Nayanthara: ತನಿಖೆ ಶುರುವಾದ ಬಳಿಕ ಮದುವೆ ಮತ್ತು ಮಕ್ಕಳ ಬಗ್ಗೆ ರಹಸ್ಯ ಬಾಯ್ಬಿಟ್ಟ ನಯನತಾರಾ-ವಿಘ್ನೇಶ್
Nayanthara | Vignesh Shivan: 6 ವರ್ಷಗಳ ಹಿಂದೆಯೇ ನಯನತಾರಾ-ವಿಘ್ನೇಶ್ ಶಿವನ್ ಮದುವೆ ನಡೆದಿತ್ತು. ಆದರೆ ಆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ಈ ಸತ್ಯ ಬಯಲಾಗಿದೆ.
ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರ ವೈಯಕ್ತಿಕ ಜೀವನದ ಬಗ್ಗೆ ಪದೇ ಪದೇ ಸುದ್ದಿ ಆಗುತ್ತಲೇ ಇದೆ. ಈ ವರ್ಷ ದಾಂಪತ್ಯ (Nayanthara Vignesh Shivan Marriage) ಜೀವನಕ್ಕೆ ಕಾಲಿಟ್ಟ ಈ ದಂಪತಿ ನಾಲ್ಕು ತಿಂಗಳು ಕಳೆಯುವಷ್ಟರಲ್ಲಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದು ಸಂತಸದ ವಿಷಯ. ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆದ ಬೆನ್ನಲ್ಲೇ ಅವರಿಗೆ ಕಾನೂನಿನ ಸಂಕಷ್ಟ ಎದುರಾಯಿತು. ಬಾಡಿಗೆ ತಾಯ್ತನದ (Surrogacy) ಸೂಕ್ತ ನಿಯಮಗಳನ್ನು ಪಾಲಿಸಿದ್ದಾರೋ ಇಲ್ಲವೋ ಎಂದು ತಿಳಿಯಲು ಅವರ ವಿರುದ್ಧ ತನಿಖೆ ಆರಂಭ ಆಯಿತು. ಅದರ ಪರಿಣಾಮವಾಗಿ ಮದುವೆ ಮತ್ತು ಮಕ್ಕಳ ಬಗ್ಗೆ ಇಷ್ಟು ದಿನ ಮುಚ್ಚಿಟ್ಟಿದ್ದ ರಹಸ್ಯವನ್ನು ಈಗ ನಯನತಾರಾ ಬಾಯ್ಬಿಟ್ಟಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳಿಗೆ ಅಚ್ಚರಿ ಆಗಿದೆ.
ಜೂನ್ 9ರಂದು ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರು ಹಸೆಮಣೆ ಏರಿದರು. ಆದರೆ ಅಚ್ಚರಿಯ ವಿಚಾರ ಏನೆಂದರೆ, ಇವರ ಮದುವೆ 6 ವರ್ಷಗಳ ಹಿಂದೆಯೇ ನಡೆದಿತ್ತು! ಹೌದು, 6 ವರ್ಷಗಳ ಹಿಂದೆ ಇವರಿಬ್ಬರು ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದರೆ ಆ ವಿಚಾರವನ್ನು ಗುಟ್ಟಾಗಿ ಇಟ್ಟಿದ್ದರು. ಈಗ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ವಿಚಾರಣೆ ವೇಳೆ ತಮಿಳುನಾಡು ಆರೋಗ್ಯ ಇಲಾಖೆಗೆ ಸಲ್ಲಿಸಿದ ಅಫಿಡೆವಿಟ್ನಲ್ಲಿ ಈ ವಿಚಾರವನ್ನು ದಂಪತಿ ಬಾಯಿ ಬಿಟ್ಟಿದ್ದಾರೆ. ಮದುವೆ ನೋಂದಣಿ ಪತ್ರವನ್ನು ಸಾಕ್ಷಿಯಾಗಿ ನೀಡಿದ್ದಾರೆ.
ಇನ್ನು, ತಮಗೆ ಮಗು ಹೆತ್ತುಕೊಟ್ಟ ಬಾಡಿಗೆ ತಾಯಿ ಯಾರು ಎಂಬುದನ್ನು ಕೂಡ ನಯನತಾರಾ ತಿಳಿಸಿದ್ದಾರೆ. ಅವರ ಹತ್ತಿರದ ಸಂಬಂಧಿಯೊಬ್ಬರು ಬಾಡಿಗೆ ತಾಯ್ತನದ ಮೂಲಕ ಮಗು ನೀಡಿದ್ದಾರೆ. ಆ ಮಹಿಳೆ ವಿದೇಶದಲ್ಲಿ ನೆಲೆಸಿದ್ದಾರೆ. ಹೊಸ ನಿಯಮದ ಪ್ರಕಾರ, ಬಾಡಿಗೆ ತಾಯ್ತನದ ಮೂಲಕ ಗರ್ಭ ಧರಿಸುವ ಮಹಿಳೆಯು ಹತ್ತಿರದ ಸಂಬಂಧಿ ಆಗಿರಬೇಕು. ಆಕೆಗೆ ಮದುವೆಯಾಗಿರಬೇಕು ಮತ್ತು ವಯಸ್ಸು 25ರಿಂದ 35 ವರ್ಷದ ಒಳಗಿರಬೇಕು. ಒಮ್ಮೆ ಮಾತ್ರ ಆಕೆ ಬಾಡಿಗೆ ತಾಯಿ ಆಗಬಹುದು. ಈ ಕೆಲಸಕ್ಕೆ ಹಣ ಪಡೆಯುವಂತಿಲ್ಲ ಎಂಬಿತ್ಯಾದಿ ನಿಮಯಗಳಿವೆ.
ಅ.9ರಂದು ಮಕ್ಕಳ ಆಗಮನದ ವಿಷಯವನ್ನು ವಿಘ್ನೇಶ್ ಶಿವನ್ ತಿಳಿಸಿದ್ದರು. ಮಕ್ಕಳಿಗೆ ಉಯಿರ್ ಮತ್ತು ಉಳಗಂ ಎಂದು ಹೆಸರು ಇಡಲಾಗಿದೆ. ‘ನಯನ್ ಮತ್ತು ನಾನು ಅಪ್ಪ-ಅಮ್ಮ ಆಗಿದ್ದೇವೆ. ನಮಗೆ ಅವಳಿ ಗಂಡು ಮಕ್ಕಳು ಜನಿಸಿದ್ದಾರೆ. ನಮ್ಮ ಪ್ರಾರ್ಥನೆ, ಹಿರಿಯರ ಆಶೀರ್ವಾದವು ಈ ಮಕ್ಕಳ ರೂಪದಲ್ಲಿ ಸಿಕ್ಕಿದೆ. ನಮ್ಮ ಉಯಿರ್ ಮತ್ತು ಉಳಗಂ ಮೇಲೆ ನಿಮ್ಮ ಆಶೀರ್ವಾದ ಇರಲಿ’ ಎಂದು ವಿಘ್ನೇಶ್ ಶಿವನ್ ಪೋಸ್ಟ್ ಮಾಡಿದ್ದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:14 pm, Mon, 17 October 22