ಚಿತ್ರ: ತನುಜಾ
ನಿರ್ಮಾಣ: ಚಂದ್ರಶೇಖರ್ ಗೌಡ, ಮನೋಜ್ ಬಿ.ಜಿ.
ನಿರ್ದೇಶನ: ಹರೀಶ್ ಎಂ.ಡಿ. ಹಳ್ಳಿ
ಪಾತ್ರವರ್ಗ: ಸಪ್ತಾ ಪಾವೂರು, ರಾಜೇಶ್ ನಟರಂಗ, ವಿಶ್ವೇಶ್ವರ ಭಟ್, ಡಾ. ಕೆ. ಸುಧಾಕರ್, ಬಿ.ಎಸ್. ಯಡಿಯೂರಪ್ಪ ಮುಂತಾದವರು.
ಸ್ಟಾರ್: 3/5
ಕಟ್ಟುಕಥೆ ಹೇಳುವ ಸಿನಿಮಾಗಳಿಗೆ ಲೆಕ್ಕವಿಲ್ಲ. ಆದರೆ ನೈಜ ಘಟನೆಗಳನ್ನು ಇಟ್ಟುಕೊಂಡು ಸಿದ್ಧವಾಗುವ ಚಿತ್ರಗಳು ವಿರಳ. ಒಂದು ವೇಳೆ ಅಂಥ ಪ್ರಯತ್ನಗಳು ನಡೆದರೂ ಕೂಡ ಅವುಗಳಲ್ಲಿ ಕ್ರೈಂ ಕಥೆಗಳು, ಲವ್ ಸ್ಟೋರಿಗಳೇ ಪ್ರಮುಖವಾಗಿರುತ್ತವೆ. ಆದರೆ ಕನ್ನಡದ ‘ತನುಜಾ’ ಸಿನಿಮಾ ಭಿನ್ನವಾಗಿ ನಿಲ್ಲುತ್ತದೆ. ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯಲು ಕಷ್ಟಪಡುವ ಗ್ರಾಮೀಣ ಭಾಗದ ಹುಡುಗಿಯೊಬ್ಬಳ ರಿಯಲ್ ಕಥೆಯನ್ನು ಈ ಸಿನಿಮಾ ಜನರ ಮುಂದಿಡುತ್ತದೆ. ಈ ಸಿನಿಮಾದಲ್ಲಿ ತನುಜಾ ಪಾತ್ರವನ್ನು ಸಪ್ತಾ ಪಾವೂರು ಮಾಡಿದ್ದಾರೆ. ಪತ್ರಕರ್ತ ವಿಶ್ವೇಶ್ವರ ಭಟ್, ಸಚಿವ ಡಾ. ಕೆ. ಸುಧಾಕರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ನೈಜ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..
‘ಸ.ಹಿ.ಪ್ರಾ. ಶಾಲೆ ಕಾಸರಗೋಡು’ ಸಿನಿಮಾದಲ್ಲಿ ನಟಿ ಸಪ್ತಾ ಪಾವೂರು ಅವರು ವಿದ್ಯಾರ್ಥಿನಿ ಪಾತ್ರ ಮಾಡಿ ಗಮನ ಸೆಳೆದಿದ್ದರು. ಆ ಪಾತ್ರಕ್ಕಿಂತಲೂ ಹತ್ತು ಪಟ್ಟು ಹೆಚ್ಚು ನಟನೆಗೆ ಅವಕಾಶ ಇರುವಂತಹ ಪಾತ್ರವು ‘ತನುಜಾ’ ಚಿತ್ರದಲ್ಲಿದೆ. ಅದನ್ನು ಅವರು ತುಂಬ ಚೆನ್ನಾಗಿ ನಿಭಾಯಿಸಿದ್ದಾರೆ. ಇಡೀ ಕಥೆಯ ಕೇಂದ್ರವೇ ಆ ಪಾತ್ರ. ಕನಸು, ಹತಾಷೆ, ಧಾವಂತ ತುಂಬಿದ ತನುಜಾಳ ಪಾತ್ರಕ್ಕೆ ಸಪ್ತಾ ಅವರು ನ್ಯಾಯ ಒದಗಿಸಿದ್ದಾರೆ.
ಇದನ್ನೂ ಓದಿ: Pathaan Review: ದೇಶಭಕ್ತಿಯಲ್ಲಿ ಮಿಂದೆದ್ದ ‘ಪಠಾಣ್’; ಶಾರುಖ್ ಫ್ಯಾನ್ಸ್ಗೆ ಹಬ್ಬ, ಆ್ಯಕ್ಷನ್ ಪ್ರಿಯರಿಗೆ ಮಸ್ತ್ ಮನರಂಜನೆ
ಗ್ರಾಮೀಣ ಭಾಗದಲ್ಲಿ ವೈದ್ಯಕೀಯ ವ್ಯವಸ್ಥೆ ಎಷ್ಟು ದುಸ್ತರವಾಗಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ. ಅಂಥ ಪ್ರದೇಶದ ಹೆಣ್ಣು ಮಗಳೊಬ್ಬಳು (ತನುಜಾ) ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಪಡೆಯಲು ಕಷ್ಟಪಟ್ಟು ಓದುತ್ತಾಳೆ. ಆದರೆ ಕೊವಿಡ್ ನಿಯಮಗಳ ಕಾರಣದಿಂದ, ತಾಂತ್ರಿಕ ಅಡೆಚಣೆ ಉಂಟಾಗಿ ಆಕೆಗೆ ಎಂಟ್ರೆನ್ಸ್ ಎಕ್ಸಾಂ ಬರೆಯಲು ಹಾಲ್ ಟಿಕೆಟ್ ಸಿಗುವುದಿಲ್ಲ. ಕೊನೇ ದಿನದಲ್ಲಿ ಈ ಸಮಸ್ಯೆ ಪರಿಹರಿಸುವಲ್ಲಿ ಅಂದಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ತನುಜಾಳ ಶಿಕ್ಷಕರು ಮತ್ತು ಪಾಲಕರು ಹೇಗೆಲ್ಲ ಶ್ರಮಿಸಿದ್ದರು ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Veera Simha Reddy Review: ಬಾಲಯ್ಯ ಸಿನಿಮಾದಲ್ಲಿ ಅಲ್ಪ ಸ್ವಲ್ಪ ಎಮೋಷನ್; ಮಿಕ್ಕಿದ್ದೆಲ್ಲವೂ ಆ್ಯಕ್ಷನ್
ಬಡ ಮಕ್ಕಳ ಬದುಕಿನಲ್ಲಿ ಒಂದು ಸ್ಫೂರ್ತಿಯ ಕಿಡಿ ಹೊತ್ತಿಸುವಂತಹ ಈ ರಿಯಲ್ ಘಟನೆಯನ್ನು ರೋಚಕವಾಗಿ ತೆರೆಗೆ ತರಲಾಗಿದೆ. ಅಲ್ಲಲ್ಲಿ ಒಂದಷ್ಟು ಕೊರತೆಗಳು ಕಾಣಿಸಿದರೂ ಕೂಡ ಚಿತ್ರದ ಒಟ್ಟಾರೆ ಆಶಯದ ಮುಂದೆ ಅವುಗಳನ್ನು ಮಾಫಿ ಮಾಡಬಹುದು. ಯಡಿಯೂರಪ್ಪ, ಸುಧಾಕರ್, ಪತ್ರಕರ್ತ ವಿಶ್ವೇಶ್ವರ್ ಭಟ್ ಅವರ ಪಾತ್ರಗಳನ್ನು ನೈಜವಾಗಿ ತೋರಿಸಲಾಗಿದೆ. ಅಂಥ ಕಡೆಗಳಲ್ಲೆಲ್ಲ ಇದೊಂದು ಸಾಕ್ಷ್ಯಚಿತ್ರದ ರೀತಿ ಭಾಸವಾಗುತ್ತದೆ.
ಇದನ್ನೂ ಓದಿ: Jamaligudda Review: ಜಮಾಲಿಗುಡ್ಡ ಸಹಜ-ಸುಂದರ; ಪ್ರೇಕ್ಷಕ ನಿರೀಕ್ಷಿಸೋದು ಅದಕ್ಕಿಂತಲೂ ಎತ್ತರ
ಇದೊಂದು ಸ್ಫೂರ್ತಿಯ ಕಥೆ. ಅದಕ್ಕೆ ತಕ್ಕಂತೆಯೇ ಪ್ರದ್ಯೋತನ್ ಅವರು ಸಂಗೀತ ನೀಡಿದ್ದಾರೆ. ‘ಮುಗಿಸಾಯಿತು ಕಾಲು ದಾರಿಯ.. ತಲುಪಾಯಿತು ಹೆದ್ದಾರಿಯ..’ ಹಾಗೂ ‘ಕೆತ್ತಿ ಬಿಡು ಕನಸುಗಳ ಕಣ್ಣುಗಳ ಒಳಗೆ..’ ಹಾಡುಗಳಿಂದಾಗಿ ಸಿನಿಮಾದ ಮೆರುಗು ಹೆಚ್ಚಿದೆ. ಹಿನ್ನೆಲೆ ಸಂಗೀತದಲ್ಲೂ ಪ್ರದ್ಯೋತನ್ ಗಮನ ಸೆಳೆಯುತ್ತಾರೆ. ರವೀಂದ್ರನಾಥ್ ಟಿ. ಅವರ ಛಾಯಾಗ್ರಹಣ ಅಚ್ಚುಕಟ್ಟಾಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 pm, Thu, 2 February 23