AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧುರಂಧರ್ 2’ ಒಟಿಟಿ ಬಿಡುಗಡೆ: ಜಿಯೋ ಹಾಟ್‌ಸ್ಟಾರ್ ಹೊಸ ಪ್ರಯೋಗಕ್ಕೆ ಪ್ರೇಕ್ಷಕರು ಗರಂ

ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್' (ಭಾಗ 2) ಚಿತ್ರವು ಜಿಯೋ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದೆ. ಆದರೆ, ನೇರ ಪ್ರಸಾರದ ಹೊಸ ತಂತ್ರ ಪ್ರೇಕ್ಷಕರಿಗೆ ಅಸಮಾಧಾನ ತಂದಿದೆ. 30 ನಿಮಿಷಗಳ ಪೂರ್ವ ಪ್ರದರ್ಶನ ಮತ್ತು ಸಿನಿಮಾ ಮಧ್ಯೆ ಕಾಮೆಂಟರಿ ವಿರಾಮಗಳು ವೀಕ್ಷಣೆಗೆ ಅಡ್ಡಿಯಾಗಿವೆ. ಇದರಿಂದ ನಿರಂತರ ಸಿನಿಮಾ ನೋಡುವ ಅನುಭವವಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

'ಧುರಂಧರ್ 2' ಒಟಿಟಿ ಬಿಡುಗಡೆ: ಜಿಯೋ ಹಾಟ್‌ಸ್ಟಾರ್ ಹೊಸ ಪ್ರಯೋಗಕ್ಕೆ ಪ್ರೇಕ್ಷಕರು ಗರಂ
ಧುರಂಧರ್ 2Image Credit source: Dhurandhar2
 ಶ್ರೀಲಕ್ಷ್ಮೀ ಎಚ್
| Edited By: |

Updated on:Jun 06, 2026 | 7:40 AM

Share

ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡು ಸಂಚಲನ ಮೂಡಿಸಿದ್ದ ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar 2) ಚಿತ್ರವು ಕೊನೆಗೂ ಒಟಿಟಿ ಅಂಗಳಕ್ಕೆ ಪ್ರವೇಶಿಸಿದೆ. ಜೂನ್ 4 ರಂದು ಬಹುನಿರೀಕ್ಷಿತ ಈ ಸಿನಿಮಾ ‘ಜಿಯೋ ಹಾಟ್‌ಸ್ಟಾರ್’ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರ ಕಂಡಿದೆ. 2025ರ ಕೊನೆಯಲ್ಲಿ ಬಂದ ಮೊದಲ ಭಾಗ ಸೂಪರ್ ಹಿಟ್ ಆಗಿದ್ದರಿಂದ, ಈ ಎರಡನೇ ಭಾಗದ ಒಟಿಟಿ ಬಿಡುಗಡೆಗಾಗಿ ವಿಶ್ವಾದ್ಯಂತ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಆದರೆ, ಒಟಿಟಿಯಲ್ಲಿ ಸಿನಿಮಾ ಬಿಡುಗಡೆಯಾದ ಶೈಲಿ ಈಗ ಪ್ರೇಕ್ಷಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಇದಕ್ಕೆ ಮುಖ್ಯ ಕಾರಣ, ಜಿಯೋ ಹಾಟ್‌ಸ್ಟಾರ್ ಸಂಸ್ಥೆಯು ಸಿನಿಮಾವನ್ನು ಎಂದಿನಂತೆ ನೇರವಾಗಿ ವೀಕ್ಷಿಸಲು ಒಟಿಟಿಯಲ್ಲಿ ಅಪ್‌ಲೋಡ್ ಮಾಡುವ ಬದಲು, ಜೂನ್ 4 ರಂದು ಸಂಜೆ 7 ಗಂಟೆಗೆ ‘ಲೈವ್ ಪ್ರಸಾರ’ (ನೇರ ಪ್ರಸಾರ) ಮಾಡುವ ಹೊಸ ಮಾರ್ಕೆಟಿಂಗ್ ತಂತ್ರಕ್ಕೆ ಕೈ ಹಾಕಿತ್ತು. ಪ್ರೇಕ್ಷಕರಿಗೆ ಪ್ರೀಮಿಯಂ ಅನುಭವ ನೀಡಲು ಸಂಸ್ಥೆಯು 50ಕ್ಕೂ ಹೆಚ್ಚು ಬ್ರ್ಯಾಂಡ್ ಪಾಲುದಾರರೊಂದಿಗೆ ಸೇರಿ 30 ನಿಮಿಷಗಳ ಪೂರ್ವ ಪ್ರದರ್ಶನ ಕಾರ್ಯಕ್ರಮ (ಪ್ರೀ-ಶೋ) ಹಾಗೂ ಸಿನಿಮಾದ ಮಧ್ಯೆ ಮಧ್ಯೆ ಕಾಮೆಂಟರಿ ವಿರಾಮವನ್ನು ಒಳಗೊಂಡ ಲೈವ್ ಸ್ಟ್ರೀಮಿಂಗ್ ಆಯೋಜಿಸಿತ್ತು.

ಆದರೆ, ಜಿಯೋ ಹಾಟ್‌ಸ್ಟಾರ್‌ನ ಈ ವಿಭಿನ್ನ ಪ್ರಯೋಗ ಪ್ರೇಕ್ಷಕರಿಗೆ ಅತಿಯಾದ ಕಿರಿಕಿರಿಯನ್ನು ಉಂಟುಮಾಡಿದೆ. ಲೈವ್ ಪ್ರಸಾರದ ಕಾರಣದಿಂದಾಗಿ ಪ್ರೇಕ್ಷಕರಿಗೆ ಯಾವುದೇ ಅಡೆತಡೆಯಿಲ್ಲದೆ ನಿರಂತರವಾಗಿ ಸಿನಿಮಾ ನೋಡುವ ಆನಂದ ಸಿಗಲಿಲ್ಲ. ಅಷ್ಟೇ ಅಲ್ಲದೆ, ಸಂಜೆ 7 ಗಂಟೆಯ ಲೈವ್ ಪ್ರಸಾರವನ್ನು ಸರಿಯಾದ ಸಮಯಕ್ಕೆ ವೀಕ್ಷಿಸಲು ಸಾಧ್ಯವಾಗದ ಸಿನಿಮಾ ಪ್ರೇಮಿಗಳಿಗೆ ಸಂಪೂರ್ಣ ಚಿತ್ರವನ್ನು ಮೊದಲಿನಿಂದ ನೋಡಲು ಸಾಧ್ಯವಾಗದೆ ನಿರಾಶೆಯಾಯಿತು. ಮಧ್ಯೆ ಮಧ್ಯೆ ಬಂದ ಕಾಮೆಂಟರಿಗಳು ಸಿನಿಮಾ ನೋಡುವ ಮೂಡ್ ಕೆಡಿಸಿದವು ಎಂದು ವೀಕ್ಷಕರು ದೂರಿದ್ದಾರೆ.

ಇದನ್ನೂ ಓದಿ: ಧುರಂಧರ್ ಸೋತಿದ್ದರೆ ‘ಡಾನ್ 3’ ಸಿನಿಮಾ ಬಿಡುತ್ತಿರಲಿಲ್ಲ: ಕಡೆಗೂ ಒಪ್ಪಿಕೊಂಡ ರಣವೀರ್ ಸಿಂಗ್

ಸದ್ಯ ಜಿಯೋ ಹಾಟ್‌ಸ್ಟಾರ್‌ನ ಈ ಅನಗತ್ಯ ನಾಟಕೀಯ ಪ್ರಯೋಗದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ‘ಬ್ರ್ಯಾಂಡಿಂಗ್ ಹೆಸರಿನಲ್ಲಿ ಸಿನಿಮಾ ನೋಡುವ ಮಜಾವನ್ನೇ ಹಾಳು ಮಾಡಿದ್ದಾರೆ, ಇದರ ಬದಲು ನೇರವಾಗಿ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬೇಕಿತ್ತು’ ಎಂದು ನೆಟ್ಟಿಗರು ಚಿತ್ರತಂಡ ಹಾಗೂ ಒಟಿಟಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:39 am, Sat, 6 June 26

Follow Us
Shreelaxmi H
Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More