ಪವನ್ ಕಲ್ಯಾಣ್ ಸಿನಿಮಾ ಬಿಡುಗಡೆ ತಡೆಯಲು ಯತ್ನ? ತನಿಖೆಗೆ ಆದೇಶಿಸಿದ ಸಚಿವ
Pawan Kalyan: ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ, ನಟ ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ. ಆದರೆ ಇದೇ ಸಮಯದಲ್ಲಿ ಆಂಧ್ರ, ತೆಲಂಗಾಣ ರಾಜ್ಯಗಳ ಸಿನಿಮಾ ಪ್ರದರ್ಶಕರು ಬಂದ್ ಘೋಷಣೆ ಮಾಡಿದ್ದರು. ಇದೀಗ ಆಂಧ್ರ ಪ್ರದೇಶ ಸರ್ಕಾರದ ಸಚಿವರೊಬ್ಬರು ತನಿಖೆಗೆ ಆದೇಶಿಸಿದ್ದು, ಪವನ್ ಕಲ್ಯಾಣ್ ವಿರುದ್ಧ ಪಿತೂರಿಯ ಭಾಗವಾಗಿ ಈ ಪ್ರತಿಭಟನೆ ಘೋಷಣೆ ಮಾಡಲಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ಆದೇಶಿಸಿದ್ದಾರೆ.

ತೆಲುಗು ರಾಜ್ಯಗಳಲ್ಲಿ ವಿಶೇಷವಾಗಿ ಆಂಧ್ರ ಪ್ರದೇಶದಲ್ಲಿ ಸಿನಿಮಾ (Cinema) ಮತ್ತು ರಾಜಕೀಯದ ನಡುವೆ ಅಂತರ ಬಹಳ ತೆಳು. ಈಗ ಆಳ್ವಿಕೆಯಲ್ಲಿರುವ ಸರ್ಕಾರದ ಇಬ್ಬರು ಪ್ರಮುಖ ಮುಖಂಡರ ಕುಟುಂಬವು ಸಿನಿಮಾ ರಂಗಕ್ಕೆ ಸೇರಿದ ಕುಟುಂಬ. ಸಿನಿಮಾದಲ್ಲಿ ಸಕ್ರಿಯರಾಗಿರುವ ಸಾಕಷ್ಟು ಮಂದಿ ಆಂಧ್ರ ಪ್ರದೇಶ ರಾಜಕೀಯದಲ್ಲಿಯೂ ಸಕ್ರಿಯರಾಗಿದ್ದಾರೆ. ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್, ಡಿಸಿಎಂ ಆದ ಬಳಿಕವೂ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ಸಿನಿಮಾ ಬಿಡುಗಡೆ ಆಗಬೇಕಿತ್ತು. ಆದರೆ ಆ ಸಿನಿಮಾ ಬಿಡುಗಡೆಯನ್ನು ತಡೆಯಲು ಕೆಲವರು ಯತ್ನಿಸಿದ್ದಾರೆಂದು ಕೆಲವರಿಗೆ ಅನಿಸಿದ್ದು, ಇದೀಗ ಆಂಧ್ರದ ಸಚಿವರೊಬ್ಬರು ಈ ವಿಷಯವಾಗಿ ತನಿಖೆಗೆ ಆದೇಶ ನೀಡಿದ್ದಾರೆ.
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ ಹಲವು ಅಡೆ-ತಡೆಗಳ ಬಳಿಕ, ಹಲವು ಮುಂದೂಡಿಕೆಗಳ ಬಳಿಕ ಜೂನ್ 12 ರಂದು ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆ ಬಗ್ಗೆ ಈಗಾಗಲೇ ಘೋಷಣೆ ಮಾಡಲಾಗಿತ್ತು. ಸಿನಿಮಾದ ಪ್ರಚಾರ ಕಾರ್ಯ ಶುರುವಾಗಬೇಕಿತ್ತು, ಅಷ್ಟರಲ್ಲಿ ಆಂಧ್ರ ಪ್ರದೇಶ ಮತ್ತು ತೆಲಂಗಾಣ ಸಿನಿಮಾ ಪ್ರದರ್ಶಕರ ಸಂಘವು ಪ್ರತಿಭಟನೆ ಘೋಷಿಸಿ, ಜೂನ್ 1 ರಿಂದ ಎರಡೂ ರಾಜ್ಯಗಳಲ್ಲಿ ಚಿತ್ರಮಂದಿರಗಳನ್ನು ಬಂದ್ ಮಾಡುವುದಾಗಿ ಘೋಷಣೆ ಮಾಡಿದವು.
ಪವನ್ ಕಲ್ಯಾಣ್ ವಿರುದ್ಧ ರಾಜಕೀಯ ಪಿತೂರಿಯ ಭಾಗವಾಗಿಯೇ ಸಿನಿಮಾ ಪ್ರದರ್ಶಕರು ಹಠಾತ್ತನೆ ಈ ನಿರ್ಧಾರ ಮಾಡಿದ್ದಾರೆ ಎಂಬ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಯ್ತು. ಇದೀಗ ಈ ಬಗ್ಗೆ ತನಿಖೆ ನಡೆಸುವಂತೆ ಆಂಧ್ರ ಪ್ರದೇಶ ಸಿನಿಮಾಟೊಗ್ರಫಿ ಸಚಿವ ಕಂಡುಲ ದುರ್ಗೇಶ್ ಆದೇಶ ನೀಡಿದ್ದಾರೆ. ಗೃಹ ಇಲಾಖೆಯ ಪ್ರಿನ್ಸಿಪಲ್ ಸೆಕರೇಟರಿಗೆ ಪತ್ರ ಬರೆದಿರುವ ಸಿನಿಮಾಟೊಗ್ರಫಿ ಮಂತ್ರಿ, ಸಿನಿಮಾ ಪ್ರದರ್ಶಕರ ಈ ನಿರ್ಣಯದ ಉದ್ದೇಶವನ್ನು ತನಿಖೆ ಮಾಡುವಂತೆ ಸೂಚಿಸಿದ್ದಾರೆ. ಅಲ್ಲದೆ ಸಿನಿಮಾ ಪ್ರದರ್ಶಕರು ಮತ್ತು ವಿತಕರು ಕೆಟ್ಟ ಉದ್ದೇಶದಿಂದ ಕೂಟ ಮಾಡಿಕೊಂಡಿದ್ದಾರೆಯೇ ಎಂಬುದರ ತನಿಖೆಯನ್ನೂ ಮಾಡುವಂತೆ ಸೂಚಿಸಿದ್ದಾರೆ.
ಇದನ್ನೂ ಓದಿ:ದುಬೈನಲ್ಲಿ ತೆಲಂಗಾಣದ ಇಬ್ಬರ ಕೊಲೆ; ಕೇಂದ್ರ ಸಚಿವ ಕಿಶನ್ ರೆಡ್ಡಿ ಕಳವಳ
ಇತ್ತೀಚೆಗಷ್ಟೆ ತೆಲುಗು ಫಿಲಂ ಚೇಂಬರ್ ಸಿನಿಮಾ ಪ್ರದರ್ಶಕರ ಸಭೆ ಕರೆದು ಸಂಧಾನ ಮಾಡಿದ್ದು, ತಾತ್ಕಾಲಿಕವಾಗಿ ಸಿನಿಮಾ ಪ್ರದರ್ಶಕರು ಬಂದ್ ಅನ್ನು ಹಿಂಪಡೆದಿದ್ದಾರೆ. ಬಂದ್ ಹೊರತಾಗಿ ಬೇಡಿಕೆಗಳನ್ನು ಈಡೇರಿಕೆ ಮಾಡಿಕೊಳ್ಳಲು ಬೇರೆ ದಾರಿಗಳಲ್ಲಿ ಪ್ರಯತ್ನ ಮಾಡುವುದಾಗಿ ಪ್ರದರ್ಶಕರು ಹೇಳಿದ್ದಾರೆಂದು ಫಿಲಂ ಚೇಂಬರ್ ಹೇಳಿದೆ. ಸಭೆಯ ಬಳಿಕ ಸಿನಿಮಾ ಪ್ರದರ್ಶಕರೆಲ್ಲ ಪ್ರತ್ಯೇಕ ಸಭೆ ನಡೆಸಿ ತಮ್ಮ ಅಧಿಕೃತ ನಿರ್ಧಾರವನ್ನು ಮೇ 25ರಂದು ಪ್ರಕಟಿಸುವುದಾಗಿ ಹೇಳಿದ್ದಾರೆ.
ಪವನ್ ಕಲ್ಯಾಣ್ ನಟನೆಯ ‘ಹರಿ ಹರ ವೀರ ಮಲ್ಲು’ ಸಿನಿಮಾ,ಮೊಘಲರ ವಿರದ್ಧ ಹೋರಾಡಿದ ಹೋರಾಟಗಾರನ ಕತೆಯನ್ನು ಹೊಂದಿದೆ. ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಸಿನಿಮಾ ಪ್ರಾರಂಭವಾಗಿ ಆರು ವರ್ಷಗಳಾಗಿದ್ದು ಜೂನ್ 12 ಕ್ಕೆ ತೆರೆಗೆ ಬರುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




