ಬಿಗ್ ಬಾಸ್ ಮನೆಯಲ್ಲಿ ಇರೋದು 9 ಜನ, ಆಗಿದೆ ಎರಡು ಗುಂಪು, ಭುಗಿಲೆದ್ದ ಅಸಮಾಧಾನ
ಈ ವಾರ ರೂಪೇಶ್ ಕ್ಯಾಪ್ಟನ್ ಆಗಿರುವುದರಿಂದ ಅವರ ನಿರ್ಧಾರಗಳನ್ನು ಅನೇಕರು ವಿರೋಧಿಸುತ್ತಿದ್ದಾರೆ. ಎರಡೂ ಗುಂಪುಗಳ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ.
‘ಬಿಗ್ ಬಾಸ್ ಕನ್ನಡ ಒಟಿಟಿ’ (Bigg Boss OTT) ಐದನೇ ವಾರಕ್ಕೆ ಕಾಲಿಟ್ಟಿದೆ. ಈಗಾಗಲೇ ಏಳು ಮಂದಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಮನೆಯಲ್ಲಿ ಇರುವ 9 ಮಂದಿ ಮಧ್ಯೆ ಟಫ್ ಕಾಂಪಿಟೇಷನ್ ನಡೆಯುತ್ತಿದೆ. ಈ ಮಧ್ಯೆ ಮನೆಯಲ್ಲಿ ಎರಡು ಗುಂಪಾಗಿದೆ. ಎರಡೂ ಗುಂಪಿನಲ್ಲಿ ನಾಲ್ಕು ಮಂದಿ ಇದ್ದಾರೆ. ಒಬ್ಬರು ಯಾವ ಗುಂಪಲ್ಲೂ ಗುರುತಿಸಿಕೊಳ್ಳುತ್ತಿಲ್ಲ. ಈ ವಾರ ಬಿಗ್ ಬಾಸ್ (Bigg Boss) ಮನೆಯಿಂದ ಯಾರೆಲ್ಲ ಔಟ್ ಆಗುತ್ತಾರೆ ಅನ್ನೋದು ಸದ್ಯದ ಕುತೂಹಲ.
ಮನೆಯಲ್ಲಿ ರೂಪೇಶ್ ಶೆಟ್ಟಿ, ನಂದಿನಿ, ಜಶ್ವಂತ್ ಬೋಪಣ್ಣ ಹಾಗೂ ಸಾನ್ಯಾ ಅಯ್ಯರ್ ಒಟ್ಟಾಗಿ ಇದ್ದಾರೆ. ಇವರು ನಾಲ್ಕು ಜನ ಕ್ಲೋಸ್ ಆಗಿದ್ದಾರೆ. ಇವರದ್ದು ಒಂದು ಗುಂಪು ಎಂದು ಸೋನು ಶ್ರೀನಿವಾಸ್ ಗೌಡ ಪರಿಗಣಿಸಿದ್ದಾರೆ. ಈ ಕಾರಣಕ್ಕೆ ತಮ್ಮದೇ ಗುಂಪನ್ನು ಕಟ್ಟಿಕೊಂಡು ಅವರನ್ನು ವಿರೋಧಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.
ಸೋನು ಶ್ರೀನಿವಾಸ್ ಗೌಡ, ಜಯಶ್ರೀ ಆರಾಧ್ಯ, ಸೋಮಣ್ಣ ಮಾಚಿಮಾಡ, ರಾಕೇಶ್ ಒಂದು ಗುಂಪಾಗಿದ್ದಾರೆ. ರೂಪೇಶ್ ಮತ್ತು ಅವರ ತಂಡದವರ ಹೇಳಿಕೆಯನ್ನು ಇವರು ವಿರೋಧಿಸುತ್ತಲೇ ಬಂದಿದ್ದಾರೆ. ಈ ವಾರ ರೂಪೇಶ್ ಕ್ಯಾಪ್ಟನ್ ಆಗಿರುವುದರಿಂದ ಅವರ ನಿರ್ಧಾರಗಳನ್ನು ಅನೇಕರು ಟೀಕಿಸುತ್ತಿದ್ದಾರೆ. ಎರಡೂ ಗುಂಪುಗಳ ಮಧ್ಯೆ ಅಸಮಾಧಾನ ಭುಗಿಲೆದ್ದಿದೆ.
ಇನ್ನು, ಆರ್ಯವರ್ಧನ್ ಗುರೂಜಿ ಅವರು ಈ ಎರಡೂ ಗುಂಪಿನಿಂದ ಹೊರಗಿದ್ದಾರೆ. ಅವರು ಎರಡೂ ಗುಂಪಿನ ಜತೆ ಚೆನ್ನಾಗಿ ಬೆರೆಯುತ್ತಿದ್ದಾರೆ. ರೂಪೇಶ್ ಅವರನ್ನು ಮಗ ಎಂದು ಪರಿಗಣಿಸಿದ್ದಾರೆ ಗುರೂಜಿ. ಇನ್ನು, ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಜತೆಗೂ ಆರ್ಯವರ್ಧನ್ ಚೆನ್ನಾಗಿದ್ದಾರೆ. ಅಡುಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುವ ಮೂಲಕ ಅವರು ಎರಡೂ ಗುಂಪಿಂದ ಹೊರಗಿದ್ದಾರೆ.
ಈಗಾಗಲೇ ಒಂದು ಗುಂಪಲ್ಲಿ ರೂಪೇಶ್ ಹಾಗೂ ಸಾನ್ಯಾ ಸೇಫ್ ಆಗಿದ್ದಾರೆ. ಇನ್ನು ಮತ್ತೊಂದು ಗುಂಪಲ್ಲಿ ರಾಕೇಶ್ ಅವರು ಸೇಫ್ ಆಗಿದ್ದಾರೆ. ಉಳಿದ ಆರು ಮಂದಿಯಲ್ಲಿ ಒಂದಷ್ಟು ಸ್ಪರ್ಧಿಗಳು ಔಟ್ ಆಗಲಿದ್ದಾರೆ. ಈ ವಾರವೂ ಕಳೆದ ವಾರದಂತೆ ಡಬಲ್ ಎಲಿಮಿನೇಷನ್ ಇರಲಿದೆ ಎನ್ನಲಾಗುತ್ತಿದೆ. ಈ ವಾರ ಉಳಿದುಕೊಂಡವರು ಫಿನಾಲೆ ವೀಕ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: ‘ನೀನು ನಾನು ಬೆಸ್ಟ್ ಫ್ರೆಂಡ್ಸ್ ಅಲ್ಲ’-ರೂಪೇಶ್; ‘ನಿನ್ನನ್ನು ಕಳೆದುಕೊಳ್ಳೋಕೆ ಇಷ್ಟ ಇಲ್ಲ’-ಸಾನ್ಯಾ
ಸೆಪ್ಟೆಂಬರ್ 17 ಹಾಗೂ 18 ಬಿಗ್ ಬಾಸ್ ಒಟಿಟಿ ಫಿನಾಲೆ ನಡೆಯಲಿದೆ. ಈ ಪೈಕಿ ಕೆಲವರು ಟಿವಿ ಸೀಸನ್ಗೆ ಕಾಲಿಡಲಿದ್ದಾರೆ. ಟಿವಿ ಸೀಸನ್ಗೆ ಯಾರೆಲ್ಲ ಹೊಸ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.
Published On - 9:09 pm, Wed, 7 September 22