ಒಟಿಟಿಯಿಂದ ಕಾಲ್ಕೀಳಲಿದೆ ಈ ಸೂಪರ್ಹಿಟ್ ಹಿಂಸಾತ್ಮಕ ಚಿತ್ರ; ಅದಕ್ಕೂ ಮೊದಲೇ ನೋಡಿಬಿಡಿ
ಮಲಯಾಳಂನ ಹಿಂಸಾತ್ಮಕ ಚಿತ್ರವೊಂದನ್ನು ಒಟಿಟಿಯಿಂದ ತೆಗೆಯುವಂತೆ ಕೇರಳ ಸೆನ್ಸಾರ್ ಮಂಡಳಿ ಆಗ್ರಹಿಸಿದೆ. ಚಿತ್ರದ ಹಿಂಸಾತ್ಮಕ ದೃಶ್ಯಗಳು ಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು ಎಂಬ ಆತಂಕದಿಂದ ಈ ಕ್ರಮ. ಚಿತ್ರದ ಯಶಸ್ಸಿನ ಹೊರತಾಗಿಯೂ, ಅದರ ವಿಷಯವಸ್ತು ಕುರಿತು ಚರ್ಚೆಗಳು ತೀವ್ರಗೊಂಡಿವೆ. ಪಿಣರಾಯಿ ವಿಜಯನ್ ಕೂಡ ಹಿಂಸಾತ್ಮಕ ಸಿನಿಮಾಗಳ ಪರಿಣಾಮದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಒಟಿಟಿಯಲ್ಲಿ ಸಿನಿಮಾ ರಿಲೀಸ್ ಮಾಡಲು ಯಾವುದೇ ನಿರ್ಬಂಧಗಳು ಇಲ್ಲ. ಈ ಕಾರಣದಿಂದಲೇ ಹಲವು ಹಿಂಸಾತ್ಮಕ ಸಿನಿಮಾಗಳು ಯಾವುದೇ ಅಡೆತಡೆ ಇಲ್ಲದೆ ರಿಲೀಸ್ ಆಗುತ್ತವೆ. ಅಷ್ಟೇ ಅಲ್ಲ, ವೆಬ್ ಸೀರಿಸ್ಗಳಲ್ಲಿ ಕೆಟ್ಟ ಶಬ್ದಗಳ ಬಳಕೆ ಅತಿಯಾಗಿ ಆಗುತ್ತವೆ. ಇದಕ್ಕೆ ತಡೆ ಹಾಕಬೇಕು ಎನ್ನುವ ಕೋರಿಕೆ ವ್ಯಕ್ತವಾಗಿದೆ. ಹೀಗಿರುವಾಗಲೇ ಸೂಪರ್ ಹಿಟ್ ಹಿಂಸಾತ್ಮಕ ಚಿತ್ರವೊಂದು ಒಟಿಟಿಯಿಂದ ಹೊರ ಹೋಗುವ ಸಾಧ್ಯತೆ ದಟ್ಟವಾಗಿದೆ. ಅದು ಬೇರಾವ ಚಿತ್ರವೂ ಅಲ್ಲ ಮಲಯಾಳಂನ ‘ಮಾರ್ಕೊ’ (Marco). ಆ ಬಗ್ಗೆ ಇಲ್ಲಿದೆ ಮಾಹಿತಿ.
ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಸಿನಿಮಾಗಳು ಮತ್ತು ಟಿವಿ ಶೋಗಳು ಜನರ ಮೇಲೆ ಬೀರುತ್ತಿರುವ ಪರಿಣಾಮದ ಎಚ್ಚರಿಕೆ ನೀಡಿದ್ದರು. ಈಗ ಕೇರಳದ ಸೆನ್ಸಾರ್ ಮಂಡಳಿಯವರು ‘ಮಾರ್ಕೊ’ ಚಿತ್ರವನ್ನು ಒಟಿಟಿ ಪ್ಲಾಟ್ಫಾರ್ಮ್ನಿಂದ ತೆಗೆಯುವಂತೆ ಕೋರಿದ್ದಾರೆ.
ಹನೀಫ್ ಅದೆನಿ ಅವರು ‘ಮಾರ್ಕೊ’ ಚಿತ್ರ ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ಭಾರತೀಯ ಚಿತ್ರರಂಗದಲ್ಲಿ ಬಂದ ಅತ್ಯಂತ ಹಿಂಸಾತ್ಮಕ ಚಿತ್ರಗಳಲ್ಲಿ ಇದೂ ಒಂದಾಗಿದೆ. ಉನ್ನಿ ಮುಕುಂದನ್ ಅವರು ಈ ಚಿತ್ರದಲ್ಲಿ ನಟಿಸಿದ್ದು, ಸಾಕಷ್ಟು ವೈಲೆನ್ಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಡಿಸೆಂಬರ್ 20ರಂದು ರಿಲೀಸ್ ಆದ ಈ ಚಿತ್ರ 30 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿತ್ತು. ಈ ಚಿತ್ರ ಬರೋಬ್ಬರಿ 150 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರವನ್ನು ಒಟಿಟಿಯಿಂದ ತೆಗೆಯುವಂತೆ ಕೋರಿಕೆ ಇಡಲಾಗಿದೆ.
ತೀವ್ರವಾದ ಹಿಂಸೆಯನ್ನು ಉಲ್ಲೇಖಿಸಿ ಧಾರಾವಾಹಿಯು ಟೆಲಿವಿಷನ್ ಪ್ರೀಮಿಯರ್ ಆಗದಂತೆ ಸೆನ್ಸಾರ್ ಮಂಡಳಿ ನಿರ್ಬಂಧಿಸಿದೆ. ಒಟಿಟಿಯಲ್ಲಿರುವ ಸಿನಿಮಾಗಳನ್ನು ಮಕ್ಕಳು ಕೂಡ ನೋಡುವ ಅವಕಾಶ ಇರುತ್ತದೆ. ‘ಮಾರ್ಕೊ’ ಸಿನಿಮಾ ಅವರ ಮೇಲೆ ಪ್ರಭಾವ ಬೀರುತ್ತದೆ ಎಂದು ಸೆನ್ಸಾರ್ ಮಂಡಳಿ ಆತಂಕ ವ್ಯಕ್ತಪಡಿಸಿ ಕೇಂದ್ರ ಸೆನ್ಸಾರ್ ಮಂಡಳಿಗೆ ಪತ್ರ ಬರೆದಿದೆ. ಕೇಂದ್ರ ಸೆನ್ಸಾರ್ ಮಂಡಳಿ ಕ್ರಮ ಕೈಗೊಂಡರೆ ಸಿನಿಮಾ ಕಾಲ್ಕೀಳಲಿದೆ.
ಇದನ್ನೂ ಓದಿ: ಕನ್ನಡದಲ್ಲೂ ಬರ್ತಿದೆ ಮಲಯಾಳಂನ ಹಿಟ್ ಸಿನಿಮಾ; ಹಿಂಸಾತ್ಮಕ ದೃಶ್ಯವೇ ಹೈಲೈಟ್
ಪಿಣರಾಯಿ ವಿಜಯನ್ ಕೂಡ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಮಕ್ಕಳ ಮೇಲೆ ಸಿನಿಮಾಗಳು ಪ್ರಭಾವ ಬೀರುತ್ತಿವೆ ಎಂದು ಆತಂಕ ಹೊರಹಾಕಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:09 am, Thu, 6 March 25