Martin Review: ಆರ್ಭಟಕ್ಕೆ, ಅದ್ದೂರಿತನಕ್ಕೆ, ಆ್ಯಕ್ಷನ್ಗೆ ಆದ್ಯತೆ ನೀಡಿದ ಮಾರ್ಟಿನ್
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಆದ ‘ಮಾರ್ಟಿನ್’ ಸಿನಿಮಾ ಇಂದು (ಅಕ್ಟೋಬರ್ 11) ಬಿಡುಗಡೆ ಆಗಿದೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ತೆರೆಕಂಡಿದೆ. ನಿರ್ದೇಶಕ ಎ.ಪಿ. ಅರ್ಜುನ್ ಮತ್ತು ನಟ ಧ್ರುವ ಸರ್ಜಾ ಕಾಂಬಿನೇಷನ್ನಲ್ಲಿ ಮೂಡಿಬಂದ ಎರಡನೇ ಸಿನಿಮಾ ಇದು. ಸಿನಿಮಾ ಹೇಗಿದೆ ಎಂಬ ವಿಮರ್ಶೆ ಇಲ್ಲಿದೆ ಓದಿ..
ಸಿನಿಮಾ: ಮಾರ್ಟಿನ್. ನಿರ್ಮಾಣ: ಉದಯ್ ಕೆ. ಮೆಹ್ತಾ. ನಿರ್ದೇಶನ: ಎ.ಪಿ. ಅರ್ಜುನ್. ಪಾತ್ರವರ್ಗ: ಧ್ರುವ ಸರ್ಜಾ, ವೈಭವಿ ಶಾಂಡಿಲ್ಯ, ಅನ್ವೇಷಿ ಜೈನ್, ನಿಕಿತಿನ್ ಧೀರ್, ಚಿಕ್ಕಣ್ಣ, ಕಾವ್ಯಾ ಶಾಸ್ತ್ರಿ ಮುಂತಾದವರು. ಸ್ಟಾರ್: 3/5
ಅಭಿಮಾನಿಗಳಿಂದ ‘ಆ್ಯಕ್ಷನ್ ಪ್ರಿನ್ಸ್’ ಎಂದು ಕರೆಸಿಕೊಳ್ಳುವ ಧ್ರುವ ಸರ್ಜಾ ಅವರು ಪ್ರತಿ ಸಿನಿಮಾದಲ್ಲೂ ಸಾಹಸ ದೃಶ್ಯಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡಲು ಪ್ರಯತ್ನಿಸುತ್ತಾರೆ. ‘ಮಾರ್ಟಿನ್’ ಸಿನಿಮಾದಲ್ಲೂ ಇದು ಮುಂದುವರಿದಿದೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಧ್ರುವ ಸರ್ಜಾ ನಟನೆಯ ಅತಿ ಅದ್ದೂರಿಯಾದ ಸಿನಿಮಾ ಇದು. ಆ ಕಾರಣದಿಂದಲೂ ಈ ಚಿತ್ರ ಹೈಪ್ ಸೃಷ್ಟಿ ಮಾಡಿತ್ತು. ಈಗ ಈ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿದೆ. ಎ.ಪಿ. ಅರ್ಜುನ್ ಅವರು ಪಕ್ಕಾ ಕಮರ್ಷಿಯಲ್, ಮಸಾಲಾ ಶೈಲಿಯಲ್ಲಿ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.
ಹೊಡಿಬಡಿ ದೃಶ್ಯದ ಮೂಲಕವೇ ‘ಮಾರ್ಟಿನ್’ ಸಿನಿಮಾದ ಕಥೆ ಆರಂಭ ಆಗುತ್ತದೆ. ಹೀರೋ ಎಂಟ್ರಿ ಆಗುತ್ತಿದ್ದಂತೆಯೇ ಆ್ಯಕ್ಷನ್ ಆರ್ಭಟ ಇನ್ನಷ್ಟು ಜಾಸ್ತಿ ಆಗುತ್ತದೆ. ಕಥೆಯ ಶುರುವಿನಿಂದ ಕೊನೆಯ ತನಕ ಈ ಸಿನಿಮಾದಲ್ಲಿ ಆ್ಯಕ್ಷನ್ಗೆ ಕೊರತೆ ಇಲ್ಲ. ಎಲ್ಲವನ್ನೂ ಗ್ರ್ಯಾಂಡ್ ಆಗಿ ತೋರಿಸಬೇಕು ಎಂದು ನಿರ್ದೇಶಕ ಎ.ಪಿ. ಅರ್ಜುನ್ ತೀರ್ಮಾನಿಸಿದಂತಿದೆ. ಹಾಗಾಗಿ ಅದ್ದೂರಿತನ, ಆರ್ಭಟ ಹಾಗೂ ಆ್ಯಕ್ಷನ್ ಮೇಲೆ ಅವರು ಹೆಚ್ಚಿನ ಗಮನ ಹರಿಸಿದ್ದಾರೆ.
‘ಮಾರ್ಟಿನ್’ ಸಿನಿಮಾದ ಕಥೆಯ ಬಗ್ಗೆ ಹೇಳುವುದಾದರೆ, ಪಾಕಿಸ್ತಾನದಲ್ಲಿ ಸೆರೆಸಿಕ್ಕ ಭಾರತೀಯನಾಗಿ ಹೀರೋ ಕಾಣಿಸಿಕೊಳ್ಳುತ್ತಾನೆ. ಆದರೆ ಆತನಿಗೆ ತಾನು ಯಾರು ಎಂಬುದೇ ನೆನಪಿರುವುದಿಲ್ಲ. ತನ್ನ ಐಡೆಂಟಿಟಿ ಏನು ಎಂಬುದನ್ನು ಹುಡುಕಿಕೊಂಡು ಹೊರಟಾಗ ಅನೇಕ ಸಂಗತಿಗಳು ಮತ್ತು ಸವಾಲುಗಳು ಎದುರಾಗುತ್ತವೆ. ತನಗೆ ಎದುರಾದ ಕಷ್ಟಗಳಿಗೆಲ್ಲ ಮಾರ್ಟಿನ್ ಎಂಬುವವನು ಕಾರಣ ಎಂಬುದು ತಿಳಿಯುತ್ತದೆ. ಹಾಗಾದ್ರೆ ಆ ಮಾರ್ಟಿನ್ ಯಾರು? ಆತ ಎಲ್ಲಿದ್ದಾನೆ? ಆತನ ಹಿನ್ನೆಲೆ ಏನು ಎಂಬುದನ್ನು ವಿವರಿಸುತ್ತಾ ಸಾಗುತ್ತದೆ ಈ ಸಿನಿಮಾದ ಕಥೆ.
ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ‘ಮಾರ್ಟಿನ್’ ಸಿನಿಮಾಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡಿದ್ದಾರೆ. ಅದರ ಪರಿಣಾಮವಾಗಿ ಈ ಸಿನಿಮಾದ ಎಲ್ಲ ದೃಶ್ಯಗಳು ಅದ್ದೂರಿಯಾಗಿ ಮೂಡಿಬಂದಿದೆ. ಆ್ಯಕ್ಷನ್ ಸನ್ನಿವೇಶಗಳಿಗಾಗಿ ಸಾಕಷ್ಟು ಹಣವನ್ನು ಸುರಿಯಲಾಗಿದೆ. ಸತ್ಯ ಹೆಗಡೆ ಅವರ ಛಾಯಾಗ್ರಹಣದಿಂದ ಎಲ್ಲ ಫ್ರೇಮ್ಗಳು ರಿಚ್ ಆಗಿವೆ. ರವಿ ಬಸ್ರೂರು ಅವರ ಹಿನ್ನೆಲೆ ಸಂಗೀತದಲ್ಲಿ ಅಬ್ಬರ ಹೆಚ್ಚಿದೆ. ಗ್ರಾಫಿಕ್ಸ್ ವಿಚಾರದಲ್ಲಿ ಪ್ರೇಕ್ಷಕರ ನಿರೀಕ್ಷೆ ಇನ್ನೂ ಜಾಸ್ತಿ ಇತ್ತು. ಅಲ್ಲಿ ಚಿತ್ರತಂಡ ಕೊಂಚ ಎಡವಿದಂತಿದೆ.
ಇದನ್ನೂ ಓದಿ: ದರ್ಶನ್ ಜತೆ ಉಂಟಾದ ಮನಸ್ತಾಪದ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ
ಧ್ರುವ ಸರ್ಜಾ ಅವರು ಈ ಸಿನಿಮಾದಲ್ಲಿ ಎರಡು ಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಶೇಡ್ನಲ್ಲಿ ತುಂಬ ನಟೋರಿಯಸ್ ಆಗಿ ಕಾಣಿಸುವ ಅವರು ಇನ್ನೊಂದರಲ್ಲಿ ಪೂರ್ತಿ ವಿರುದ್ಧವಾದ ಪಾತ್ರವನ್ನು ಮಾಡಿದ್ದಾರೆ. ಕಥೆಯಲ್ಲಿ ಪ್ರೀತಿ, ಪ್ರೇಮ, ರೊಮ್ಯಾನ್ಸ್ಗೆ ಹೆಚ್ಚಿನ ಜಾಗ ಇಲ್ಲ. ಫ್ಯಾಮಿಲಿ ಪ್ರೇಕ್ಷಕರನ್ನು ಸೆಳೆದುಕೊಳ್ಳುವಂತನ ಮೆಲೋಡ್ರಾಮಾ ಕೂಡ ಇಲ್ಲ. ಅದರ ಬದಲು ಸಂಪೂರ್ಣ ಆ್ಯಕ್ಷನ್ಮಯವಾಗಿದೆ ‘ಮಾರ್ಟಿನ್’ ಪ್ರಪಂಚ.
ನಟ ಚಿಕ್ಕಣ್ಣ ಅವರು ಈ ಸಿನಿಮಾದಲ್ಲಿ ಹಾಸ್ಯದ ಬದಲು ಒಂದು ಗಂಭೀರವಾದ ಪಾತ್ರವನ್ನು ಮಾಡಿದ್ದಾರೆ. ನಟಿ ಅನ್ವೇಷಿ ಜೈನ್ ಆಗಾಗ ಕಾಣಿಸಿಕೊಂಡು ಟ್ವಿಸ್ಟ್ ನೀಡಿದ್ದಾರೆ. ವೈಭವಿ ಶಾಂಡಿಲ್ಯ ಅವರಿಗೆ ತಕ್ಕಮಟ್ಟಿಗಿನ ಸ್ಕ್ರೀನ್ ಸ್ಪೇನ್ ಸಿಕ್ಕಿದೆ. ಇನ್ನುಳಿದಂತೆ ಪೂರ್ತಿ ಸಿನಿಮಾವನ್ನು ಧ್ರುವ ಸರ್ಜಾ ಅವರೇ ಆವರಿಸಿಕೊಂಡಿದ್ದಾರೆ. ಅವರ ಅಪ್ಪಟ ಅಭಿಮಾನಿಗಳಿಗಾಗಿಯೇ ಸಿನಿಮಾವನ್ನು ಮಾಡಿದಂತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 2:58 pm, Fri, 11 October 24