ಬಿಜೆಪಿ, ಜನಸೇನಾ ಅಭ್ಯರ್ಥಿಗಳ ಪರ ಚಿರಂಜೀವಿ ಚುನಾವಣಾ ಪ್ರಚಾರ; ವಿಡಿಯೋ ವೈರಲ್​

|

Updated on: Apr 22, 2024 | 3:45 PM

ಬಿಜೆಪಿ ಹಾಗೂ ಜನಸೇನಾ ಪಕ್ಷದ ಅಭ್ಯರ್ಥಿಗಳ ಪರ ‘ಮೆಗಾ ಸ್ಟಾರ್​’ ಚಿರಂಜೀವಿ ಚುನಾವಣಾ ಪ್ರಚಾರ ಮಾಡಿದ್ದಾರೆ. ಈ ವರ್ಷ ಚಿರಂಜೀವಿ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗಿತ್ತು. ಈಗ ಕೇಂದ್ರ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಚಿರಂಜೀವಿ ಅವರು ಈ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂಬ ಟೀಕೆ ಕೆಲವರಿಂದ ವ್ಯಕ್ತವಾಗಿದೆ.

ಬಿಜೆಪಿ, ಜನಸೇನಾ ಅಭ್ಯರ್ಥಿಗಳ ಪರ ಚಿರಂಜೀವಿ ಚುನಾವಣಾ ಪ್ರಚಾರ; ವಿಡಿಯೋ ವೈರಲ್​
ಪಂಚಕರ್ಲ ರಮೇಶ್​, ಚಿರಂಜೀವಿ, ಸಿಎಂ ರಮೇಶ್​
Follow us on

ಅನೇಕ ವರ್ಷಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ನಟ ‘ಮೆಗಾ ಸ್ಟಾರ್​’ ಚಿರಂಜೀವಿ (Mega Star Chiranjeevi) ಅವರು ಈಗ ಅಚ್ಚರಿ ಮೂಡಿಸಿದ್ದಾರೆ. ಭಾನುವಾರ (ಏಪ್ರಿಲ್​ 21) ಜನ ಸೇನಾ ಹಾಗೂ ಭಾರತೀಯ ಜನತಾ ಪಕ್ಷದ (BJP) ಅಭ್ಯರ್ಥಿಗಳ ಪರವಾಗಿ ಚಿರಂಜೀವಿ ಅವರು ಮತ ಯಾಚಿಸಿದ್ದಾರೆ. ಲೋಕಸಭಾ ಚುನಾವಣೆ (Lok Sabha Elections) ಹಾಗೂ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಆಪ್ತರ ಪರವಾಗಿ ಅವರು ಮತ ಕೇಳಿದ್ದಾರೆ. ಚಿರಂಜೀವಿ ಅವರು ಮಾತನಾಡಿದ ವಿಡಿಯೋ ವೈರಲ್​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಅನಕಾಪಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿಎಂ ರಮೇಶ್​ ಹಾಗೂ ಪೆಂದುರ್ತಿ ವಿಧಾನಸಭಾ ಕ್ಷೇತ್ರದ ಜನಸೇನಾ ಅಭ್ಯರ್ಥಿ ಪಂಚಕರ್ಲ ರಮೇಶ್​ ಅವರ ಜೊತೆ ಸೋಫಾದಲ್ಲಿ ಕುಳಿತು ಚಿರಂಜೀವಿ ಅವರು ಮಾತನಾಡಿದ್ದಾರೆ. ‘ಹಲವು ವರ್ಷಗಳ ಬಳಿಕ ನಾನು ರಾಜಕೀಯದ ಬಗ್ಗೆ ಮಾತನಾಡುತ್ತಿದ್ದೇನೆ. ಅದಕ್ಕೆ ಕಾರಣ ಇದೆ. ನನ್ನ ತಮ್ಮ ಪವನ್​ ಕಲ್ಯಾಣ್​, ತೆಲುಗು ದೇಶಂ ಮುಖಂಡ ಚಂದ್ರಬಾಬು ನಾಯ್ಡು ಹಾಗೂ ಬಿಜೆಪಿ ಮುಖಂಡರು ಕೈ ಜೋಡಿಸಿದ್ದಾರೆ. ಇದು ಉತ್ತಮ ಬೆಳವಣಿಗೆ’ ಎಂದು ಚಿರಂಜೀವಿ ಹೇಳಿದ್ದಾರೆ.

‘ನಾನು ನಿಮ್ಮ ಎದುರು ಬರಲು ಇನ್ನೊಂದು ಕಾರಣ ನನ್ನ ಆಪ್ತರಾದ ಸಿಎಂ ರಮೇಶ್​ ಹಾಗೂ ಪಂಚಕರ್ಲ ರಮೇಶ್​. ಅವರು ಒಳ್ಳೆಯವರು ಮತ್ತು ಸಮರ್ಥರು. ಅನಕಾಪಲ್ಲಿ ಭಾಗದ ಅಭಿವೃದ್ಧಿಗಾಗಿ ಅವರು ಕೆಲಸ ಮಾಡುತ್ತಾರೆ ಎಂದು ನಾನು ಬಲವಾಗಿ ನಂಬಿದ್ದೇನೆ. ಸಿಎಂ ರಮೇಶ್​ ಅವರಿಗೆ ಕೇಂದ್ರದಲ್ಲಿ ಒಳ್ಳೆಯ ಒಡನಾಟ ಇದೆ. ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಅಭಿವೃದ್ಧಿಗೆ ಇದು ಸಹಕಾರಿ ಆಗಲಿದೆ. ಅವರು ಕೆಲಸ ಮಾಡಿ ತೋರಿಸುತ್ತಾರೆ ಎಂಬ ನಂಬಿಕೆ ನನಗೆ ಇದೆ’ ಎಂದಿದ್ದಾರೆ ಚಿರಂಜೀವಿ.

ವೈರಲ್​ ವಿಡಿಯೋ:

‘ಇವರಿಬ್ಬರು ಚುನಾವಣೆ ಗೆಲ್ಲಲು ನಿಮ್ಮ ಸಹಾಯ ಬೇಕೆಂದು ನಾನು ಕೇಳಿಕೊಳ್ಳುತ್ತೇನೆ. ಆಂಧ್ರ ಪ್ರದೇಶ ಅಭಿವೃದ್ಧಿ ಹೊಂದಬೇಕು ಎಂಬ ತೀವ್ರ ಹಂಬಲ ನನಗಿದೆ. ಅದಕ್ಕಾಗಿ ನಿಮ್ಮ ಸಹಾಯ ಬೇಕು. ಉತ್ತಮ ನಾಯಕರನ್ನು ಆಯ್ಕೆ ಮಾಡಲು ನೀವೆಲ್ಲ ಮತ ನೀಡಬೇಕು ಎಂದು ನಾನು ಒತ್ತಾಯಿಸುತ್ತೇನೆ. ಅದರಿಂದ ಆಂಧ್ರ ಪ್ರದೇಶ ಬೇಗ ಅಭಿವೃದ್ಧಿ ಆಗಲಿ’ ಎಂದು ‘ಮೆಗಾ ಸ್ಟಾರ್​’ ಚಿರಂಜೀವಿ ಹೇಳಿದ್ದಾರೆ.

ಇದನ್ನೂ ಓದಿ: ಚುನಾವಣಾ ಪ್ರಚಾರದ ವೇಳೆ ಸಹೋದರ ಚಿರಂಜೀವಿ ಭೇಟಿ ಮಾಡಿದ ಪವನ್ ಕಲ್ಯಾಣ್; ಮೂಡಿತು ಕುತೂಹಲ

ರಾಜಕೀಯದಲ್ಲಿ ಪರಸ್ಪರ ಕೆಸರೆರೆಚಾಟ ಇರುತ್ತದೆ. ಹಾಗಾಗಿ ಅದರಿಂದ ತಾವು ದೂರ ಉಳಿಯುವುದಾಗಿ ಚಿರಂಜೀವಿ ಅವರು ಈ ಮೊದಲು ಹೇಳಿಕೆ ನೀಡಿದ್ದರು. ಆದರೆ ಈಗ ಅವರು ಮತ್ತೆ ರಾಜಕೀಯದ ಬಗ್ಗೆ ಮಾತನಾಡಿರುವುದರಿಂದ ಕೆಲವರು ವ್ಯಂಗ್ಯವಾಡುತ್ತಿದ್ದಾರೆ. ಇತ್ತೀಚೆಗೆ ಎನ್​ಡಿಎ ಸರ್ಕಾರದಿಂದ ಚಿರಂಜೀವಿ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಲಾಗಿತ್ತು. ಅದಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಅವರು ಈಗ ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ ಎಂದು ಕೂಡ ಕೆಲವರು ಟೀಕೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.