Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ

| Updated By: Digi Tech Desk

Updated on: Mar 17, 2023 | 2:29 PM

Upendra | Kabzaa Kannada Movie: ತಂತ್ರಜ್ಞರೇ ಈ ಸಿನಿಮಾದ ಹೀರೋಗಳು ಅಂತ ಉಪೇಂದ್ರ ಅವರು ಹೇಳಿಕೆ ನೀಡಿದ್ದರು. ‘ಕಬ್ಜ’ ನೋಡುವಾಗ ಆ ಮಾತು ಹೌದು ಅಂತ ಖಂಡಿತಾ ಎನಿಸುತ್ತದೆ.

Kabzaa Movie Review: 1970ರ ಕಾಲಕ್ಕೆ ಕರೆದೊಯ್ಯುವ ‘ಕಬ್ಜ’; ತೆರೆ ಹಿಂದಿನ ಹೀರೋಗಳ ಅದ್ದೂರಿ ಸಿನಿಮಾ
ಕಬ್ಜ ಸಿನಿಮಾ ಪೋಸ್ಟರ್
Follow us on

ಚಿತ್ರ: ಕಬ್ಜ

ನಿರ್ಮಾಣ: ಆರ್​. ಚಂದ್ರು

ನಿರ್ದೇಶನ: ಆರ್​. ಚಂದ್ರು

ಪಾತ್ರವರ್ಗ: ಉಪೇಂದ್ರ, ಶ್ರೀಯಾ ಶರಣ್​, ಕಿಚ್ಚ ಸುದೀಪ್​, ಮುರಳಿ ಶರ್ಮಾ, ಶಿವರಾಜ್​ಕುಮಾರ್​ ಮುಂತಾದವರು.

ಸ್ಟಾರ್​: 3.5/5

ನಿರ್ದೇಶಕ ಆರ್​ ಚಂದ್ರು ಅವರು ‘ಕಬ್ಜ’ ಸಿನಿಮಾಗಾಗಿ 4 ವರ್ಷ ಮೀಸಲಿಟ್ಟಿದ್ದರು. ಕೊರೊನಾ, ಲಾಕ್​ಡೌನ್​.. ಇತ್ಯಾದಿ ಅಡೆತಡೆಗಳು ಎದುರಾದರೂ ಕೂಡ ಅವುಗಳನ್ನು ಮೆಟ್ಟಿನಿಂತು ಕೆಲಸ ಮುಂದುವರಿಸಿದರು. ಇಂದು (ಮಾರ್ಚ್​ 17) ಅದ್ದೂರಿಯಾಗಿ ಎಲ್ಲ ಕಡೆಗಳಲ್ಲಿ ‘ಕಬ್ಜ’ ರಿಲೀಸ್​ ಆಗಿದೆ. ಉಪೇಂದ್ರ, ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಕಾರಣದಿಂದ ಅಭಿಮಾನಿಗಳಿಗೆ ಈ ಸಿನಿಮಾ ಮೇಲೆ ವಿಶೇಷವಾದ ನಿರೀಕ್ಷೆ ಇತ್ತು. ಆ ನಿರೀಕ್ಷೆಯ ಮಟ್ಟವನ್ನು ತಲುಪಲು ‘ಕಬ್ಜ’ ಯಶಸ್ವಿ ಆಗಿದೆಯೇ ಎಂಬುದು ತಿಳಿಯಲು ಈ ವಿಮರ್ಶೆ ಓದಿ..

‘ಕಬ್ಜ’ ಚಿತ್ರದ ಒನ್​ ಲೈನ್​ ಕಥೆ ಏನು?

ಸ್ವಾತಂತ್ರ್ಯ ಹೋರಾಟಗಾರನ ಮಗನಾದ ಆರ್ಕೇಶ್ವರ ಪೈಲೆಟ್​ ಆಗಬೇಕು ಅಂತ ಕನಸು ಕಾಣುತ್ತಾನೆ. ಆದರೆ ತಮ್ಮ ಕುಟುಂಬಕ್ಕೆ ಆದ ಅನ್ಯಾಯವನ್ನು ಮೆಟ್ಟಿ ನಿಲ್ಲಲು ಆತ ಆಯುಧ ಹಿಡಿಯಬೇಕಾಗುತ್ತದೆ. ನಂತರ ಶುರುವಾಗೋದು ರಕ್ತದೋಕುಳಿಯ ಕಥೆ. ಭೂಗತ ಲೋಕಕ್ಕೆ ಎಂಟ್ರಿ ನೀಡಿದ ಬಳಿಕ ಹೆಜ್ಜೆ ಹೆಜ್ಜೆಗೂ ಎದುರಾಗುವ ವಿಲನ್​ಗಳನ್ನು ಮಟ್ಟ ಹಾಕುವ ಆತನ ಪರಿಸ್ಥಿತಿ ಕೊನೆಗೆ ಏನಾಗುತ್ತದೆ? ಈ ಪ್ರಶ್ನೆಗೆ ಉತ್ತರ ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಡಿಫರೆಂಟ್​ ಪಾತ್ರದಲ್ಲಿ ಉಪೇಂದ್ರ:

ನಟ ಉಪೇಂದ್ರ ಅವರ ವೃತ್ತಿಜೀವನದಲ್ಲಿ ಇದು ಡಿಫರೆಂಟ್​ ಸಿನಿಮಾ. 1970ರ ಸಮಯದಲ್ಲಿ ನಡೆಯುವ ಕಥೆಯಲ್ಲಿ ಅವರು ಗ್ಯಾಂಗ್​ಸ್ಟರ್​ ಪಾತ್ರ ಮಾಡಿದ್ದಾರೆ. ಮೊದಲು ಸೌಮ್ಯವಾಗಿದ್ದು, ನಂತರ ಜ್ವಾಲಾಮುಖಿಯಂತೆ ಅಬ್ಬರಿಸುವ ಆರ್ಕೇಶ್ವರನೆಂಬ ಯುವಕನ ಪಾತ್ರದಲ್ಲಿ ಅವರು ಉತ್ತಮವಾಗಿ ಅಭಿನಯಿಸಿದ್ದಾರೆ. ಭಿನ್ನವಾದಂತಹ ಫೈಟಿಂಗ್​ ದೃಶ್ಯಗಳಲ್ಲಿ ಅವರು ಪರಾಕ್ರಮ ಮೆರೆದಿದ್ದಾರೆ.

ಸುದೀಪ್​-ಶಿವಣ್ಣ ನೀಡ್ತಾರೆ ದೊಡ್ಡ ಸರ್ಪ್ರೈಸ್​:

‘ಕಬ್ಜ’ ಚಿತ್ರಕ್ಕೆ ಹೈಪ್​ ಹೆಚ್ಚಲು ಕಾರಣವಾದ ಪ್ರಮುಖ ಅಂಶಗಳಲ್ಲಿ ಪಾತ್ರವರ್ಗ ಕೂಡ ಒಂದು. ಈ ಚಿತ್ರದಲ್ಲಿ ಉಪೇಂದ್ರ ಜೊತೆ ಕಿಚ್ಚ ಸುದೀಪ್​ ಮತ್ತು ಶಿವರಾಜ್​ಕುಮಾರ್​ ನಟಿಸಿದ್ದಾರೆ ಎಂಬ ನಿರೀಕ್ಷೆಯಿಂದಲೇ ಹೆಚ್ಚಿನ ಮಂದಿ ಚಿತ್ರಮಂದಿರಕ್ಕೆ ಬರುತ್ತಾರೆ. ಅಂಥವರಿಗೆ ಸರ್ಪ್ರೈಸ್​ ಕಾದಿರುತ್ತದೆ. ಪೊಲೀಸ್​ ಕಮಿಷನರ್​ ಪಾತ್ರದಲ್ಲಿ ಸುದೀಪ್​ ಅವರು ಆರಂಭದಲ್ಲೇ ಎಂಟ್ರಿ ನೀಡುತ್ತಾರೆ. ಒಂದು ವಿಶೇಷ ಸನ್ನಿವೇಶದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಾರೆ. ಕಿಚ್ಚ ಸುದೀಪ್​, ಶಿವರಾಜ್​ಕುಮಾರ್​ ಹಾಗೂ ಉಪೇಂದ್ರ ಅವರು ಒಟ್ಟಿಗೆ ಕಾಣಿಸಿಕೊಳ್ಳುವ ದೃಶ್ಯ ಬಂದಾಗ ಪ್ರೇಕ್ಷಕರಿಗೆ ರಿಯಲ್​ ಸರ್ಪ್ರೈಸ್​ ಎದುರಾಗುತ್ತದೆ.

ತಂತ್ರಜ್ಞರ ಸಿನಿಮಾ ‘ಕಬ್ಜ’:

ಉಪೇಂದ್ರ ಅವರು ಈ ಮೊದಲು ಅನೇಕ ಬಾರಿ ಈ ಮಾತನ್ನು ಹೇಳಿದ್ದರು. ತಂತ್ರಜ್ಞರೇ ಈ ಸಿನಿಮಾದ ಹೀರೋಗಳು ಅಂತ ಅವರು ಹೇಳಿಕೆ ನೀಡಿದ್ದರು. ‘ಕಬ್ಜ’ ನೋಡುವಾಗ ಆ ಮಾತು ಹೌದು ಅಂತ ಖಂಡಿತ ಎನಿಸುತ್ತದೆ. ನಿರ್ದೇಶಕ ಆರ್​. ಚಂದ್ರು ಅವರು ಒಂದು ಕಲ್ಪನಾಲೋಕವನ್ನು ತೆರೆದಿಟ್ಟಿದ್ದಾರೆ. ಅದಕ್ಕೆ ಪೂರಕವಾಗಿ ಕಲಾ ನಿರ್ದೇಶಕ ಶಿವಕುಮಾರ್​ ಕೊಡುಗೆ ನೀಡಿದ್ದಾರೆ. ಛಾಯಾಗ್ರಾಹಕ ಎಜೆ ಶೆಟ್ಟಿ ಅವರು ಎಲ್ಲವನ್ನೂ ಬೆರಗಿನಂತೆ ತೋರಿಸಿದ್ದಾರೆ. ಎಂದಿನಂತೆ ಅಬ್ಬರಿಸುವ ಸಂಗೀತದೊಂದಿಗೆ ರವಿ ಬಸ್ರೂರು ಆವರಿಸಿಕೊಂಡಿದ್ದಾರೆ.

ಇದನ್ನೂ ಓದಿ: South Indian Hero Review: ಸಿನಿಮಾ ಮಾಡೋರಿಗೂ, ನೋಡೋರಿಗೂ ಆಪ್ತ ಎನಿಸುವ ‘ಸೌತ್​ ಇಂಡಿಯನ್​ ಹೀರೋ’

ಆ್ಯಕ್ಷನ್ ಪ್ರಿಯರಿಗೆ ಖುಷಿ ಕೊಡುವ ಸಿನಿಮಾ:

‘ಕಬ್ಜ’ ಸಿನಿಮಾದಲ್ಲಿ ಪಾತ್ರಗಳಿಗಿಂತಲೂ ಹೆಚ್ಚಾಗಿ ಆಯುಧಗಳು ಮಾತನಾಡುತ್ತವೆ. ಪ್ರತಿ ಸನ್ನಿವೇಶದಲ್ಲೂ ಗನ್​ಗಳು ಸದ್ದು ಮಾಡುತ್ತವೆ. ಲಾಂಗು, ಮಚ್ಚುಗಳು ಝಳಪಿಸುತ್ತವೆ. ಕೆಲವು ದೃಶ್ಯಗಳಲ್ಲಿ ರಕ್ತದೋಕುಳಿಯೇ ಹರಿಯುತ್ತದೆ. ಈ ರೀತಿಯ ಆ್ಯಕ್ಷನ್ ಇಷ್ಟಪಡುವ ಪ್ರೇಕ್ಷಕರಿಗೆ ‘ಕಬ್ಜ’ ಚಿತ್ರ ಮಸ್ತ್​ ಮನರಂಜನೆ ನೀಡುತ್ತದೆ.

ಬಲವಾಗಿದೆ ‘ಕಬ್ಜ’ ಪಾತ್ರವರ್ಗ:

ಅಂದಾಜು 60 ಕಲಾವಿದರು ‘ಕಬ್ಜ’ ಚಿತ್ರದಲ್ಲಿ ನಟಿಸಿದ್ದಾರೆ. ಪ್ರತಿ ಪಾತ್ರಕ್ಕೂ ಘಟಾನುಘಟಿ ಕಲಾವಿದರನ್ನು ಆರ್​. ಚಂದ್ರು ಆಯ್ಕೆ ಮಾಡಿಕೊಂಡಿದ್ದಾರೆ. ಎಲ್ಲ ಪಾತ್ರಕ್ಕೂ ಸಾಧ್ಯವಾದಷ್ಟು ಫೋಕಸ್​ ನೀಡುವ ಪ್ರಯತ್ನ ಆಗಿದೆ. ಮುರಳಿ ಶರ್ಮಾ, ನೀನಾಸಂ ಅಶ್ವತ್ಥ್​, ದೇವ್​ ಗಿಲ್​, ದಾನಿಶ್​ ಅಖ್ತರ್​, ನವಾಬ್​ ಷಾ, ಜಾನ್​ ಕೊಕೆನ್, ಬಾಲ ಕಲಾವಿದರಾದ ಚಿರು, ಜ್ಞಾನ್​​ ಸೇರಿದಂತೆ ಅನೇಕರು ತಮ್ಮ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಇದನ್ನೂ ಓದಿ: 19 20 21 Movie Review: ನಾಡಿನ ಜನ ನೋಡಲೇಬೇಕಾದ ಕಾಡಿನ ಮಕ್ಕಳ ಕಥೆ ಮತ್ತು ಘನತೆ

ರಾಜಕುಮಾರಿ ಶ್ರೀಯಾ ಶರಣ್​:

ನಟಿ ಶ್ರೀಯಾ ಶರಣ್​ ಅವರಿಗೆ ‘ಕಬ್ಜ’ ಚಿತ್ರದಲ್ಲಿ ಮಹತ್ವದ ಪಾತ್ರ ಸಿಕ್ಕಿದೆ. ರಾಜಮನೆತನದ ಮಗಳಾಗಿ ಅವರು ಮಿಂಚಿದ್ದಾರೆ. ‘ನಮಾಮಿ.. ನಮಾಮಿ..’ ಹಾಡಿನಲ್ಲಿ ಅವರು ಕಣ್ಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ಅವರು ಹೈಲೈಟ್​ ಆಗುವಂತಹ ಒಂದಷ್ಟು ದೃಶ್ಯಗಳಿವೆ. ಅವುಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡಿದ್ದಾರೆ.

ಒಟ್ಟಾರೆ ಸಿನಿಮಾ ಹೇಗಿದೆ?

‘ಕಬ್ಜ’ ಎಂಬುದು ಬೇರೆಯದೇ ಲೋಕ. ಬಾಕಿ ಸಿನಿಮಾಗಳಲ್ಲಿ ನೋಡಿದ್ದಕ್ಕಿಂತಲೂ ಭಿನ್ನವಾದ ದೃಶ್ಯಗಳು ಇಲ್ಲಿ ಕಾಣಸಿಗುತ್ತವೆ. ರೆಟ್ರೋ ಕಾಲದ ಕಥೆಯನ್ನು ಫೀಲ್​ ಮಾಡಬೇಕು ಎಂಬುವವರಿಗೆ ಈ ಚಿತ್ರ ಹೆಚ್ಚು ಇಷ್ಟ ಆಗುತ್ತದೆ. ಮೇಕಿಂಗ್​ ದೃಷ್ಟಿಯಿಂದ ಸಾಕಷ್ಟು ಶ್ರೀಮಂತಿಕೆ ಕಾಣಿಸುತ್ತದೆ. ಕೆಲವೇ ಸೆಕೆಂಡ್​ಗಳು ಬಂದು ಹೋಗುವ ಫ್ರೇಮ್​ಗಳಿಗೂ ಆರ್​. ಚಂದ್ರು ಅವರು ಬೆಟ್ಟದಷ್ಟು ಕಾಳಜಿ ವಹಿಸಿದ್ದಾರೆ. ವೇಗವಾಗಿ ಸಾಗುವ ನಿರೂಪಣೆ ಕೂಡ ಈ ಸಿನಿಮಾದ ಪ್ಲಸ್​ ಪಾಯಿಂಟ್​. ತಾನ್ಯಾ ಹೋಪ್​ ಡ್ಯಾನ್ಸ್​ ಮಾಡಿರುವ ‘ಚುಂ ಚುಂ ಚಳಿ ಚಳಿ..’ ಹಾಡು ಕಥೆಯ ಓಟಕ್ಕೆ ಕೊಂಚ ಅಡ್ಡಿ ಮಾಡಿದೆ ಎನಿಸಿದರೂ ಸ್ಪೆಷಲ್​ ಸಾಂಗ್​ ಬಯಸುವವರಿಗೆ ಇಷ್ಟ ಆಗುತ್ತದೆ.

ಇದನ್ನೂ ಓದಿ: Dooradarshana Review: ‘ದೂರದರ್ಶನ’ ಪರದೆಯಲ್ಲಿ ಬಿತ್ತರಗೊಂಡ ಆ ದಿನಗಳ ನೆನಪು; ಬೇಕಿತ್ತು ಇನ್ನಷ್ಟು ಹೊಳಪು

ಬರಲಿದೆ ‘ಕಬ್ಜ 2’:

ಆರ್. ಚಂದ್ರು ಅವರು ಈವರೆಗೂ ಹೇಳಿರುವುದು ಅರ್ಧ ಕಹಾನಿ ಮಾತ್ರ. ಒಂದು ಮುಖ್ಯ ಘಟ್ಟಕ್ಕೆ ಬಂದು ‘ಕಬ್ಜ’ ಕಥೆ ನಿಲ್ಲುತ್ತದೆ. ಮುಂದೇನಾಯ್ತು ಎಂಬುದನ್ನು ಅವರು ‘ಕಬ್ಜ 2’ ಚಿತ್ರದಲ್ಲಿ ತಿಳಿಸಲಿದ್ದಾರೆ. ಅದರಲ್ಲಿ ಯಾವೆಲ್ಲ ಪಾತ್ರಗಳು ಹೈಲೈಟ್​ ಆಗಲಿವೆ ಎಂಬುದು ತಿಳಿಯಲು ‘ಪಾರ್ಟ್​ 2’ ಬರೋತನಕ ಕಾಯಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:36 pm, Fri, 17 March 23