ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರಿಗೆ ಎದುರಾಗಿದ್ದ ಕಾನೂನಿನ ಸಂಕಷ್ಟ ಈಗ ಕೊನೆಯಾಗಿದೆ. ಕೆಲವೇ ದಿನಗಳ ಹಿಂದೆ ಬಾಡಿಗೆ ತಾಯಿ ಮೂಲಕ ಈ ದಂಪತಿ ಅವಳಿ ಮಕ್ಕಳನ್ನು ಪಡೆದಿದ್ದರು. ಆ ಸುದ್ದಿ ಕೇಳಿ ಅಭಿಮಾನಿಗಳಿಗೆ ಸಖತ್ ಖುಷಿ ಆಗಿತ್ತು. ಅದರ ಬೆನ್ನಲ್ಲೇ ಒಂದಷ್ಟು ಆರೋಪಗಳು ಹುಟ್ಟಿಕೊಂಡಿದ್ದವು. ಬಾಡಿಗೆ ತಾಯ್ತನದ ನಿಯಮಗಳನ್ನು ನಯನತಾರಾ ಹಾಗೂ ವಿಘ್ನೇಶ್ ಶಿವನ್ (Vignesh Shivan) ಪಾಲಿಸಿಲ್ಲ ಎಂಬ ಗುಮಾನಿ ವ್ಯಕ್ತವಾಗಿತ್ತು. ಹಾಗಾಗಿ ಸೂಕ್ತ ತನಿಖೆ ನಡೆಸಲು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿತ್ತು. ಆ ಪ್ರಕರಣದ ತನಿಖೆ ಮುಗಿದಿದ್ದು, ಸ್ಟಾರ್ ದಂಪತಿಯ ಪರವಾಗಿ ವರದಿ ಸಲ್ಲಿಕೆ ಆಗಿದೆ. ಬಾಡಿಗೆ ತಾಯಿಯಿಂದ (Surrogate Mother) ಮಗು ಪಡೆಯುವಾಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ ಎಂದು ತಿಳಿದುಬಂದಿದೆ.
2022ರ ಜೂನ್ 9ರಂದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಮದುವೆ ನೆರವೇರಿತು. ಆದರೆ ಅವರು 6 ವರ್ಷಗಳ ಹಿಂದೆಯೇ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು ಎಂಬುದು ಇತ್ತೀಚೆಗೆ ತಿಳಿದುಬಂತು. ಬಾಡಿಗೆ ತಾಯಿಯಿಂದ ಮಗು ಪಡೆದಿದ್ದರಲ್ಲಿ ಅವರಿಬ್ಬರದ್ದು ಏನೂ ತಪ್ಪಿಲ್ಲದಿದ್ದರೂ ಕೂಡ ಅವರಿಗೆ ಸಹಾಯ ಮಾಡಿದ ಆಸ್ಪತ್ರೆ ಈಗ ಸಂಕಷ್ಟಕ್ಕೆ ಸಿಲುಕಿದೆ. ಬಾಡಿಗೆ ತಾಯಿಗೆ ಟ್ರೀಟ್ಮೆಂಟ್ ನೀಡಿದ ಬಗ್ಗೆ ಸೂಕ್ತ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳಲು ತನಿಖಾ ತಂಡ ಸೂಚಿಸಿದೆ. ಅಲ್ಲದೇ, ತಾತ್ಕಾಲಿಕವಾಗಿ ಈ ಆಸ್ಪತ್ರೆಯನ್ನು ಮುಚ್ಚಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.
ಬಾಡಿಗೆ ತಾಯಿ ಮೂಲಕ ಮಗು ಪಡೆಯಬೇಕು ಎಂದರೆ ಒಂದಷ್ಟು ನಿಯಮಗಳಿವೆ. ಗರ್ಭ ಧರಿಸುವ ಮಹಿಳೆಯು ಹತ್ತಿರದ ಸಂಬಂಧಿ ಆಗಿರಬೇಕು. ಆಕೆಗೆ ಮದುವೆಯಾಗಿರಬೇಕು ಮತ್ತು ವಯಸ್ಸು 25ರಿಂದ 35 ವರ್ಷದ ಒಳಗಿರಬೇಕು. ಆಕೆ ಈಗಾಗಲೇ ಒಂದು ಮಗುವನ್ನು ಪಡೆದಿರಬೇಕು. ಒಮ್ಮೆ ಮಾತ್ರ ಆಕೆ ಬಾಡಿಗೆ ತಾಯಿ ಆಗಬಹುದು. ಈ ಕೆಲಸಕ್ಕೆ ಹಣ ಪಡೆಯುವಂತಿಲ್ಲ ಎಂಬಿತ್ಯಾದಿ ನಿಮಯಗಳಿವೆ. ಇದೆಲ್ಲವನ್ನೂ ನಯನತಾರಾ-ವಿಘ್ನೇಶ್ ಶಿವನ್ ಪಾಲಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಅ.9ರಂದು ಮಕ್ಕಳ ಆಗಮನದ ವಿಷಯವನ್ನು ವಿಘ್ನೇಶ್ ಶಿವನ್ ತಿಳಿಸಿದ್ದರು. ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ಒಂದಷ್ಟು ಫೋಟೋಗಳನ್ನು ಈ ದಂಪತಿ ಹಂಚಿಕೊಂಡಿದ್ದಾರೆ. ತನಿಖೆಯಲ್ಲಿ ರಿಲೀಫ್ ಸಿಕ್ಕಿದ್ದರಿಂದ ಅವರಿಬ್ಬರು ನಿಟ್ಟುಸಿರು ಬಿಡುವಂತಾಗಿದೆ. ಅನೇಕ ಸಿನಿಮಾ ಕೆಲಸಗಳಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಬ್ಯುಸಿ ಆಗಿದ್ದಾರೆ. ಮಕ್ಕಳ ಆರೈಕೆಯಲ್ಲೂ ಅವರು ತೊಡಗಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 pm, Wed, 26 October 22