Raghu Movie Review: ‘ರಾಘು’ ಚಿತ್ರದಲ್ಲಿ ಚಿನ್ನಾರಿ ಮುತ್ತನ ಏಕಪಾತ್ರಾಭಿನಯ; ಕನ್ನಡದಲ್ಲೊಂದು ಭಿನ್ನ ಪ್ರಯೋಗ
Raghu Kannada Movie: ಎಲ್ಲರೂ ಸಾಗಿದ ಹಾದಿಯನ್ನು ಬಿಟ್ಟು ಹೊಸ ಹಾದಿಯಲ್ಲಿ ಸಾಗುವುದು ಸವಾಲಿನ ಕೆಲಸ. ಅಂಥ ಸವಾಲನ್ನು ಸ್ವೀಕರಿಸಿ ಹೊಸ ನಿರ್ದೇಶಕ ಆನಂದ್ ರಾಜ್ ಅವರು ‘ರಾಘು’ ಸಿನಿಮಾ ಮಾಡಿದ್ದಾರೆ.
ಚಿತ್ರ: ರಾಘು
ನಿರ್ಮಾಣ: ರಣ್ವಿತ್ ಶಿವಕುಮಾರ್, ಅಭಿಷೇಕ್ ಕೋಟಾ
ನಿರ್ದೇಶನ: ಎಂ. ಆನಂದ್ ರಾಜ್
ಪಾತ್ರಧಾರಿ: ವಿಜಯ್ ರಾಘವೇಂದ್ರ
ಸ್ಟಾರ್: 3/5
ಒಂದೆಡೆ ‘ಪೊನ್ನಿಯಿನ್ ಸೆಲ್ವನ್ 2’ ರೀತಿಯ ಮಲ್ಟಿಸ್ಟಾರರ್ ಸಿನಿಮಾ ಬಿಡುಗಡೆ ಆಗಿದೆ. ಇನ್ನೊಂದೆಡೆ ಒಬ್ಬನೇ ಕಲಾವಿದನಿರುವ ‘ರಾಘು’ ಚಿತ್ರ ಕೂಡ ರಿಲೀಸ್ ಆಗಿದೆ. ಕನ್ನಡದ ಈ ಸಿನಿಮಾ ಒಂದು ಪ್ರಯೋಗದ ರೀತಿಯಲ್ಲಿ ಮೂಡಿಬಂದಿದೆ. ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಒಂದೇ ಪಾತ್ರ. ಅದಕ್ಕೆ ಜೀವ ತುಂಬಿರುವುದು ‘ಚಿನ್ನಾರಿ ಮುತ್ತ’ ವಿಜಯ್ ರಾಘವೇಂದ್ರ. ಈ ರೀತಿಯ ಭಿನ್ನ ಕಾನ್ಸೆಪ್ಟ್ ಇರುವ ಚಿತ್ರವನ್ನು ಎಂ. ಆನಂದ್ ರಾಜ್ ಅವರು ನಿರ್ದೇಶಿಸಿದ್ದಾರೆ. ಅಂಥ ಪ್ರಯೋಗಕ್ಕೆ ಬಂಡವಾಳ ಹೂಡುವುದು ರಿಸ್ಕಿ ಕೆಲಸ. ಆ ರೀತಿಯ ರಿಸ್ಕ್ ತೆಗೆದುಕೊಂಡಿರುವುದು ನಿರ್ಮಾಪಕರಾದ ರಣ್ವಿತ್ ಶಿವಕುಮಾರ್ ಮತ್ತು ಅಭಿಷೇಕ್ ಕೋಟಾ. ನಟ ವಿಜಯ್ ರಾಘವೇಂದ್ರ ಅವರಿಗೆ ಇದೊಂದು ಸವಾಲಿನ ಸಿನಿಮಾ ಎನ್ನಬಹುದು. ‘ರಾಘು’ ಚಿತ್ರದ ವಿಮರ್ಶೆ ಇಲ್ಲಿದೆ..
ಒಂದೇ ಪಾತ್ರ; ಎರಡು ಶೇಡ್:
ಸಿನಿಮಾದಲ್ಲಿ ಹತ್ತಾರು ಪಾತ್ರಗಳು ಇದ್ದಾಗ ಎಲ್ಲ ಕಲಾವಿದರಿಗೂ ಜವಾಬ್ದಾರಿ ಹಂಚಿಕೆ ಆಗುತ್ತದೆ. ಆದರೆ ಇಡೀ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಒಬ್ಬರು ಕಲಾವಿದರ ಮಾತ್ರ ಎಂದಾಗ ಆ ಪಾತ್ರಧಾರಿಯ ಮೇಲೆ ಸಂಪೂರ್ಣ ಜವಾಬ್ದಾರಿ ಇರುತ್ತದೆ. ನಟ ವಿಜಯ್ ರಾಘವೇಂದ್ರ ಅವರು ಆ ಜವಾಬ್ದಾರಿಯನ್ನು ಹೊತ್ತುಕೊಂಡು ನಟಿಸಿದ್ದಾರೆ. ‘ರಾಘು’ ಸಿನಿಮಾದಲ್ಲಿ ಇರುವುದು ಒಂದೇ ಪಾತ್ರ. ಆದರೂ ಕೂಡ ಎರಡು ಶೇಡ್ನಲ್ಲಿ ಕಾಣಿಸಿಕೊಳ್ಳುವ ಅವಕಾಶ ಅವರಿಗೆ ಸಿಕ್ಕಿದೆ.
‘ರಾಘು’ ಚಿತ್ರದ ಕಥೆ ಏನು?
ಲಾಕ್ಡೌನ್ ಎಂಬುದು ಇಡೀ ಜಗತ್ತಿಗೆ ಸವಾಲೊಡ್ಡಿದ ಸಂಗತಿ. ಆಗ ಯಾರೂ ಕೂಡ ಮನೆಯಿಂದ ಹೊರಗೆ ಬರಲು ಸಾಧ್ಯವಿರಲಿಲ್ಲ. ಆದರೆ ವೈದ್ಯಕೀಯ, ಪೊಲೀಸ್ ಮುಂತಾದ ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ ಹೊರಗೆ ಸುತ್ತಾಡುವ ಅವಕಾಶ ಇತ್ತು. ಲಾಕ್ಡೌನ್ ವೇಳೆ ಮನೆಮನೆಗೆ ಔಷಧಿ ಪೂರೈಕೆ ಮಾಡುವ ಯುವಕನೊಬ್ಬನ ಬಾಳಿನಲ್ಲಿ ಏನೆಲ್ಲ ಆಗಬಹುದು ಎಂಬ ಕಾಲ್ಪನಿಕ ಕಥೆ ‘ರಾಘು’ ಸಿನಿಮಾದಲ್ಲಿದೆ. ಆತನನ್ನು ಯಾರೋ ದೂರದಿಂದ ಆಟ ಆಡಿಸುತ್ತಾರೆ. ಆತನ ಕೈಯಿಂದ ಒಂದಷ್ಟು ಅಪರಾಧಗಳನ್ನು ಮಾಡಿಸುತ್ತಾರೆ. ಅಂತಿಮವಾಗಿ ಆತ ಅದರಿಂದ ಹೊರಬರುತ್ತಾನೋ ಇಲ್ಲವೋ ಎಂಬುದು ‘ರಾಘು’ ಚಿತ್ರದ ಕಹಾನಿ.
ಪಾತ್ರಕ್ಕೆ ಜೀವ ತುಂಬಿದ ವಿಜಯ್ ರಾಘವೇಂದ್ರ:
ವಿಜಯ್ ರಾಘವೇಂದ್ರ ಬಾಲನಟ ಆಗಿದ್ದಾಗಿನಿಂದಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಅವರಿಗೆ ಬಣ್ಣದ ಲೋಕದಲ್ಲಿ ಇರುವ ಅನುಭವ ಅಪಾರ. ಅಂಥ ಅನುಭವಿ ಕಲಾವಿದನಿಗೂ ಸವಾಲೊಡ್ಡುವಂತಹ ಪಾತ್ರ ಈ ಸಿನಿಮಾದಲ್ಲಿದೆ. ಇಡೀ ಸಿನಿಮಾದಲ್ಲಿ ಅವರೊಬ್ಬರೇ ಕಾಣಿಸಿಕೊಂಡಿದ್ದಾರೆ. ಅಕ್ಕ-ಪಕ್ಕ ಬೇರೆ ಪಾತ್ರಗಳು ಇದ್ದಾಗ ಅವುಗಳಿಗೆ ಪ್ರತಿಕ್ರಿಯಿಸುತ್ತಾ ನಟಿಸಬಹುದು. ಆದರೆ ‘ರಾಘು’ ಚಿತ್ರದಲ್ಲಿ ಇರುವುದು ಸಂಪೂರ್ಣ ಏಕಪಾತ್ರಾಭಿನಯ. ಈ ಪ್ರಯೋಗಕ್ಕೆ ವಿಜಯ್ ರಾಘವೇಂದ್ರ ಅವರು ತಮ್ಮನ್ನು ಒಡ್ಡಿಕೊಂಡಿದ್ದಾರೆ. ಸಿಕ್ಕ ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ.
ಹೊಸ ನಿರ್ದೇಶಕನ ಭಿನ್ನ ಪ್ರಯತ್ನ:
ಎಲ್ಲರೂ ಸಾಗಿದ ಹಾದಿಯಲ್ಲಿ ನಾವೂ ಸಾಗುವುದು ಸುಲಭ. ಆದರೆ ನಾವೇ ಒಂದು ಹೊಸ ಹಾದಿ ನಿರ್ಮಿಸಿಕೊಂಡು ಸಾಗುವುದು ಬಹಳ ಕಷ್ಟ. ಅಂಥ ಕಷ್ಟದ ಕೆಲಸವನ್ನು ಹೊಸ ನಿರ್ದೇಶಕ ಆನಂದ್ ರಾಜ್ ಮಾಡಿದ್ದಾರೆ. ಒಂದೇ ಪಾತ್ರವನ್ನು ಇಟ್ಟುಕೊಂಡು ಒಂದು ರೋಚಕವಾದ ಕಥೆ ಹೇಳುವ ಪ್ರಯತ್ನ ಅವರಿಂದ ಆಗಿದೆ. ಈ ಕಥೆಯಲ್ಲಿ ಕ್ರೈಂ, ಲವ್, ಸಸ್ಪೆನ್ಸ್ ಸೇರಿದಂತೆ ಅನೇಕ ಅಂಶಗಳಿವೆ. ಒಂದೇ ಪಾತ್ರವನ್ನು ಇಟ್ಟುಕೊಂಡು ಅವರು ಇಂಥ ಕಥೆ ನಿರೂಪಿಸಿರುವುದು ನಿಜಕ್ಕೂ ಭಿನ್ನವಾಗಿದೆ.
ತಂತ್ರಜ್ಞರ ಕೆಲಸಕ್ಕೆ ಮೆಚ್ಚುಗೆ:
ಇಡೀ ಸಿನಿಮಾದಲ್ಲಿ ಒಂದೇ ಪಾತ್ರ ಇರುವುದರಿಂದ ನೋಡುಗರಿಗೆ ಏಕತಾನತೆ ಕಾಡುವುದು ಸಹಜ. ಆದರೆ ಆ ರೀತಿ ಬೋರು ಹೊಡೆಸದಂತೆ ಪ್ರೇಕ್ಷಕರನ್ನು ಪರದೆಯತ್ತ ಸೆಳೆದುಕೊಳ್ಳುವುದು ಹಿನ್ನೆಲೆ ಸಂಗೀತ. ಈ ವಿಚಾರದಲ್ಲಿ ರಿತ್ವಿಕ್ ಮುರಳಿಧರ್ ಅವರ ಕೆಲಸ ಮೆಚ್ಚುವಂತಿದೆ. ಇನ್ನು, ಛಾಯಾಗ್ರಾಹಕ ಉದಯ್ ಲೀಲಾ ಕೂಡ ಹೊಗಳಿಕೆಗೆ ಅರ್ಹರು. ಸೂರಜ್ ಜೋಯಿಸ್ ಸಂಗೀತ ಸಂಯೋಜನೆಯಲ್ಲಿ ಬಂದ ಹಾಡುಗಳು ರಿಫರೆಂಟ್ ಆಗಿವೆ. ವಿಜೇತ್ ಚಂದ್ರ ಅವರ ಸಂಕಲನ ಅಚ್ಚುಕಟ್ಟಾಗಿದೆ.
ಸಿನಿಮಾದ ಮೈನಸ್ ಪಾಯಿಂಟ್ ಏನು?
ಸ್ಕ್ರೀನ್ ಪ್ಲೇ ವಿಚಾರದಲ್ಲಿ ನಿರ್ದೇಶಕರು ಇನ್ನೂ ಒಂದಷ್ಟು ಕಾಳಜಿ ವಹಿಸುವ ಅಗತ್ಯವಿತ್ತು. ಕೆಲವು ದೃಶ್ಯಗಳಲ್ಲಿ ಪ್ರೇಕ್ಷಕರಿಗೆ ಲಾಜಿಕ್ ಬಗ್ಗೆ ಪ್ರಶ್ನೆ ಎದುರಾಗುತ್ತದೆ. ಒಂದೆರಡು ಸನ್ನಿವೇಶಗಳಲ್ಲಿ ಹೀರೋ ಎದುರು ಬೇರೆ ಪಾತ್ರಗಳು ಇದ್ದರೂ ಕೂಡ ಅವುಗಳನ್ನು ತೋರಿಸದೇ ಇರಲು ಕಾರಣ ಏನು ಎಂಬುದಕ್ಕೆ ಸಿನಿಮಾದಲ್ಲಿ ಉತ್ತರ ಸಿಕ್ಕಿಲ್ಲ. ಒಟ್ಟಾರೆ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು ಪ್ರಯತ್ನಿಸಬಹುದಿತ್ತು ಎನಿಸುತ್ತದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.