರಲಿಲ್ಲ. ಆದರೆ 2024ರ ‘ಪ್ರೇಮಲು’ ದೊಡ್ಡ ಹಿಟ್ ಆಯ್ತು. ಆ ಸಿನಿಮಾ ಮಲಯಾಳಂ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ 100 ಕೋಟಿ ಗಳಿಕೆ ಮಾಡಿತು. ಅದರ ಬಳಿಕ ಮಮಿತಾ ಬಿಜು ಮುಟ್ಟಿದ್ದೆಲ್ಲ ಚಿನ್ನವೇ ಆಗುತ್ತಿದೆ.
2025 ರಲ್ಲಿ ಮಮಿತಾ ಬಿಜು ನಟಿಸಿದ ಕೇವಲ ಒಂದು ತಮಿಳು ಸಿನಿಮಾ ಬಿಡುಗಡೆ ಆಯ್ತು, ಅದುವೇ ‘ಡ್ಯೂಡ್’ ಆ ಸಿನಿಮಾ ಸಹ 100 ಕೋಟಿ ಗಳಿಕೆ ಮಾಡಿದು. ಆದರೆ ಅವರ ಪಾಲಿಗೆ ನಿಜವಾದ ಮ್ಯಾಜಿಕ್ ನಡೆದಿದ್ದು 2026ರಲ್ಲಿ. ಮೊದಲಿಗೆ ಧನುಶ್ ಜೊತೆಗೆ ‘ಕಾರಾ’ ಹೆಸರಿನ ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ 100 ಕೋಟಿಯ ಹತ್ತಿರಕ್ಕೆ ಬಂತು. ಅದಾದ ಬಳಿಕ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಅಲ್ಲಿ ನಟಿಸಿದರು. ಆ ಸಿನಿಮಾ ಬ್ಲಾಕ್ ಬಸ್ಟರ್. ಇತ್ತೀಚೆಗಷ್ಟೆ ಬಿಡುಗಡೆ ಆದ ‘ವಿಶ್ವನಾಥ್ ಆಂಡ್ ಸನ್’ ತಮಿಳು ಸಿನಿಮಾನಲ್ಲಿ ನಟಿಸಿದರು. ಆ ಸಿನಿಮಾ ಸಹ ಬ್ಲಾಕ್ ಬಸ್ಟರ್, ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ‘ವಿಶ್ವನಾಥ್ ಆಂಡ್ ಸನ್’ ಸಿನಿಮಾ ರಿಲೀಸ್ ಆದ ಒಂದೇ ವಾರದ ಬಳಿಕ ಮಲಯಾಳಂನ, ‘ಬೆತ್ಲಹೇಮ್ ಕುಟುಂಬ ಯುನಿಟ್’ ಸಿನಿಮಾ ರಿಲೀಸ್ ಆಯ್ತು. ಆ ಸಿನಿಮಾ ಸಹ ಈಗಾಗಲೇ ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ಗಳಿಕೆ ದಾಟಿದೆ.
ಇದನ್ನೂ ಓದಿ:ಅನಿಲ್ ರವಿಪುಡಿ ಜೊತೆಗೆ ಮಹೇಶ್ ಬಾಬು ಸಿನಿಮಾ? ಸ್ಪಷ್ಟನೆ ಕೊಟ್ಟ ನಿರ್ದೇಶಕ
2026 ಒಂದರಲ್ಲೇ ಮೂರು 100 ಕೋಟಿ ಸಿನಿಮಾ ನೀಡಿದ್ದಾರೆ ಮಮಿತಾ ಬಿಜು. ಇವರ ಈ ಯಶಸ್ಸಿನ ಓಟ ಇನ್ನೂ ಮುಂದುವರೆಯುತ್ತಿದೆ. ಪ್ರದೀಪ್ ರಂಗನಾಥನ್ ನಟಿಸಿ ನಿರ್ದೇಶಿಸಲಿರುವ ಹೊಸ ಸಿನಿಮಾಕ್ಕೆ ಮಮಿತಾ ನಾಯಕಿ, ಅದರ ಜೊತೆಗೆ ತಮಿಳಿನ ‘ಇರಂಡು ವಾನಂ’ ಹೆಸರಿನ ಸಿನಿಮಾನಲ್ಲೂ ನಟಿಸುತ್ತಿದ್ದಾರೆ. ‘ಹೆಲೋ ಡಿಯರ್’ ಸಹ ಇದೇ ವರ್ಷ ರಿಲೀಸ್ ಆಗಲಿದ್ದು, ಇವುಗಳಲ್ಲಿ ಎಷ್ಟು ಸಿನಿಮಾಗಳು 100 ಕೋಟಿ ಕಲೆಕ್ಷನ್ ದಾಟಲಿವೆ ಕಾದು ನೋಡಬೇಕಿದೆ.
ಮಮಿತಾ ಬಿಜು 2016 ರಿಂದಲೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮೊದಲಿಗೆ ಬಾಲನಟಿಯಾಗಿ ಎಂಟ್ರಿ ಕೊಟ್ಟ ಅವರು ಪೋಷಕ ನಟಿಯಾಗಿ, ನಾಯಕ ನಟಿಯಾಗಿ ನಟಿಸಲು ಆರಂಭಿಸಿದರು. 2024ರ ‘ಪ್ರೇಮಲು’ ಸಿನಿಮಾಕ್ಕೆ ಮುಂಚೆ 16 ಮಲಯಾಳಂ ಸಿನಿಮಾಗಳಲ್ಲಿ ಮಮಿತಾ ನಟಿಸಿದ್ದರು. ಆದರೆ ಅವರಿಗೆ ಹೆಸರು ತಂದುಕೊಟ್ಟಿದ್ದು ‘ಪ್ರೇಮಲು’ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:01 pm, Thu, 27 August 26




