ಚಿತ್ರಮಂದಿರದಲ್ಲಿ ಸಿನಿಮಾ ನೋಡಲು ಸಾಧ್ಯವಾಗದಿದ್ದರೆ ಒಟಿಟಿಯಲ್ಲಿ ವೀಕ್ಷಿಸಲು ಪ್ರೇಕ್ಷಕರು ಬಯಸುತ್ತಾರೆ. ಆದರೆ ಎಲ್ಲ ಸಿನಿಮಾಗಳಿಗೂ ಒಟಿಟಿಯಲ್ಲಿ ಜಾಗ ಸಿಗುವುದಿಲ್ಲ. ಸಣ್ಣ ಸಿನಿಮಾಗಳು ಎಂಬ ಕಾರಣಕ್ಕೆ ದೊಡ್ಡ ಒಟಿಟಿ ಸಂಸ್ಥೆಗಳು ಕೆಲವು ಚಿತ್ರಗಳನ್ನು ಖರೀದಿಸುವುದೇ ಇಲ್ಲ. ಮುಖ್ಯವಾಗಿ ಕನ್ನಡ ಸಿನಿಮಾಗಳಿಗೆ ಒಟಿಟಿಯಲ್ಲಿ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕೊರಗು ಮೊದಲಿನಿಂದಲೂ ಇದೆ. ಅದಕ್ಕಾಗಿ ಸಿನಿಮಾ ತಂಡಗಳು ಬೇರೆ ಬೇರೆ ಮಾರ್ಗಗಳನ್ನು ಕಂಡುಕೊಳ್ಳುತ್ತಿವೆ.
ಕನ್ನಡದ ‘ಮಾರಕಾಸ್ತ್ರ’ ಸಿನಿಮಾ ಕೂಡ ಈಗ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಹಾಗಂತ ಇದು ನೆಟ್ಫ್ಲಿಕ್ಸ್, ಅಮೇಜಾನ್ ಪ್ರೈ ವಿಡಿಯೋ ಮುಂತಾದ ಪ್ಲಾಟ್ಫಾರ್ಮ್ಗಳಲ್ಲಿ ಲಭ್ಯವಿಲ್ಲ. ಬದಲಿಗೆ ‘ಒಟಿಟಿ ಪ್ಲೇಯರ್’ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ಹೌದು. www.ottplayer.in ವೆಬ್‌ಸೈಟ್ ಮೂಲಕ ಈ ಸಿನಿಮಾವನ್ನು ನೋಡಬಹುದು. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
2023ರಲ್ಲಿ ‘ಮಾರಾಕಾಸ್ತ್ರ’ ಸಿನಿಮಾ ತೆರೆಕಂಡಿತ್ತು. ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಆನಂದ್ ಆರ್ಯ, ಮಾಧುರ್ಯ, ಮಾಲಾಶ್ರೀ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರಮಂದಿರದಲ್ಲಿ ಮಿಸ್ ಮಾಡಿಕೊಂಡವರು ಈಗ ಒಟಿಟಿ ಪ್ಲೇಯರ್ ಮೂಲಕ ಈ ಸಿನಿಮಾವನ್ನು ವೀಕ್ಷಿಸಬಹುದು. ಆದರೆ ಇದು ಉಚಿತ ಏನಲ್ಲ. ಚಿಕ್ಕ ಮೊತ್ತ ನೀಡಿದರೆ ಸಿನಿಮಾ ಲಭ್ಯವಾಗುತ್ತದೆ.
‘ಮಾರಾಕಾಸ್ತ್ರ’ ಚಿತ್ರತಂಡ ಹಂಚಿಕೊಂಡ ಮಾಹಿತಿ ಪ್ರಕಾರ, www.ottplayer.in ವೆಬ್‌ಸೈಟ್‌ದಲ್ಲಿ 99 ರೂಪಾಯಿ ಪಾವತಿಸಿದರೆ ಸಿನಿಮಾ ವೀಕ್ಷಿಸಬಹುದು. ಒಮ್ಮೆ ಈ ಹಣ ಪಾವತಿಸಿದ ನಂತರ 10 ಗಂಟೆಗಳ ಅವಧಿಯಲ್ಲಿ 3 ಬಾರಿ ಮಾತ್ರ ಸಿನಿಮಾ ನೋಡಬಹುದು. ಮತ್ತೆ ನೋಡಬೇಕು ಎಂದರೆ ಮರುಪಾವತಿ ಮಾಡಬೇಕು. ದೈತ್ಯ ಒಟಿಟಿಗಳಿಗೆ ಪರ್ಯಾಯವಾಗಿ ಈ ವೇದಿಕೆ ಕೆಲಸ ಮಾಡುತ್ತಿದೆ. ಚಿತ್ರತಂಡಗಳಿಗೆ ಇದರಿಂದ ಅನುಕೂಲ ಆಗುತ್ತಿದೆ.
ಇದನ್ನೂ ಓದಿ: ಯೂಟ್ಯೂಬ್ನಲ್ಲಿ ಸದ್ದು ಮಾಡುತ್ತಿದೆ ಕನ್ನಡದ ‘ಶೋಷಿತೆ’, ತೆಲುಗಿನ ‘ಶ್ರೀಮತಿ’ ಸಿನಿಮಾ
ಕೋಮಲ ನಟರಾಜ್ ಅವರು ‘ಶ್ರಾವ್ಯ ಕಂಬೈನ್ಸ್’ ಮೂಲಕ ‘ಮಾರಕಾಸ್ತ್ರ’ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಗುರುಮೂರ್ತಿ ಸುನಾಮಿ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ದುಷ್ಟ ಶಕ್ತಿಗಳನ್ನು ಮಟ್ಟಹಾಕುವ ಶಕ್ತಿ ಪತ್ರಕರ್ತರ ಲೇಖನಿಗೆ ಇರುತ್ತದೆ. ಈ ವಿಷಯದ ಕುರಿತು ಸಿನಿಮಾ ಮೂಡಿಬಂದಿದೆ. ಮಿರಾಕಲ್ ಮಂಜು ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ಆರ್.ಕೆ. ಶಿವಕುಮಾರ್ ಅವರು ಛಾಯಾಗ್ರಹಣ ಮಾಡಿದ್ದಾರೆ.
ಹೀರೋ ಆಗಿ ಆನಂದ್ ಆರ್ಯ ನಟಿಸಿದ್ದಾರೆ. ಅವರಿಗೆ ಮಾಧುರ್ಯ ಜೋಡಿಯಾಗಿದ್ದಾರೆ. ಇನ್ನೊಂದು ಪ್ರಮುಖ ಪಾತ್ರವನ್ನು ಮಾಲಾಶ್ರೀ ನಿಭಾಯಿಸಿದ್ದಾರೆ. ಹರ್ಷಿಕಾ ಪೂರ್ಣಚ್ಚ, ಅಯ್ಯಪ್ಪ ಶರ್ಮ, ಮೈಕೋ ನಾಗರಾಜ್, ಭರತ್ ಸಿಂಗ್, ಉಗ್ರಂ ಮಂಜು ಮುಂತಾದ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.