AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಒಡಹುಟ್ಟಿದ ಸಹೋದರ ಬೆನ್ನಿಗೆ ಚೂರಿ ಹಾಕಿದ, ಪ್ರಭಾಸ್ ಜೊತೆಗೆ ನಿಂತ’

Prabhas-Manchu Vishnu: ಪ್ರಭಾಸ್ ತಮ್ಮ ನಟನೆ, ಭಾರಿ ಸಂಭಾವನೆಯ ಜೊತೆಗೆ ಹೃದಯ ವೈಶಾಲ್ಯಕ್ಕೂ ಖ್ಯಾತರು. ಪ್ರಭಾಸ್ ಆತಿಥ್ಯದ ಬಗ್ಗೆಯಂತೂ ಬಾಲಿವುಡ್​ನಲ್ಲೂ ಚರ್ಚೆಗಳು ನಡೆಯುವುದು ಗೊತ್ತೇ ಇದೆ. ಕೇವಲ ಹೊಟ್ಟೆ ತುಂಬ ಊಟ ಹಾಕುವುದು ಮಾತ್ರವೇ ಅಲ್ಲ, ಟಾಲಿವುಡ್​ನಲ್ಲಿ ಹಲವಾರು ಪೋಷಕ ನಟರಿಗೆ, ತಂತ್ರಜ್ಞರಿಗೆ ಆರ್ಥಿಕ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಗೆಳೆಯರ ಬೆಂಬಲಕ್ಕೆ ಮೊದಲು ಬಂದು ನಿಲ್ಲುತ್ತಾರೆ. ಇಲ್ಲಿದೆ ಉದಾಹರಣೆ...

‘ಒಡಹುಟ್ಟಿದ ಸಹೋದರ ಬೆನ್ನಿಗೆ ಚೂರಿ ಹಾಕಿದ, ಪ್ರಭಾಸ್ ಜೊತೆಗೆ ನಿಂತ’
Prabhas
ಮಂಜುನಾಥ ಸಿ.
|

Updated on: May 17, 2025 | 7:28 PM

Share

ನಟ ಪ್ರಭಾಸ್ (Prabhas) ಪ್ಯಾನ್ ವರ್ಲ್ಡ್ ಸ್ಟಾರ್ ಆಗಿದ್ದಾರೆ. ಅವರಿಗಾಗಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಸಾಲಿನಲ್ಲಿ ನಿಂತಿವೆ. ಸ್ಟಾರ್ ಆಗಿರುವ ಪ್ರಭಾಸ್ ತಮ್ಮ ನಟನೆ, ಭಾರಿ ಸಂಭಾವನೆಯ ಜೊತೆಗೆ ಹೃದಯ ವೈಶಾಲ್ಯಕ್ಕೂ ಖ್ಯಾತರು. ಪ್ರಭಾಸ್ ಆತಿಥ್ಯದ ಬಗ್ಗೆಯಂತೂ ಬಾಲಿವುಡ್​ನಲ್ಲೂ ಚರ್ಚೆಗಳು ನಡೆಯುವುದು ಗೊತ್ತೇ ಇದೆ. ಕೇವಲ ಹೊಟ್ಟೆ ತುಂಬ ಊಟ ಹಾಕುವುದು ಮಾತ್ರವೇ ಅಲ್ಲ, ಟಾಲಿವುಡ್​ನಲ್ಲಿ ಹಲವಾರು ಪೋಷಕ ನಟರಿಗೆ, ತಂತ್ರಜ್ಞರಿಗೆ ಆರ್ಥಿಕ ಸಹಾಯ ಮಾಡುತ್ತಲೇ ಇರುತ್ತಾರೆ. ತಮ್ಮ ಗೆಳೆಯರ ಬೆಂಬಲಕ್ಕೆ ಮೊದಲು ಬಂದು ನಿಲ್ಲುತ್ತಾರೆ.

ಮಂಚು ವಿಷ್ಣು, ತೆಲುಗು ಚಿತ್ರರಂಗದ ಆರಕ್ಕೇರದ, ಮೂರಕ್ಕಿಳಿಯದ ನಾಯಕ ನಟ. ಇತ್ತೀಚೆಗಂತೂ ಅವರಿಗೆ ಅವಕಾಶಗಳೇ ನಿಂತು ಹೋಗಿದ್ದವು. ಚಿತ್ರರಂಗದಲ್ಲಿ ಉಳಿದುಕೊಳ್ಳುವ ಕೊನೆಯ ಪ್ರಯತ್ನವಾಗಿ ‘ಕಣ್ಣಪ್ಪ’ ಹೆಸರಿನ ಸಿನಿಮಾ ಅನ್ನು ಅವರೇ ನಿರ್ಮಾಣ ಮಾಡಿ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾದ ಮೇಲೆ ಅವರ ವೃತ್ತಿ ಜೀವನ ನಿಂತಿದೆ. ಮಂಚು ವಿಷ್ಣು, ಪ್ರಭಾಸ್ ಅವರ ಹಳೆಯ ಮಿತ್ರ. ಬಾಲ್ಯದ ಸ್ನೇಹಿತ. ಹಾಗಾಗಿ ಮಂಚು ವಿಷ್ಣುಗಾಗಿ ಯಾರ ಸಿನಿಮಾದಲ್ಲೂ ಅತಿಥಿ ಪಾತ್ರ ಮಾಡದ ಪ್ರಭಾಸ್, ‘ಕಣ್ಣಪ್ಪ’ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಪ್ರಭಾಸ್ ಅವರನ್ನು ತಮ್ಮ ಸಿನಿಮಾನಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವಂತೆ ಮಾಡಲು ದೊಡ್ಡ ದೊಡ್ಡ ನಟರು, ನಿರ್ಮಾಪಕರು ಸಾಲುಗಟ್ಟಿ ನಿಂತಿದ್ದಾರೆ. ಅತಿಥಿ ಪಾತ್ರಕ್ಕೆ ನೂರಾರು ಕೋಟಿ ಸಂಭಾವನೆ ಕೊಡಲು ರೆಡಿ ಇದ್ದಾರೆ. ಆದರೆ ಪ್ರಭಾಸ್, ತಮ್ಮ ಗೆಳೆಯನಿಗಾಗಿ ಒಂದು ರೂಪಾಯಿ ಸಹ ಹಣ ಪಡೆಯದೆ ‘ಕಣ್ಣಪ್ಪ’ ಸಿನಿಮಾದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಪ್ರಭಾಸ್ ಅವರ ಹೃದಯ ವೈಶಾಲ್ಯತೆಯನ್ನು ಇತ್ತೀಚೆಗಿನ ಸಂದರ್ಶನದಲ್ಲಿ ಮಂಚು ವಿಷ್ಣು ಕೊಂಡಾಡಿದ್ದಾರೆ.

ಇದನ್ನೂ ಓದಿ:ಪ್ರಭಾಸ್​ಗೆ 200 ಕೋಟಿ ರೂಪಾಯಿ ಸಂಭಾವನೆ ನೀಡಲು ರೆಡಿ ಇದ್ದಾರೆ ನಿರ್ಮಾಪಕರು

‘ರಕ್ತ ಹಂಚಿಕೊಂಡು ಹುಟ್ಟಿದ ಸಹೋದರನೇ ನನ್ನ ಅವನತಿ ನೋಡಲು ಕಾದು ಕೂತಿದ್ದಾನೆ. ಆದರೆ ಪ್ರಭಾಸ್ ಗೆಳೆಯನಿಗಾಗಿ ದೊಡ್ಡ ತ್ಯಾಗ ಮಾಡಿದ್ದಾನೆ. ನನ್ನ ಒಳಿತನ್ನೇ ಕೋರಿದ್ದಾನೆ. ಪ್ರಭಾಸ್ ನನಗೆ ಬಹಳ ವರ್ಷದಿಂದಲೂ ಗೊತ್ತು, ನಾನು ಆಗಾಗ್ಗೆ ಆತನನ್ನು ಬೈಯ್ಯುತ್ತಾ ಇರುತ್ತೇನೆ. ನೀನು ಬದಲಾಗುವುದಿಲ್ಲ, ನೀನು ಎಷ್ಟು ದೊಡ್ಡ ಸ್ಟಾರ್ ಎಂಬುದೇ ನಿನಗೆ ಗೊತ್ತಿಲ್ಲ ಎಂದು. ಅದಕ್ಕೆಲ್ಲ, ಪ್ರಭಾಸ್, ಬದಲಾಗಲು ಏನಿದೆ? ಎನ್ನುತ್ತಾನೆ. ಪ್ರಭಾಸ್ ಬದಲಾಗುವುದಿಲ್ಲ, ಆತನ ಪ್ರಪಂಚದಲ್ಲಿ ಆತ ಆರಾಮವಾಗಿದ್ದಾನೆ’ ಎಂದಿದ್ದಾರೆ.

ಮಂಚು ಕುಟುಂಬದಲ್ಲಿ ಗಲಾಟೆಗಳು ನಡೆದಿದ್ದು ಮಂಚು ವಿಷ್ಣು ಅವರ ಸಹೋದರ ಮಂಚು ಮನೋಜ್ ಅಣ್ಣ ಹಾಗೂ ತಂದೆಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಬ್ಬರು ಅಣ್ಣ-ತಮ್ಮಂದಿರ ನಡುವೆ ಆಸ್ತಿಗಾಗಿ ದೊಡ್ಡ ಜಗಳವೇ ನಡೆದಿದೆ. ಜಗಳ ಈಗಲೂ ಚಾಲ್ತಿಯಲ್ಲಿದೆ. ಅಂದಹಾಗೆ ‘ಕಣ್ಣಪ್ಪ’ ಸಿನಿಮಾ ಬೇಡರ ಕಣ್ಣಪ್ಪ ಕತೆ ಆಧರಿತ ಸಿನಿಮಾ ಆಗಿದ್ದು ಜೂನ್ 27ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ