‘ಆಚಾರ್ಯ’ ಸಿನಿಮಾ ವಿತರಕರ ನಷ್ಟ ಭರಿಸಲು ಸಂಭಾವನೆಯನ್ನೇ ಹಿಂದಿರುಗಿಸಿದ ನಟ ಚಿರಂಜೀವಿ

ಜೂನ್ ಮೊದಲ ವಾರದಲ್ಲಿ ಚಿರಂಜೀವಿ ಭಾರತಕ್ಕೆ ಮರಳಿದ್ದಾರೆ. ಹೈದರಾಬಾದ್​ಗೆ ಬಂದು ಅವರು ನಿರ್ದೇಶಕ ಕೊರಟಾಲ ಶಿವ ಜತೆ ಮಾತುಕತೆ ನಡೆಸಿದ್ದಾರೆ.

‘ಆಚಾರ್ಯ’ ಸಿನಿಮಾ ವಿತರಕರ ನಷ್ಟ ಭರಿಸಲು ಸಂಭಾವನೆಯನ್ನೇ ಹಿಂದಿರುಗಿಸಿದ ನಟ ಚಿರಂಜೀವಿ
ಚಿರಂಜೀವಿ
TV9kannada Web Team

| Edited By: Rajesh Duggumane

Jun 08, 2022 | 1:45 PM

ಚಿರಂಜೀವಿ ಹಾಗೂ ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾ (Acharya Movie) ಏಪ್ರಿಲ್ 29ರಂದು ತೆರೆಗೆ ಬಂದು ದೊಡ್ಡ ನಷ್ಟ ಅನುಭವಿಸಿತು. ಈ ಸಿನಿಮಾದಿಂದ ವಿತರಕರು ಕೈ ಸುಟ್ಟುಕೊಂಡಿದ್ದಾರೆ. ಹಾಕಿದ ಬಂಡವಾಳದ ಶೇ. 25ರಷ್ಟು ಮಾತ್ರ ಕೈ ಸೇರಿದೆ. ಉಳಿದ ಹಣ ನಷ್ಟವಾಗಿದೆ. ಇದಕ್ಕೆ ಸಂಬಂಧಿಸಿ ವಿತರಕರು ನೇರವಾಗಿ ‘ಮೆಗಾಸ್ಟಾರ್’ ಚಿರಂಜೀವಿಗೆ (Chiranjeevi) ಪತ್ರ ಬರೆದಿದ್ದರು. ಈ ವಿಚಾರ ಸುಖಾಂತ್ಯ ಕಂಡಿದೆ. ವಿತರಕರಿಗೆ ಹಣ ಹಿಂದಿರುಗಿಸಲು ತಂಡ ಮುಂದಾಗಿದೆ.

‘ಆಚಾರ್ಯ’ ಸಿನಿಮಾ ತೆರೆಕಂಡ ಬಳಿಕ ಮೇ ಮೊದಲ ವಾರದಲ್ಲಿ ಚಿರಂಜೀವಿ ಅವರು ಪತ್ನಿ ಜತೆ ವಿದೇಶಕ್ಕೆ ತೆರಳಿದ್ದರು. ಸಮ್ಮರ್ ವೆಕೇಶನ್ ಕಳೆಯಲು ಅಮೆರಿಕಕ್ಕೆ ಹಾರಿದ್ದರು. ಒಂದು ತಿಂಗಳ ಕಾಲ ಚಿರು ಅಮೆರಿಕದಲ್ಲೇ ಉಳಿದುಕೊಂಡಿದ್ದರು. ಜೂನ್ ಮೊದಲ ವಾರದಲ್ಲಿ ಅವರು ಭಾರತಕ್ಕೆ ಮರಳಿದ್ದಾರೆ. ಹೈದರಾಬಾದ್​ಗೆ ಬಂದು ಅವರು ನಿರ್ದೇಶಕ ಕೊರಟಾಲ ಶಿವ ಜತೆ ಮಾತುಕತೆ ನಡೆಸಿದ್ದಾರೆ.

ಅಮೇಜಾನ್ ಪ್ರೈಮ್ ವಿಡಿಯೋ ‘ಆಚಾರ್ಯ’ ಸಿನಿಮಾದ ಒಟಿಟಿ ಹಕ್ಕನ್ನು ಪಡೆದಿದೆ. ಈ ಒಟಿಟಿ ಸಂಸ್ಥೆ ನಿರ್ಮಾಪಕರಿಗೆ ಹಣವನ್ನು ನೀಡುವುದು ಬಾಕಿ ಇದೆ. ಈ ಹಣ ನೀಡಿದ ನಂತರದಲ್ಲಿ ವಿತರಕರಿಗೆ ಹಣ ಹಿಂದಿರುಗಿಸುವ ಭರವಸೆಯನ್ನು ನಿರ್ಮಾಪಕ ನಿರಂಜನ್​ ರೆಡ್ಡಿ ನೀಡಿದ್ದಾರೆ. ಇನ್ನು, ಚಿರಂಜೀವಿ ಕೂಡ ಈ ಸಿನಿಮಾ ವಿಚಾರದಲ್ಲಿ ದೊಡ್ಡ ತ್ಯಾಗ ಮಾಡಿದ್ದಾರೆ. ತಾವು ಪಡೆದ ಒಟ್ಟೂ ಸಂಭಾವನೆಯಲ್ಲಿ 10 ಕೋಟಿ ರೂಪಾಯಿಯನ್ನು ಹಿಂದಿರುಗಿಸಿದ್ದು, ಇದನ್ನು ವಿತರಕರ ನಷ್ಟ ಭರಿಸಲು ಬಳಕೆ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ‘ಆಚಾರ್ಯ’ ಒಟಿಟಿ ರಿಲೀಸ್​ಗೆ ದಿನಾಂಕ ಫಿಕ್ಸ್​; ರಾಮ್​ ಚರಣ್​ ನಟನೆಯ ಎರಡು ಸಿನಿಮಾ ಒಂದೇ ದಿನ ರಿಲೀಸ್

ಈ ವಿಚಾರ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಳ್ಳಲು ಒಂದು ಕಾರಣವಿದೆ. ರಾಯಚೂರು ಮೂಲದ ವಿತರಕ, ಪ್ರದರ್ಶಕ ರಾಜ್​ಗೋಪಾಲ್ ಬಾಲಾಜಿ ಅವರು ಚಿರಂಜೀವಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲ, ಶೇ.75 ನಷ್ಟ ಅನುಭವಿಸಿರುವ ಬಗ್ಗೆ ಅವರು ದೂರಿದ್ದರು. ‘ಆಚಾರ್ಯ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿಲ್ಲ. ಇದರಿಂದ ನನಗೆ ತುಂಬಾ ನಿರಾಸೆಯಾಗಿದೆ. ನಾನು ಒಂದು ವರ್ಷದ ಹಿಂದೆ ಈ ಸಿನಿಮಾ ಬುಕ್ ಮಾಡಿದ್ದೆ. ಒಪ್ಪಿಕೊಂಡಂತೆ ಸಿನಿಮಾ ಬಿಡುಗಡೆಗೂ ಮುನ್ನ ಸಂಪೂರ್ಣ ಹಣ ನೀಡಿದ್ದೇನೆ. ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ ಎಂದು ಹೈದರಾಬಾದ್ ಮಂದಿ ಅಂದುಕೊಂಡಿದ್ದಾರೆ. ಆದರೆ, ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಓಡುತ್ತಿಲ್ಲ’ ಎಂದು ಹೇಳಿದ್ದರು. ಚಿರಂಜೀವಿ ಅವರು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದರು. ಅವರ ಈ ತ್ಯಾಗಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada