ಖ್ಯಾತ ನಟಿ ನಯನತಾರಾ (Nayanthara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ದೊಡ್ಡ ಸುದ್ದಿ ಆಗಿದೆ. ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಇವರಿಬ್ಬರು ಜೂನ್ 9ರಂದು ಹಸೆಮಣೆ ಏರಿದರು. ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಮದುವೆ ಮಾಡಿಕೊಳ್ಳಬೇಕು ಎಂಬುದು ಈ ಜೋಡಿಯ ಆಸೆ ಆಗಿತ್ತು. ಅದಕ್ಕಾಗಿ ಸಕಲ ಪ್ರಯತ್ನವನ್ನೂ ಮಾಡಿದ್ದರು. ಆದರೆ ಅಲ್ಲಿ ಅನುಮತಿ ಸಿಗದ ಕಾರಣ ಮಹಾಬಲಿಪುರಂನಲ್ಲಿ ವಿವಾಹ ನೆರವೇರಿತು. ಈಗ ನಯನತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅವರು ಒಂದು ಕಾಂಟ್ರವರ್ಸಿ ಮಾಡಿಕೊಂಡಿದ್ದಾರೆ. ತಿರುಪತಿ ದೇವಾಲಯದ (Tirumala Temple) ಆವರಣದಲ್ಲಿ ಅವರು ಚಪ್ಪಲಿ ಧರಿಸಿ ಓಡಾಡಿರುವುದು ಬೆಳಕಿಗೆ ಬಂದಿದೆ. ಅವರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಭಕ್ತರ ಭಾವನೆಗಳಿಗೆ ಇದರಿಂದ ಧಕ್ಕೆ ಆಗಿದೆ ಎಂಬ ಕೂಗು ಕೇಳಿಬಂದಿದೆ. ಈ ವಿವಾದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ವಿಘ್ನೇಶ್ ಶಿವನ್ ಅವರು ಸ್ಪಷ್ಟನೆ ನೀಡಿದ್ದಾರೆ.
ನಯನತಾರಾ ಪರವಾಗಿ ವಿಘ್ನೇಶ್ ಶಿವನ್ ಅವರು ಬರೆದಿರುವ ಪತ್ರದ ಪ್ರತಿ ವೈರಲ್ ಆಗಿದೆ. ತಿರುಪತಿ ದೇವಸ್ಥಾನದ ಆವರಣದಲ್ಲಿ ತಾವು ಚಪ್ಪಲಿ ಧರಿಸಿ ಓಡಾಡಿದ್ದಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ಇದು ಗಡಿಬಿಡಿಯಲ್ಲಿ ಆದ ಅಚಾತುರ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಿವೀಲ್ ಆಯ್ತು ನಯನತಾರಾ-ವಿಘ್ನೇಶ್ ಶಿವನ್ ಮದುವೆ ಫೋಟೋ; ಇಲ್ಲಿದೆ ನವ ಜೋಡಿಯ ಬ್ಯೂಟಿಫುಲ್ ಚಿತ್ರ
‘ಮದುವೆ ನಂತರ ಮನೆಗೆ ಹೋಗುವ ಬದಲು ದೇವರ ಆಶೀರ್ವಾದ ಪಡೆಯಲು ನಾವು ತಿರುಪತಿಗೆ ತೆರಳಿದೆವು. ಅದರ ನೆನಪಿಗಾಗಿ ದೇವಸ್ಥಾನದ ಹೊರಗೆ ಫೋಟೋ ತೆಗೆದುಕೊಳ್ಳಲು ಬಯಸಿದೆವು. ಆದರೆ ಹೆಚ್ಚು ನೂಕುನುಗ್ಗಲು ಇದ್ದಿದ್ದರಿಂದ ನಾವು ಅಲ್ಲಿಂದ ಹೊರಬಂದೆವು. ನಂತರ ಕಡಿಮೆ ಜನಸಂದಣಿ ಇದ್ದಾಗ ಮತ್ತೆ ಬಂದು ಫೋಟೋ ತೆಗೆದುಕೊಂಡೆವು. ಆ ಗಡಿಬಿಡಿಯಲ್ಲಿ ನಾವು ಚಪ್ಪಲಿ ಧರಿಸಿದ್ದೇವೆ ಎಂಬುದು ತಿಳಿಯಲಿಲ್ಲ’ ಎಂದು ವಿಘ್ನೇಶ್ ಶಿವನ್ ಸ್ಪಷ್ಟನೆ ನೀಡಿದ್ದಾರೆ.
‘ನಮ್ಮಿಂದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದ್ದರೆ ಕ್ಷಮೆ ಕೇಳುತ್ತೇವೆ. ದೇವರಿಗೆ ಅಗೌರವ ತೋರುವ ಉದ್ದೇಶ ನಮ್ಮದಲ್ಲ. ಮದುವೆಗಾಗಿ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದು ವಿಘ್ನೇಶ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:18 am, Sat, 11 June 22