ಸೀರಿಯಲ್ ಕಿಲ್ಲರ್ ಆಗ್ತಾರಾ ಮಾಧುರಿ ದೀಕ್ಷಿತ್? ಬದಲಾಗಲಿದೆ ಸ್ಟಾರ್ ನಟಿಯ ಇಮೇಜ್
ಮಾಧುರಿ ದೀಕ್ಷಿತ್ ಅವರು ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ್ದಾರೆ. ಇಂದಿಗೂ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಹೊಸ ರೀತಿಯ ಪಾತ್ರಗಳನ್ನು ಮಾಡಲು ಅವರು ಹಂಬಲಿಸುತ್ತಿದ್ದಾರೆ. ಹೊಸ ವೆಬ್ ಸರಣಿಯಲ್ಲಿ ಮಾಧುರಿ ದೀಕ್ಷಿತ್ ಅವರು ಸ್ವಲ್ಪ ನೆಗೆಟಿವ್ ಶೇಡ್ ಇರುವ ಪಾತ್ರವನ್ನು ನಿಭಾಯಿಸುತ್ತಾರೆ ಎಂಬ ಬಗ್ಗೆ ಸುದ್ದಿ ಆಗಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..
ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಈಗಾಗಲೇ ಅವರು ಅನೇಕ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ಹೊಸದೊಂದು ಪ್ರಯೋಗ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಮಾಧುರಿ ದೀಕ್ಷಿತ್ ಅವರು ಇದೇ ಮೊದಲ ಬಾರಿಗೆ ಸೀರಿಯಲ್ ಕಿಲ್ಲರ್ ಪಾತ್ರ ಮಾಡಲಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ. ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ಮಾಧುರಿ ದೀಕ್ಷಿತ್ ಅವರು ಹೊಸ ಸಾಧ್ಯತೆಗಳನ್ನು ಹುಡುಕುತ್ತಿದ್ದಾರೆ.
ಅನೇಕ ವರ್ಷಗಳ ಕಾಲ ಸಿನಿಮಾಗಳಲ್ಲಿ ಮಿಂಚಿದ ಮಾಧುರಿ ದೀಕ್ಷಿತ್ ಅವರು ನಂತರ ಟಿವಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಜನರಿಗೆ ಹತ್ತಿರ ಆದರು. ಬಳಿಕ ಅವರು ಒಟಿಟಿಯಲ್ಲೂ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ‘ದಿ ಫೇಮ್ ಗೇಮ್’ ವೆಬ್ ಸರಣಿಯಲ್ಲಿ ನಟಿಸುವ ಮೂಲಕ ಮಾಧುರಿ ದೀಕ್ಷಿತ್ ಅವರು ಯಶಸ್ಸು ಕಂಡರು. ಈಗ ಹೊಸದೊಂದು ವೆಬ್ ಸಿರೀಸ್ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
‘ಮಿಸೆಸ್ ದೇಶಪಾಂಡೆ’ ಎಂಬ ವೆಬ್ ಸಿರೀಸ್ನಲ್ಲಿ ಮಾಧುರಿ ದೀಕ್ಷಿತ್ ಅವರಿಗೆ ಸರಣಿ ಹಂತಕಿಯ ಪಾತ್ರ ಇರಲಿದೆ. ಪೊಲೀಸರು ಇನ್ನೋರ್ವ ಸೀರಿಯಲ್ ಕಿಲ್ಲರ್ನ ಪತ್ತೆ ಹಚ್ಚಲು ಮಾಧುರಿ ದೀಕ್ಷಿತ್ ಪಾತ್ರದ ಸಹಾಯ ಪಡೆಯುತ್ತಾರೆ. ಈ ರೀತಿಯ ಒಂದು ಡಿಫರೆಂಟ್ ಕಥೆ ಇದರಲ್ಲಿ ಇರಲಿದೆ. ಇದು ಫ್ರೆಂಚ್ ವೆಬ್ ಸರಣಿಯ ರಿಮೇಕ್ ಆಗಿರಲಿದೆ ಎಂದು ಕೂಡ ಹೇಳಲಾಗಿದೆ. ಆದರೆ ತಂಡದಿಂದ ಯಾರೊಬ್ಬರೂ ಈ ಕುರಿತು ಬಾಯಿ ಬಿಟ್ಟಿಲ್ಲ.
ಇದನ್ನೂ ಓದಿ: ಭಯೋತ್ಪಾದನೆ ನಂಟು ಇರುವ ಪಾಕ್ ವ್ಯಕ್ತಿ ಜತೆ ಮಾಧುರಿ ದೀಕ್ಷಿತ್ ಕಾರ್ಯಕ್ರಮ? ಜನರ ಆಕ್ರೋಶ
ಖ್ಯಾತ ನಿರ್ದೇಶಕ ನಾಗೇಶ್ ಕುಕುನೂರ್ ಅವರು ‘ಮಿಸೆಸ್ ದೇಶಪಾಂಡೆ’ ವೆಬ್ ಸರಣಿಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಒಂದು ವೇಳೆ ಮಾಧುರಿ ದೀಕ್ಷಿತ್ ಅವರು ಇದರಲ್ಲಿ ನಟಿಸಿದ್ದೇ ಹೌದಾದರೆ ಅವರ ಇಮೇಜ್ ಬದಲಾಗಲಿದೆ. 57ರ ಪ್ರಾಯದ ಮಾಧುರಿ ದೀಕ್ಷಿತ್ ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ಫ್ಯಾಮಿಲಿ ಮತ್ತು ಬಣ್ಣದ ಲೋಕ ಎರಡನ್ನೂ ಅವರು ಸಮನಾಗಿ ನಿಭಾಯಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಅವರು ಆ್ಯಕ್ಟೀವ್ ಆಗಿದ್ದಾರೆ. ಬಾಲಿವುಡ್ಗೆ ಕಾಲಿಟ್ಟು 40 ವರ್ಷ ಕಳೆದಿರುವ ಮಾಧುರಿ ಅವರು ಅಮೆರಿಕಕ್ಕೆ ತೆರಳಿ ಸೆಲೆಬ್ರೇಟ್ ಮಾಡಲು ಸಜ್ಜಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.