ಸರ್ಕಾರದಿಂದಲೇ ಶುರುವಾಗಲಿದೆ ಹೊಸ ಒಟಿಟಿ; ಭಾರತದಲ್ಲಿ ಇದು ಮೊದಲ ಪ್ರಯತ್ನ
ಇದೇ ಮೊದಲ ಬಾರಿಗೆ ಸರ್ಕಾರದ ಕಡೆಯಿಂದ ಒಟಿಟಿ ಸೇವೆ ಆರಂಭಿಸಲಾಗುತ್ತಿದೆ. ಈ ಒಟಿಟಿಗೆ ‘ಸಿ ಸ್ಪೇಸ್’ ಎಂದು ಹೆಸರಿಡಲಾಗಿದೆ. ಮಾರ್ಚ್ 7ರಿಂದ ಇದರ ಕಾರ್ಯಾರಂಭ ಆಗಲಿದೆ. ಈ ಒಟಿಟಿಯಲ್ಲಿ ಬರುವ ಆದಾಯದ ಲೆಕ್ಕ ಪಾರದರ್ಶಕವಾಗಿ ಇರಲಿದೆ ಎಂದು ಭರವಸೆ ನೀಡಲಾಗಿದೆ. ಮೊದಲ ಹಂತದಲ್ಲಿ ಪ್ರಚಾರಕ್ಕಾಗಿ 42 ಸಿನಿಮಾಗಳ ಆಯ್ಕೆ ನಡೆದಿದೆ.
ಇದು ಡಿಜಿಟಲ್ ಜಮಾನಾ. ಒಟಿಟಿ ಪ್ಲಾಟ್ಫಾರ್ಮ್ಗಳು (OTT platform) ತುಂಬ ಫೇಮಸ್ ಆಗಿವೆ. ದಿನದಿಂದ ದಿನಕ್ಕೆ ಒಟಿಟಿ ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಎಲ್ಲ ಒಟಿಟಿ ಪ್ಲಾಟ್ಫಾರ್ಮ್ಗಳ ನಡುವೆ ಪೈಪೋಟಿ ಜೋರಾಗಿದೆ. ಈ ಸಂದರ್ಭದಲ್ಲಿ ಸರ್ಕಾರವೇ ಹೊಸ ಒಟಿಟಿ ಸಂಸ್ಥೆಯನ್ನು (Government OTT) ಆರಂಭಿಸಲು ಮುಂದಾಗಿದೆ. ಹೌದು, ಕೇರಳದಲ್ಲಿ ಸರ್ಕಾರದ ವತಿಯಿಂದಲೇ ಒಟಿಟಿ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕೆ ‘ಸಿ ಸ್ಪೇಸ್’ (C Space) ಎಂದು ಹೆಸರು ಇಡಲಾಗಿದೆ. ಶೀಘ್ರದಲ್ಲೇ ಕಾರ್ಯಾರಂಭ ಆಗಲಿರುವ ಈ ಒಟಿಟಿ ಪ್ಲಾಟ್ಫಾರ್ಮ್ ಬಗ್ಗೆ ಇಲ್ಲಿದೆ ಮಾಹಿತಿ..
ಮಾರ್ಚ್ 7ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸರ್ಕಾರದ ಒಟಿಟಿ ಪ್ಲಾಟ್ಫಾರ್ಮ್ ಅನಾವರಣ ಮಾಡಲಿದ್ದಾರೆ. ಅಂದು ಬೆಳಿಗ್ಗೆ 9.30ರಂದು ಕೈರಾಲಿ ಥಿಯೇಟರ್ನಲ್ಲಿ ಒಟಿಟಿ ಲಾಂಚ್ ಆಗಲಿದೆ. ಸಚಿವ ಸಾಜಿ ಚೆರಿಯನ್ ಅವರು ಇದರ ಅಧ್ಯಕ್ಷತೆ ವಹಿಸಲಿದ್ದಾರೆ. ‘ಕೇರಳ ರಾಜ್ಯ ಸಿನಿಮಾಭಿವೃದ್ಧಿ ಕಾರ್ಪೊರೇಷನ್’ ಈ ಒಟಿಟಿಯ ನಿರ್ವಹಣೆ ಮಾಡಲಿದೆ.
ಸರ್ಕಾರದ ವತಿಯಿಂದ ಒಟಿಟಿ ಲಾಂಚ್ ಆಗುತ್ತಿರುವುದರಿಂದ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ಪ್ರಯತ್ನ ನಡೆದಿದೆ. ‘ಸಿ ಸ್ಪೇಸ್’ ಒಟಿಟಿಗೆ ಯಾವ ರೀತಿಯ ಕಂಟೆಂಟ್ ಆಯ್ಕೆ ಮಾಡಬೇಕು ಎಂಬುದನ್ನು ನಿರ್ಧರಿಸಲು 60 ಜನರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿದೆ. ಕೇರಳದ ಸಿನಿಮಾ ಮತ್ತು ಸಾಂಸ್ಕೃತಿಕ ವಲಯದ ಪ್ರಮುಖ ವ್ಯಕ್ತಿಗಳು ಈ ಸಮಿತಿಯಲ್ಲಿ ಸದಸ್ಯತ್ವ ಹೊಂದಿದ್ದಾರೆ.
ಇದನ್ನೂ ಓದಿ: ತೆಲುಗಿನ ಬಿಗ್ ಬಜೆಟ್ ಚಿತ್ರಗಳಿಗೆ ಸಿಗುತ್ತಿಲ್ಲ ಒಟಿಟಿ ಡೀಲ್; ಕಾರಣ ತುಂಬಾನೇ ಸಿಂಪಲ್
‘ಸಿ ಸ್ಪೇಸ್’ ಒಟಿಟಿಗೆ ಆಯ್ಕೆ ಆಗಲು ಅರ್ಜಿ ಸಲ್ಲಿಸುವ ಕಂಟೆಂಟ್ಗಳನ್ನು ಆಯ್ಕೆ ಸಮಿತಿಯ ಸದಸ್ಯರು ಮೌಲ್ಯಮಾಪನ ಮಾಡಲಿದ್ದಾರೆ. ಆ ರೀತಿ ಆಯ್ಕೆಯಾದ ಕಂಟೆಂಟ್ಗಳನ್ನು ಮಾತ್ರ ಈ ಒಟಿಟಿಯಲ್ಲಿ ಪ್ರಸಾರ ಮಾಡಲಾಗುವುದು. ಮೊದಲ ಹಂತದಲ್ಲಿ ಈಗಾಗಲೇ 42 ಸಿನಿಮಾಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ 35 ಕಥಾಚಿತ್ರಗಳು, 6 ಸಾಕ್ಷ್ಯಚಿತ್ರಗಳು ಹಾಗೂ ಒಂದು ಕಿರುಚಿತ್ರ ಸೇರಿದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಸಿನಿಮಾಗಳು ಮತ್ತು ಪ್ರಮುಖ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಸಿನಿಮಾಗಳು ಕೂಡ ಇದರಲ್ಲಿ ಲಭ್ಯವಾಗಲಿವೆ.
ಮಾರ್ಚ್ 7ರ ಬಳಿಕ ಪ್ಲೇ ಸ್ಟೋರ್ನಿಂದ ಜನರು ‘ಸಿ ಸ್ಪೇಸ್’ ಒಟಿಟಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರತಿ ಸಿನಿಮಾವನ್ನು 75 ರೂಪಾಯಿ ನೀಡಿ ವೀಕ್ಷಿಸಬಹುದು. ಚಿಕ್ಕ ಕಂಟೆಂಟ್ಗಳ ವೀಕ್ಷಣೆಗೆ ಕಡಿಮೆ ಹಣ ನಿಗದಿ ಆಗಲಿದೆ. ಈ ಒಟಿಟಿಯಿಂದ ಬರುವ ಆದಾಯದ ಲೆಕ್ಕ ಸಂಪೂರ್ಣ ಪಾರದರ್ಶಕ ಆಗಿರಲಿದೆ ಎಂದು ಹೇಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.