ಸಿನಿಮಾ: ಪಠಾಣ್
ನಿರ್ಮಾಣ: ಯಶ್ ರಾಜ್ ಫಿಲ್ಮ್ಸ್
ನಿರ್ದೇಶನ: ಸಿದ್ದಾರ್ಥ್ ಆನಂದ್
ಪಾತ್ರವರ್ಗ: ಶಾರುಖ್ ಖಾನ್, ದೀಪಿಕಾ ಪಡುಕೋಣೆ, ಜಾನ್ ಅಬ್ರಾಹಂ, ಡಿಂಪಲ್ ಕಪಾಡಿಯಾ, ಸಲ್ಮಾನ್ ಖಾನ್ ಮುಂತಾದವರು.
ಸ್ಟಾರ್: 3.5/5
ನಟ ಶಾರುಖ್ ಖಾನ್ ಅವರು ಭರ್ಜರಿಯಾಗಿ ಕಮ್ಬ್ಯಾಕ್ ಮಾಡಿದ್ದಾರೆ. 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾ ನೀರಸ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಆ ಬಳಿಕ 4 ವರ್ಷ ಗ್ಯಾಪ್ ತೆಗೆದುಕೊಂಡ ಶಾರುಖ್ ಖಾನ್ ಈಗ ‘ಪಠಾಣ್’ ಸಿನಿಮಾದ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ದೊಡ್ಡ ಪರದೆ ಮೇಲೆ ದರ್ಶನ ನೀಡಿದ್ದಾರೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ಅವರ ಕಾಂಬಿನೇಷನ್ನಲ್ಲಿ ಮೂಡಿಬಂದ ನಾಲ್ಕನೇ ಚಿತ್ರ ಇದು. ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ಈ ಬಾರಿ ಸಾಹಸಕ್ಕೆ ಹೆಚ್ಚು ಮಹತ್ವ ನೀಡಿದ್ದಾರೆ. ವಿಲನ್ ಆಗಿ ಜಾನ್ ಅಬ್ರಾಹಂ ಅಬ್ಬರಿಸಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
ಸಿದ್ದಾರ್ಥ್ ಆನಂದ್ ನಿರ್ದೇಶನ ಮಾಡಿರುವ ‘ಪಠಾಣ್’ ಸಿನಿಮಾದ ಕಥೆಯ ಕ್ಯಾನ್ವಾಸ್ ಬಹಳ ವಿಸ್ತಾರವಾಗಿದೆ. ಭಾರತ, ರಷ್ಯಾ, ಆಫ್ರಿಕಾ, ಅಫ್ಘಾನಿಸ್ತಾನ್, ಪಾಕಿಸ್ತಾನ ಮುಂತಾದ ಕಡೆಗಳಲ್ಲಿ ಈ ಚಿತ್ರದ ಕಥೆ ಸಾಗುತ್ತದೆ. ಭಾರತದ ವಿರುದ್ಧ ಬಯೋಲಾಜಿಕಲ್ ಸಮರ ಸಾರಲು ಪಾಕಿಸ್ತಾನ ಪ್ಲ್ಯಾನ್ ಮಾಡುತ್ತದೆ. ಅದನ್ನು ತಡೆಯಲು ಭಾರತದ ಮಾಜಿ ಸೈನಿಕ ಪಠಾಣ್ (ಶಾರುಖ್ ಖಾನ್) ಸಜ್ಜಾಗುತ್ತಾನೆ. ಆದರೆ ಅವನು ಈಗಾಗಲೇ ಯುದ್ಧದಲ್ಲಿ ಗಾಯಗೊಂಡು ಸೇನೆಯಿಂದ ಹೊರಗೆ ಇರುವವನು. ಅವನ ರೀತಿಯೇ ಇರುವ ಹಲವು ಮಾಜಿ ಸೈನಿಕರನ್ನು ಕಟ್ಟಿಕೊಂಡು ಆತ ಈ ಕಾರ್ಯಚರಣೆ ಶುರು ಮಾಡುತ್ತಾನೆ. ಅದರಲ್ಲಿ ಆತ ಹೇಗೆ ಯಶಸ್ವಿ ಆಗುತ್ತಾನೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.
ಇಡೀ ಸಿನಿಮಾದಲ್ಲಿ ಹೆಚ್ಚು ಹೈಲೈಟ್ ಆಗಿರುವುದು ಜಾನ್ ಅಬ್ರಾಹಂ-ಶಾರುಖ್ ಖಾನ್ ಮುಖಾಮುಖಿ. ಜಿಮ್ ಎಂಬ ಪಾತ್ರದಲ್ಲಿ ಜಾನ್ ಅಬ್ರಾಹಂ ಕಾಣಿಸಿಕೊಂಡಿದ್ದಾರೆ. ಜಿಮ್ ಕೂಡ ಒಂದು ಕಾಲದಲ್ಲಿ ಭಾರತದ ಸೇನೆಯಲ್ಲಿ ಇದ್ದವನು. ಆದರೆ ಈಗ ಆತ ಭಯೋತ್ಪಾದಕ! ದೇಶದ ಮೇಲೆ ಸಿಕ್ಕಾಪಟ್ಟೆ ಪ್ರೀತಿ-ಗೌರವ ಇಟ್ಟುಕೊಂಡಿದ್ದ ಇಂಥ ಸೈನಿಕ ನಂತರ ಟೆರರಿಸ್ಟ್ ಆಗಿದ್ದು ಹೇಗೆ ಎಂಬ ಕುತೂಹಲದೊಂದಿಗೆ ಸಿನಿಮಾ ಸಾಗುತ್ತದೆ.
ಇದನ್ನೂ ಓದಿ: Pathaan Review: ‘ಪಠಾಣ್’ ಚಿತ್ರದ ನಕಲಿ ವಿಮರ್ಶೆ ಹಂಚಿಕೊಂಡ ಉಮೈರ್ ಸಂಧು; ಸಾಕ್ಷಿ ಸಮೇತ ಬಯಲಿಗೆಳೆದ ತರಣ್ ಆದರ್ಶ್
ಹಲವು ದೇಶಗಳಲ್ಲಿ ‘ಪಠಾಣ್’ ಚಿತ್ರವನ್ನು ಚಿತ್ರೀಕರಿಸಲಾಗಿದೆ. ವಿದೇಶಿ ಲೊಕೇಷನ್ಗಳಲ್ಲಿ ನಡೆಯುವ ಫೈಟಿಂಗ್ ದೃಶ್ಯಗಳಲ್ಲಿ ಜಾನ್ ಅಬ್ರಹಾಂ ಮತ್ತು ಶಾರುಖ್ ಖಾನ್ ಮೈನವಿರೇಳಿಸುವಂತಹ ಪರ್ಫಾರ್ಮೆನ್ಸ್ ನೀಡಿದ್ದಾರೆ. ಪ್ರತಿ ಆ್ಯಕ್ಷನ್ ಸನ್ನಿವೇಶ ಕೂಡ ಅಭಿಮಾನಿಗಳಿಗೆ ಮಸ್ತ್ ಮನರಂಜನೆ ನೀಡುವಂತಿದೆ.
‘ಬೇರಷಂ ರಂಗ್..’ ಹಾಡು ರಿಲೀಸ್ ಆದಾಗಿನಿಂದ ದೀಪಿಕಾ ಪಡುಕೋಣೆ ಅವರ ಕೇಸರಿ ಬಣ್ಣದ ಬಿಕಿನಿ ಬಗ್ಗೆಯೇ ಹೆಚ್ಚು ಸುದ್ದಿ ಆಗಿತ್ತು. ಆದರೆ ಈ ಸಿನಿಮಾದಲ್ಲಿ ಅವರು ಕೇವಲ ಬಿಕಿನಿ ಧರಿಸಿ ಪೋಸ್ ನೀಡೋಕಷ್ಟೇ ಸೀಮಿತವಾಗಿಲ್ಲ. ಶಾರುಖ್ ರೀತಿಯೇ ದೀಪಿಕಾ ಕೂಡ ಆ್ಯಕ್ಷನ್ ಸನ್ನಿವೇಶಗಳಲ್ಲಿ ಭರ್ಜರಿಯಾಗಿ ನಟಿಸಿದ್ದಾರೆ. ಅಭಿಮಾನಿಗಳಿಂದ ಅವರಿಗೆ ಭಾರಿ ಚಪ್ಪಾಳೆ ಸಿಗುತ್ತದೆ.
ಇದನ್ನೂ ಓದಿ: Pathaan Movie Twitter Review: ‘ಹೈ ವೋಲ್ಟೇಜ್ ಆ್ಯಕ್ಷನ್ ಸಿನಿಮಾ’; ‘ಪಠಾಣ್’ ನೋಡಿ ವಿಮರ್ಶೆ ತಿಳಿಸಿದ ನೆಟ್ಟಿಗರು
ಗಣರಾಜ್ಯೋತ್ಸವದ ಸಂದರ್ಭದಲ್ಲಿ ದೇಶಭಕ್ತಿ ಕಥಾಹಂದರ ಇರುವ ಸಿನಿಮಾ ಬಿಡುಗಡೆ ಆದರೆ ಪ್ರೇಕ್ಷಕರಿಗೆ ಒಳ್ಳೆಯ ಟ್ರೀಟ್ ಸಿಕ್ಕಂತಾಗುತ್ತದೆ. ‘ಪಠಾಣ್’ ಸಿನಿಮಾದಿಂದ ಅಂಥ ಟ್ರೀಟ್ ಸಿಕ್ಕಿದೆ. ಆ್ಯಕ್ಷನ್ ಪ್ರಧಾನವಾಗಿರುವ ದೇಶಭಕ್ತಿ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ವಿಶೇಷ ಕಾರ್ಯಾಚರಣೆಗೆ ನಿಯೋಜನೆಗೊಂಡ ಮಾಜಿ ಸೈನಿಕನಾಗಿ ಶಾರುಖ್ ಖಾನ್ ಇಷ್ಟವಾಗುತ್ತಾರೆ. ತಮಗೆ ಇರುವ ರೊಮ್ಯಾಂಟಿಕ್ ಹೀರೋ ಇಮೇಜ್ ಅನ್ನು ಅವರು ಸಾಧ್ಯವಾದಷ್ಟು ಬದಿಗೊತ್ತಿದ್ದಾರೆ. ಅವರ ಲವರ್ ಬಾಯ್ ಮ್ಯಾನರಿಸಂ ಈ ಸಿನಿಮಾದಲ್ಲಿ ತುಂಬ ತೆಳುವಾಗಿದೆ.
ಇದನ್ನೂ ಓದಿ: Pathaan: ‘ಸಿನಿಮಾ ಬೇರೆ, ಧರ್ಮ ಬೇರೆ; ಬಾಲಿವುಡ್ ಬಾಯ್ಕಾಟ್ ಆಗಲ್ಲ’: ಹಿರಿಯ ಪ್ರದರ್ಶಕ ಮನೋಜ್ ದೇಸಾಯಿ
ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಪಠಾಣ್’ ಚಿತ್ರದಲ್ಲಿ ಸಾಹಸ ಸನ್ನಿವೇಶಗಳಿಗೆ ಹೆಚ್ಚು ಮಹತ್ವ ನೀಡಿದ್ದಾರೆ. ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ಎಲ್ಲ ಫೈಟಿಂಗ್ ದೃಶ್ಯಗಳನ್ನು ತುಂಬ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಕಥೆಯ ಲಾಜಿಕ್ ವಿಚಾರದಲ್ಲಿ ಅವರು ಸಿಕ್ಕಾಪಟ್ಟೆ ಎಡವಿದ್ದಾರೆ. ಆ ಬಗ್ಗೆ ತುಸು ಗಮನ ಹರಿಸಿದ್ದರೆ, ಕಥೆಯನ್ನು ಇನ್ನಷ್ಟು ಮೊನಚಾಗಿಸಿದ್ದರೆ ‘ಪಠಾಣ್’ ಚಿತ್ರದ ಮೆರುಗು ಹೆಚ್ಚುತ್ತಿತ್ತು. ಸಂಗೀತ, ಛಾಯಾಗ್ರಹಣ, ವಿಎಫ್ಎಕ್ಸ್ ಸೇರಿದಂತೆ ಯಾವುದೇ ವಿಭಾಗದಲ್ಲೂ ಚಿತ್ರ ರಾಜಿ ಆಗಿಲ್ಲ. ಎಲ್ಲವನ್ನೂ ಶ್ರೀಮಂತವಾಗಿಯೇ ಕಟ್ಟಿಕೊಡಲಾಗಿದೆ.
ಇದನ್ನೂ ಓದಿ: Pathaan Movie: ‘ಪಠಾಣ್’ ಚಿತ್ರಕ್ಕೆ ಬೆಂಗಳೂರಲ್ಲಿ ಹೇಗಿದೆ ಪ್ರತಿಕ್ರಿಯೆ? ಇಲ್ಲಿದೆ ವಿಡಿಯೋ
‘ಪಠಾಣ್’ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರ ಅಭಿಮಾನಿಗಳಿಗೂ ಖುಷಿ ನೀಡುವಂತಹ ದೃಶ್ಯವಿದೆ. ‘ಟೈಗರ್’ ಪಾತ್ರದಲ್ಲಿ ಸಲ್ಲು ಎಂಟ್ರಿ ನೀಡುತ್ತಾರೆ. ಕಷ್ಟದಲ್ಲಿ ಇರುವ ಪಠಾಣ್ಗೆ ಸಹಾಯ ಮಾಡಲು ಟೈಗರ್ ಬರುತ್ತಾನೆ. ಈ ಗೆಸ್ಟ್ ಅಪಿಯರೆನ್ಸ್ ದೃಶ್ಯವನ್ನು ಸಲ್ಮಾನ್ ಫ್ಯಾನ್ಸ್ ಸಖತ್ ಎಂಜಾಯ್ ಮಾಡುತ್ತಾರೆ.
ಹಿರಿಯ ನಟಿ ಡಿಂಪಲ್ ಕಪಾಡಿಯಾ ಅವರು ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ಕೂಡ ಪ್ರೇಕ್ಷಕರ ಮನ ಗೆಲ್ಲುತ್ತಾರೆ. ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕನ್ನಡದ ನಟ ಪ್ರಕಾಶ್ ಬೆಳವಾಡಿ ಕೂಡ ಗಮನ ಸೆಳೆಯುತ್ತಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:58 am, Wed, 25 January 23