‘ಬಿಗ್ ಬಾಸ್ ಕನ್ನಡ ಒಟಿಟಿ’ ಶೋನಲ್ಲಿ ನಾಲ್ಕನೇ ವಾರದ ಎಲಿಮಿನೇಷನ್ (Bigg Boss Elimination) ನಡೆದಿದೆ. ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕಕ್ಕೆ ಈಗ ತೆರೆ ಬಿದ್ದಿದೆ. ಅಚ್ಚರಿ ಎಂದರೆ ಈ ಬಾರಿ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದೆ. ಅಕ್ಷತಾ ಕುಕ್ಕಿ (Akshatha Kuki) ಮತ್ತು ಚೈತ್ರಾ ಹಳ್ಳಿಕೇರಿ ಅವರು ದೊಡ್ಮನೆಯಿಂದ ಔಟ್ ಆಗಿದ್ದಾರೆ. ವೀಕ್ಷಕರಿಂದ ಕಡಿಮೆ ವೂಟ್ ಪಡೆದ ಕಾರಣದಿಂದ ಅವರು ಎಲಿಮಿನೇಟ್ ಆಗಿದ್ದಾರೆ. ಚೈತ್ರಾ ಹಳ್ಳಿಕೇರಿ, ಜಶ್ವಂತ್, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ ಅವರು ಈ ವಾರ ನಾಮಿನೇಟ್ ಆಗಿದ್ದರು. ಅಂತಿಮವಾಗಿ ಅಕ್ಷತಾ ಮತ್ತು ಚೈತ್ರಾ ಹಳ್ಳಿಕೇರಿ (Chaitra Hallikeri) ಎಲಿಮಿನೇಟ್ ಆಗುವ ಮೂಲಕ ಬಿಗ್ ಬಾಸ್ ಆಟ ಮುಗಿಸಿದ್ದಾರೆ. ‘ಬಿಗ್ ಬಾಸ್ ಒಟಿಟಿ ಕನ್ನಡ’ ಶೋನ ಟ್ರೋಫಿ ಗೆಲ್ಲಬೇಕು ಎಂಬ ಅವರ ಕನಸು ಭಗ್ನ ಆಗಿದೆ.
ಇಷ್ಟು ದಿನಗಳ ಕಾಲ ಸೇಫ್ ಆಗಿದ್ದ ಅಕ್ಷತಾ ಮತ್ತು ಚೈತ್ರಾ ಅವರು ನಾಲ್ಕನೇ ವಾರಕ್ಕೆ ಎಲಿಮಿನೇಟ್ ಆಗಿದ್ದಾರೆ. ದೊಡ್ಮನೆಯಲ್ಲಿ ಚೈತ್ರಾ ಹೆಚ್ಚು ಆಲಸ್ಯದಿಂದ ಇರುತ್ತಿದ್ದರು. ಜಯಶ್ರೀ ಹೊರತುಪಡಿಸಿ ಬೇರೆ ಯಾರ ಜೊತೆಗೂ ಅವರಿಗೆ ಹೆಚ್ಚು ಒಡನಾಟ ಇರಲಿಲ್ಲ. ಹಾಗಾಗಿ ಅವರಿಗೆ ಕಡಿಮೆ ವೂಟ್ ಬಂದಿರಬಹುದು. ಟಾಸ್ಕ್ ಮತ್ತು ಎಂಟರ್ಟೇನ್ಮೆಂಟ್ ವಿಚಾರದಲ್ಲಿ ಅಕ್ಷತಾ ಕುಕ್ಕಿ ಅವರು ಹೇಳಿಕೊಳ್ಳುವಂಥ ಪರ್ಫಾರ್ಮೆನ್ಸ್ ನೀಡಲಿಲ್ಲ. ಈ ಎಲ್ಲ ಕಾರಣದಿಂದ ಪ್ರೇಕ್ಷಕರ ಮನಗೆಲ್ಲುವಲ್ಲಿ ಅವರು ಸೋತಿದ್ದಾರೆ.
ಬಿಗ್ ಬಾಸ್ ಎಂದರೆ ಹಲವು ಆಯಾಮಗಳ ಆಟ. ಟಾಸ್ಕ್ ಆಡುತ್ತಲೇ ಭಾವನೆಗಳನ್ನೂ ನಿಭಾಯಿಸಬೇಕು. ಪ್ರೇಕ್ಷಕರಿಗೆ ಮನರಂಜನೆ ನೀಡಬೇಕು. ಎಲ್ಲರ ಜೊತೆ ಬೆರೆಯಬೇಕು. ಆದರೂ ಸ್ವಂತಿಕೆ ಉಳಿಸಿಕೊಳ್ಳಬೇಕು. ಹೀಗೆ ಹತ್ತು ಹಲವು ವಿಷಯಗಳ ಆಧಾರದ ಮೇಲೆ ಜನರು ವೋಟ್ ಮಾಡುತ್ತಾರೆ.
ಐದನೇ ವಾರದತ್ತ ‘ಬಿಗ್ ಬಾಸ್ ಕನ್ನಡ ಒಟಿಟಿ’ ಮೊದಲ ಸೀಸನ್ ಸಾಗುತ್ತಿದೆ. ಆರನೇ ವಾರಕ್ಕೆ ಈ ಶೋ ಮುಗಿಯಲಿದೆ. ಇದರಲ್ಲಿ ಭಾಗವಹಿಸಿದ ಕೆಲವರಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 9’ಕ್ಕೆ ಎಂಟ್ರಿ ಸಿಗಲಿದೆ. ಆ ಚಾನ್ಸ್ ಯಾರು ಪಡೆಯುತ್ತಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.