ಚಿರಂಜೀವಿ ನಟನೆಯ ‘ಆಚಾರ್ಯ’ ಸಿನಿಮಾ ರಿಲೀಸ್ ಡೇಟ್ ಮುಂದೂಡಿಕೆ; ಫೆಬ್ರವರಿಯಲ್ಲೂ ಕೊವಿಡ್ ಕಾಟ
‘ಕೊರೊನಾ ಹರಡುತ್ತಿರುವ ಕಾರಣ ಆಚಾರ್ಯ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಬಗ್ಗೆ ತಿಳಿಸಲಾಗುವುದು’ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಕೊರೊನಾ ವೈರಸ್ (Coronavirus) ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದರಿಂದ ಬಹುತೇಕ ಉದ್ಯಮಗಳು ಸೊರಗುತ್ತಿವೆ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ ಆದ ನಂತರವಂತೂ ಚಿತ್ರೋದ್ಯಮ ತಣ್ಣಗಾಗಿದೆ. ಸಿನಿಮಾಗೆ ಸಂಬಂಧಿಸಿದ ಎಲ್ಲ ವಹಿವಾಟುಗಳು ಸ್ಥಗಿತಗೊಂಡಿವೆ. ಅನೇಕ ದೊಡ್ಡ ಬಜೆಟ್ನ ಸಿನಿಮಾಗಳು ಸಹ ರಿಲೀಸ್ ದಿನಾಂಕ ಮುಂದೂಡಿಕೊಂಡಿವೆ. ಜ.7ರಂದು ಬಿಡುಗಡೆ ಆಗಿಬೇಕಿದ್ದ ‘ಆರ್ಆರ್ಆರ್’, ಜ.14ರಂದು ತೆರೆಕಾಣಬೇಕಿದ್ದ ‘ರಾಧೆ ಶ್ಯಾಮ್’ ಸೇರಿದಂತೆ ಹಲವು ಚಿತ್ರಗಳ ರಿಲೀಸ್ ದಿನಾಂಕ ಪೋಸ್ಟ್ ಪೋನ್ ಆಗಿವೆ. ಇವಿಷ್ಟು ಜನವರಿ ತಿಂಗಳಲ್ಲಿ ಬರಬೇಕಿದ್ದ ಸಿನಿಮಾಗಳ ಸ್ಥಿತಿ. ಅಷ್ಟೇ ಅಲ್ಲ, ಫೆಬ್ರವರಿಯಲ್ಲೂ ಕೊರೊನಾ ತಗ್ಗುವ ಲಕ್ಷಣ ಕಾಣುತ್ತಿಲ್ಲ. ಹಾಗಾಗಿ ಫೆ.4ರಂದು ರಿಲೀಸ್ ಆಗಬೇಕಿದ್ದ ‘ಆಚಾರ್ಯ’ (Acharya Movie) ಚಿತ್ರ ಕೂಡ ಬಿಡುಗಡೆ ದಿನಾಂಕವನ್ನು ಮುಂದೂಡಿಕೊಂಡಿದೆ. ‘ಮೆಗಾ ಸ್ಟಾರ್’ ಚಿರಂಜೀವಿ (Megastar Chiranjeevi) ಅಭಿನಯದ ಈ ಸಿನಿಮಾ ಮೇಲೆ ಅಭಿಮಾನಿಗಳು ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಚಿತ್ರತಂಡವೇ ಈ ಸುದ್ದಿಯನ್ನು ಅಧಿಕೃತಗೊಳಿಸಿದೆ. ಈ ಸಿನಿಮಾದಲ್ಲಿ ರಾಮ್ ಚರಣ್ ಕೂಡ ಒಂದು ಪಾತ್ರ ಮಾಡಿದ್ದಾರೆ.
‘ಕೊರೊನಾ ಹರಡುತ್ತಿರುವ ಕಾರಣ ಆಚಾರ್ಯ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಶೀಘ್ರದಲ್ಲೇ ಹೊಸ ರಿಲೀಸ್ ಡೇಟ್ ಬಗ್ಗೆ ಅಪ್ಡೇಟ್ ತಿಳಿಸಲಾಗುವುದು. ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎಲ್ಲರೂ ಸುರಕ್ಷಿತರಾಗಿರಿ. ದಯವಿಟ್ಟು ಕೊವಿಡ್ ನಿಯಮಗಳನ್ನು ಪಾಲಿಸಿ’ ಎಂದು ‘ಆಚಾರ್ಯ’ ಚಿತ್ರತಂಡ ಪ್ರಕಟಣೆ ಬಿಡುಗಡೆ ಮಾಡಿದೆ.
ಈ ಸಿನಿಮಾದಲ್ಲಿ ಚಿರಂಜೀವಿ, ರಾಮ್ ಚರಣ್ ಜೊತೆಗೆ ಪೂಜಾ ಹೆಗ್ಡೆ, ಕಾಜಲ್ ಅಗರ್ವಾಲ್, ಸೋನು ಸೂದ್ ಮುಂತಾದವರು ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಖ್ಯಾತ ನಿರ್ದೇಶಕ ಕೊರಟಾಲ ಶಿವ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಮಣಿ ಶರ್ಮಾ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಕೌತುಕ ಮೂಡಿಸಿವೆ. ಆದಷ್ಟು ಬೇಗ ಈ ಸಿನಿಮಾ ನೋಡಬೇಕು ಎಂದು ಚಿರಂಜೀವಿ ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ ಅದಕ್ಕೆ ಕೊರೊನಾ ವೈರಸ್ ಅಡ್ಡಗಾಲು ಹಾಕುತ್ತಿದೆ.
The release of #Acharya stands postponed due to the pandemic.
The new release date would be announced soon.
Megastar @KChiruTweets @AlwaysRamCharan #Sivakoratala @MsKajalAggarwal @hegdepooja #ManiSharma #NiranjanReddy @MatineeEnt @KonidelaPro pic.twitter.com/oVjqcvfl9U
— Konidela Pro Company (@KonidelaPro) January 15, 2022
ಒಂದು ವೇಳೆ ಕೊರೊನಾ ನಿಯಂತ್ರಣಕ್ಕೆ ಬಂದರೂ ಕೂಡ ಚಿತ್ರಮಂದಿರಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ಸಿಗಬೇಕು. ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಫ್ಯೂ ತೆರವುಗೊಂಡ ನಂತರವೇ ದೊಡ್ಡ ಸಿನಿಮಾಗಳು ರಿಲೀಸ್ ಆಗಲಿವೆ.
ಇದನ್ನೂ ಓದಿ:
ದಕ್ಷಿಣ ಭಾರತಕ್ಕೆ ಬಂದು ಚಿರಂಜೀವಿಗೆ ಹೊಸ ಐಡಿಯಾ ಕೊಟ್ಟ ಸಲ್ಮಾನ್ ಖಾನ್
ಸಿನಿಪ್ರಿಯರಿಗೆ ನಿರಾಸೆ ಮೂಡಿಸಿದ ‘ಆರ್ಆರ್ಆರ್’; ಅಧಿಕೃತವಾಗಿ ಚಿತ್ರದ ರಿಲೀಸ್ ಡೇಟ್ ಮುಂದೂಡಿಕೆ