Appatha Review: ಲಘು ಹಾಸ್ಯದ ಜೊತೆ ಭಾವುಕತೆಯ ಲಾಸ್ಯ ಬೆರೆತ ‘ಅಪ್ಪತ’; ಇದು ಊರ್ವಶಿ ನಟನೆಯ 700ನೇ ಸಿನಿಮಾ

Urvashi 700th Movie: ಊರ್ವಶಿ ನಿಭಾಯಿಸಿದ ಅಪ್ಪತ ಎಂಬ ಪಾತ್ರವು ಪ್ರೇಕ್ಷಕರ ಮನಸ್ಸನ್ನು ಗಾಢವಾಗಿ ಆವರಿಸಿಕೊಳ್ಳುತ್ತದೆ. 700ನೇ ಸಿನಿಮಾ ಎಂಬುದು ಊರ್ವಶಿ ಅವರ ಸಿನಿಮಾ ಪ್ರಯಾಣಕ್ಕೆ ಸಂದ ಗೌರವವೂ ಹೌದು.

Appatha Review: ಲಘು ಹಾಸ್ಯದ ಜೊತೆ ಭಾವುಕತೆಯ ಲಾಸ್ಯ ಬೆರೆತ ‘ಅಪ್ಪತ’; ಇದು ಊರ್ವಶಿ ನಟನೆಯ 700ನೇ ಸಿನಿಮಾ
ಊರ್ವಶಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Jul 29, 2023 | 7:45 AM

ಚಿತ್ರ: ಅಪ್ಪತ

ನಿರ್ಮಾಣ: ಜ್ಯೋತಿ ದೇಶಪಾಂಡೆ

ನಿರ್ದೇಶನ: ಪ್ರಿಯದರ್ಶನ್​

ಪಾತ್ರವರ್ಗ: ಊರ್ವಶಿ, ಡೆನ್ (ಶ್ವಾನ), ಅಮಿತ್ ಭಾರ್ಗವ್, ಕಾವೇರಿ ಜಾ, ಅರುಳ್​ ದಾಸ್​, ಲತಾ ಮೊದಲಾದವರು.

ಸ್ಟಾರ್​: 3/5

ಮುಖ್ಯಭೂಮಿಕೆಯಲ್ಲಿ ನಾಯಿಯನ್ನು ಇಟ್ಟುಕೊಂಡಿರುವ ಸಿನಿಮಾಗಳು ಪ್ರೇಕ್ಷಕರಿಗೆ ಇಷ್ಟವಾದ ಹಲವು ಉದಾಹರಣೆಗಳಿವೆ. 1987ರಲ್ಲಿ ಬಂದು, 2009ರಲ್ಲಿ ಇಂಗ್ಲಿಷ್‌ನಲ್ಲಿ ರಿಮೇಕ್ ಆದ “ಹಚಿಕೊ’ ಎಂಬ ಜಪಾನಿ ಸಿನಿಮಾದಿಂದ ಹಿಡಿದು ಕನ್ನಡದ ‘777 ಚಾರ್ಲಿ’ ತನಕ ನಾಯಿ ಗೆಲ್ಲಿಸಿಕೊಟ್ಟ ಸಿನಿಮಾಗಳ ಪಟ್ಟಿ ದೊಡ್ಡದಿದೆ. ಅದೇ ರೀತಿ ಗಮನ ಸೆಳೆಯುತ್ತಿರುವ ಮತ್ತೊಂದು ಸಿನಿಮಾ ಪ್ರಿಯದರ್ಶನ್‌ ನಿರ್ದೇಶನದ ತಮಿಳು ಸಿನಿಮಾ ‘ಅಪ್ಪತಾ’. ಜುಲೈ 29ರಿಂದ ಜಿಯೋ ಸಿನಿಮಾ’ (Jio Cinema) ಒಟಿಟಿಯಲ್ಲಿ ಉಚಿತ ವೀಕ್ಷಣೆಗೆ ಲಭ್ಯ ಆಗಿರುವ ಈ ಸಿನಿಮಾವನ್ನು ‘ಜಿಯೊ ಸ್ಟೂಡಿಯೋಸ್‌ ಪ್ರೆಸೆಂಟ್’ ಮಾಡಿದೆ. ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ನಿರ್ದೇಶಿಸಿರುವ ಹೆಸರಾಂತ ಹಿರಿಯ ನಿರ್ದೇಶಕ ಪ್ರಿಯದರ್ಶನ್‌ (Priyadarshan) ಅವರ 96ನೇ ಸಿನಿಮಾ ಇದು ಎಂಬುದು ಈ ಚಿತ್ರದ ಒಂದು ಹೆಗ್ಗಳಿಕೆ. ಇದರ ಜೊತೆಗೆ ಇನ್ನೊಂದು ವಿಶೇಷತೆಯೂ ಇದೆ. ‘ಅಪ್ಪತ’ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿರುವವರು ದಕ್ಷಿಣ ಭಾರತದ ಜನಪ್ರಿಯ ನಟಿ ಊರ್ವಶಿ (Urvashi). ಇದು ಅವರ ನಟನೆಯ 700ನೇ ಸಿನಿಮಾ!

‘ಅಪ್ಪತ’ ಸಿನಿಮಾದ ಕಥೆ ಏನು?

ಹಳ್ಳಿಯೊಂದರಲ್ಲಿ ಉಪ್ಪಿನಕಾಯಿ ತಯಾರಿಸಿ ಮಾರಾಟ ಮಾಡಿಕೊಂಡು ಬದುಕು ನಡೆಸುತ್ತಿರುವ ಕಣ್ಣಮ್ಮ ಎಲ್ಲರಿಗೂ ಅಪ್ಪತ ಎಂದೇ ಪರಿಚಿತೆ. ಒಬ್ಬಂಟಿಯಾಗಿ ಬೆಳೆಸಿದ ಮಗನೀಗ ಚೆನ್ನೈ ಮಹಾನಗರ ಸೇರಿಕೊಂಡು, ಊರನ್ನೂ ಅಮ್ಮನನ್ನೂ ಮರೆತುಬಿಟ್ಟಿದ್ದಾನೆ. ಅಡವಿಸ್ವಾಮಿಯಾಗಿದ್ದವನು, ನಗರದಲ್ಲಿ ಸ್ಯಾಮ್ ಆಗಿ ಬದಲಾಗಿದ್ದಾನೆ. ಅವನಿಗೆ ಊರಲ್ಲಿನ ಆಸ್ತಿಯ ಮೇಲೆ ಕಣ್ಣಿದೆಯಷ್ಟೆ. ಆದರೆ ಅಪ್ಪತಾಳೋ ಊರಿನ ಎಲ್ಲರಿಗೂ ಬೇಕಾದವಳು. ಕೆಲಸ ಕೇಳಿಕೊಂಡು ಬರುವ ಬಡ ಹೆಂಗಸರಿಂದ ಹಿಡಿದು, ಪೊಲೀಸ್‌ ಇನ್‌ಸ್ಪೆಕ್ಟರ್​ವರೆಗೂ ಎಲ್ಲರಿಗೂ ಅವಳು ನೆಚ್ಚು. ಮಗನಿಂದ ಪೂರ್ತಿ ಕಡಗಣನೆಗೆ ಒಳಗಾಗಿದ್ದರೂ, ಅದನ್ನು ಯಾರ ಎದುರಿಗೂ ಹೇಳಿಕೊಳ್ಳುವವಳಲ್ಲ. ಯಾರಾದರೂ ತನ್ನ ಮಗನ ಕುರಿತು ಅಡ್ಡಮಾತಾಡಿದರೆ ಸಹಿಸಿಕೊಳ್ಳುವವಳೂ ಅಲ್ಲ. ಇಂಥ ಅಪ್ಪತಳಿಗೆ ಇರುವ ಒಂದೇ ಒಂದು ಭಯ ಎಂದರೆ ನಾಯಿಗಳದ್ದು. ನಾಯಿ ಬೊಗಳಿದ್ದು ಕೇಳಿದರೆ ಪೇಟೆಗೆ ಹೋಗುವ ದಾರಿಯನ್ನೇ ಬದಲಿಸುವಷ್ಟು ನಾಯಿ ಭಯ ಅವಳಿಗೆ.

ಇದನ್ನೂ ಓದಿ: Kausalya Supraja Rama Review: ನೀವು ನಿಜವಾದ ಗಂಡಸು ಹೌದಾ? ಕೌಸಲ್ಯ ಸುಪ್ರಜಾ ರಾಮ ಚಿತ್ರ ನೋಡಿದ್ರೆ ಬಯಲಾಗುತ್ತೆ ಸತ್ಯ

ಕಾದಿರುತ್ತದೆ ಟ್ವಿಸ್ಟ್​:

ಹೀಗಿರುವಾಗ ಮಗ ಅವಳನ್ನು ಚೆನ್ನೈಯ ತನ್ನ ಮನೆಗೆ ಕರೆಯುತ್ತಾನೆ. ಫೋನ್‌ ಮಾಡಿ ಮಾತಾಡುವಷ್ಟೂ ಪುರಸೊತ್ತಿಲ್ಲದವನು ಮನೆಗೇ ಕರೆದಿದ್ದಾನೆ ಎಂದಮೇಲೆ ಕೇಳಬೇಕೆ? ಅಪ್ಪತ ಸಂತೋಷಕ್ಕೆ ಎಣೆಯೇ ಇರುವುದಿಲ್ಲ. ಆದರೆ ಆ ಸಂತೋಷ ಮಗನ ಮನೆ ತಲುಪುವಷ್ಟರವರೆಗೆ ಮಾತ್ರ. ಅಲ್ಲಿ ಬಾಗಿಲು ತೆರೆದಿದ್ದೇ ಮೊದಲು ಎದುರಾಗುವುದು ಜಿಯಸ್‌! ಅಂದರೆ ಮಗನ ಮನೆಯಲ್ಲಿನ ನಾಯಿ. ಮಗ, ತನ್ನ ಫ್ಯಾಮಿಲಿ ಜೊತೆಗೆ ಪ್ರವಾಸಕ್ಕೆ ಹೋಗಬೇಕಾಗಿದ್ದರಿಂದ ನಾಯಿಯನ್ನು ನೋಡಿಕೊಳ್ಳಲು ಅಮ್ಮನನ್ನು ಮಗ ಮನೆಗೆ ಕರೆಸಿಕೊಂಡಿದ್ದಾನೆ. ಇಲ್ಲಿಗೆ ಕಥೆ ಮತ್ತೊಂದು ತಿರುವನ್ನೇ ತೆಗೆದುಕೊಳ್ಳುತ್ತದೆ. ನಾಯಿಯ ನೆರಳು ಕಂಡರೂ ಬೆಚ್ಚಿಬೀಳುವ ಅಪ್ಪತ ನಾಯಿಯೊಟ್ಟಿಗೆ ಒಬ್ಬಳೇ ಮನೆಯಲ್ಲಿ ಇರಬೇಕಾಗುತ್ತದೆ. ಅಲ್ಲಿ ಎದುರಾಗುವ ಪೇಚಾಟದ ಸನ್ನಿವೇಶಗಳು ನಾಯಿಪ್ರಿಯರಿಗಷ್ಟೇ ಅಲ್ಲ, ಊರ್ವಶಿ ಅಭಿಮಾನಿಗಳಿಗೂ ಸಾಕಷ್ಟು ಮಜ ಕೊಡುತ್ತವೆ. ಅಪ್ಪತ ಕ್ರಮೇಣ ನಾಯಿ ಜಿಯಸ್‌ ಜೊತೆಗಷ್ಟೇ ಅಲ್ಲ, ತನ್ನ ಒಳ್ಳೆಯತನದಿಂದ ಇಡೀ ಅಪಾರ್ಟ್‌ಮೆಂಟಿನವರಿಗೂ ನೆಚ್ಚಿನವಳಾಗುತ್ತಾಳೆ.

ಇದನ್ನೂ ಓದಿ: Achar And Co Review: ಮೆಟ್ರೋ ಕಾಲಕ್ಕೂ ಅನ್ವಯ ಆಗುವ ರೆಟ್ರೋ ಕಥೆಯ ಸಿನಿಮಾ ‘ಆಚಾರ್​ ಆ್ಯಂಡ್​ ಕೋ’

ನಗುವಿನ ಜೊತೆ ಭಾವುಕತೆ:

ಲಘುವಾದ ಹಾಸ್ಯ, ಭಾವುಕತೆಯ ಲಾಸ್ಯ -ಇದು ನಿರ್ದೇಶಕರು ಈ ಸಿನಿಮಾವನ್ನು ಕಟ್ಟಿರುವ ಸೂತ್ರ. 700 ಎಂಬುದು ಬರಿಯ ಸಂಖ್ಯೆಯಷ್ಟೇ ಅಲ್ಲ, ತಮ್ಮ ಅಭಿನಯದ ಅನುಭವದ ಮೊತ್ತವೂ ಹೌದು ಎಂಬುದನ್ನು ಪ್ರತಿ ಫ್ರೇಮಿನಲ್ಲಿಯೂ ಸಾಬೀತುಮಾಡುತ್ತಾರೆ ಊರ್ವಶಿ. ನಾಯಿಯೊಟ್ಟಿಗಿನ ಗುದ್ದಾಟದಲ್ಲಿ ನಗು ಉಕ್ಕಿಸಿದಷ್ಟೇ ತೀವ್ರವಾಗಿ ಹಲವು ಸನ್ನಿವೇಶಗಳಲ್ಲಿ ಕಣ್ಣಲ್ಲಿ ನೀರನ್ನೂ ಉಕ್ಕಿಸುತ್ತಾರೆ. ತೆರೆಯ ಮೇಲಷ್ಟೇ ಅಲ್ಲ, ಪ್ರೇಕ್ಷಕರ ಮನಸಲ್ಲಿಯೂ ಅವರ ಪಾತ್ರ ಗಾಢವಾಗಿ ಆವರಿಸಿಕೊಳ್ಳುತ್ತದೆ. ಇದು ಅವರ 700ನೇ ಸಿನಿಮಾ ಎಂಬುದು ಅವರ ಸಿನಿಮಾ ಪ್ರಯಾಣಕ್ಕೆ ಸಂದ ಗೌರವವೂ ಹೌದು.

ಇದನ್ನೂ ಓದಿ: Blind Movie Review: ಚುಟುಕಾದ, ಚುರುಕಾದ ಕಳ್ಳ-ಪೊಲೀಸ್​ ಕಹಾನಿ; ‘ಬ್ಲೈಂಡ್​’ ಚಿತ್ರದ ಪ್ಲಸ್ ಏನು? ಮೈನಸ್ ಏನು?

ಒಟ್ಟಾರೆ ಹೀಗಿದೆ ಅಪ್ಪತ ಸಿನಿಮಾ:

ಒಂದು ಭಾಗವನ್ನು ನಾಯಿಪ್ರಿಯರಿಗಾಗಿಯೇ ಮೀಸಲಿಟ್ಟಂತಿರುವ ನಿರ್ದೇಶಕರು, ಉಳಿದ ಕಡೆಗಳಲ್ಲಿ ಕಣ್ಣಮ್ಮನ ಪಾತ್ರದ ಮೇಲೆಯೇ ಫೋಕಸ್ ಮಾಡಿದ್ದಾರೆ. ಅಮ್ಮನ ಕಂಡರೆ ಅಸಹನೆಯಲ್ಲಿ ಕುದಿಯುವ ಅಡವಿಸ್ವಾಮಿಯ ಸಿಟ್ಟಿಗೆ ಕನ್ವಿನ್ಸ್ ಮಾಡುವಂಥ ಕಾರಣಗಳು ಸಿಗದಿರುವುದರಿಂದ, ನಿರ್ದೇಶಕರ ಅನುಕೂಲಕ್ಕಾಗಿ ಆ ಪಾತ್ರವನ್ನು ಖಳನಾಗಿಸಿದಂತೆ ಕಾಣಿಸುತ್ತದೆ. ಹಳ್ಳಿ ಮತ್ತು ನಗರಗಳನ್ನು ಚಿತ್ರಿಸುವ ರೀತಿಯಲ್ಲಿಯೂ ಕಪ್ಪು-ಬಿಳುಪಿನ ಹಳೆಯ ಮಾದರಿಯೇ ಎದುರಾಗುವುದು ಇನ್ನೊಂದು ಮಿತಿ. ಹಳ್ಳಿ ರಮ್ಯ, ನಗರ ಕೃತಕವಾದದ್ದು ಎಂಬ ಮನಸ್ಥಿತಿಯನ್ನು ಇನ್ನಾದರೂ ಮರುಪರಿಶೀಲನೆ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಇಂಥ ಕೆಲವು ಮಿತಿಗಳ ನಡುವೆಯೂ, ಪ್ರಾಣಿಪ್ರಿಯರು, ಭಾವುಕ ಕಥೆಗಳನ್ನು ಇಷ್ಟಪಡುವವರು, ಊರ್ವಶಿ ಹೊಮ್ಮಿಸುವ ನಗೆಬುಗ್ಗೆಗಳನ್ನು ಬಯಸುವವರು ಈ ಸಿನಿಮಾವನ್ನು ನೋಡಿ ಹಗುರಾಗಬಹುದು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ವಿದ್ಯಾರ್ಥಿಗಳೊಂದಿಗೆ ಕುಣಿದು ಕುಪ್ಪಳಿಸಿದ ಶಾಸಕ ಸಮೃದ್ದಿ ಮಂಜುನಾಥ್
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಮೋದಿ ಮಾತು
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಮುಡಾ ಹಗರಣದ ಕಡತಗಳನ್ನು ಸಚಿವ ಸುರೇಶ್ ಬೆಂಗಳೂರುಗೆ ತಂದಿದ್ದಾರೆ: ವಿಜಯೇಂದ್ರ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ
ಉಡುಪಿ: ಬೈಕ್​ನ ಹೆಡ್ ಲೈಟ್ ವೈಸರ್​ನಲ್ಲಿ ಹಾವು ಪ್ರತ್ಯಕ್ಷ