ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ

ವಿಜಯ್ ಕಾರ್ತಿಕೇಯ ನಿರ್ದೇಶನದ ‘ಮಾರ್ಕ್’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಥಿಯೇಟರ್‌ಗಳಲ್ಲಿ ಬಿಡುಗಡೆಯಾದ 30 ದಿನಕ್ಕೆ ಅಂದರೆ ಸರಿಯಾಗಿ 1 ತಿಂಗಳಿಗೆ ‘ಮಾರ್ಕ್’ ಸಿನಿಮಾ ಒಟಿಟಿ ಅಂಗಳಕ್ಕೆ ಪ್ರವೇಶ ಪಡೆದಿದೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಈಗ ಒಟಿಟಿಯಲ್ಲಿ ನೋಡಬಹುದು.

ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ‘ಮಾರ್ಕ್‌’: ಜ.23ರಿಂದ 4 ಭಾಷೆಗಳಲ್ಲಿ ಪ್ರಸಾರ
Kichcha Sudeep

Updated on: Jan 23, 2026 | 4:22 PM

2025ರ ಬಹುನಿರೀಕ್ಷೆಯ ಸಿನಿಮಾಗಳ ಸಾಲಿನಲ್ಲಿ ಮುಂಚೂಣಿಯಲ್ಲಿದ್ದ ಸಿನಿಮಾಗಳ ಪೈಕಿ ಕಿಚ್ಚ ಸುದೀಪ್‌ ನಟನೆಯ ‘ಮಾರ್ಕ್‌’ (Mark Movie) ಸಹ ಒಂದು. ಅಪಾರ ನಿರೀಕ್ಷೆಯಂತೆ, ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ಡಿಸೆಂಬರ್‌ 25ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಕಂಡಿತ್ತು ಈ ಸಿನಿಮಾ. ಆ್ಯಕ್ಷನ್‌ ಥ್ರಿಲ್ಲರ್‌ ಅಡ್ವೆಂಚರ್‌ ಜಾನರ್‌ನ ‘ಮಾರ್ಕ್‌’ ಸಿನಿಮಾಗೆ ಮೆಚ್ಚುಗೆಯ ಮಾತುಗಳೂ ಕೇಳಿಬಂದಿದ್ದವು. ಮಾಸ್‌ ಎಂಟರ್‌ಟೈನರ್‌ ಎಂಬಂತಹ ಪಾಸಿಟಿವ್‌ ವಿಮರ್ಶೆಗಳನ್ನೂ ಪಡೆದುಕೊಂಡಿತ್ತು ಈ ಸಿನಿಮಾ. ‘ಮಾರ್ಕ್‌’ ಸಿನಿಮಾದ ಒಟಿಟಿ (OTT) ಪ್ರಸಾರದ ಹಕ್ಕುಗಳನ್ನು ‘ಜಿಯೋ ಹಾಟ್‌ಸ್ಟಾರ್‌’ (Jio Hotstar) ಪಡೆದುಕೊಂಡಿದೆ. ಜನವರಿ 23ರ ಶುಕ್ರವಾರ ಜಿಯೋ ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭ ಆಗಿದೆ.

ಕನ್ನಡ ಮಾತ್ರವಲ್ಲದೆ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಈ ಸಿನಿಮಾ ಪ್ರಸಾರ ಆರಂಭಿಸಿದೆ. ಥಿಯೇಟರ್‌ಗಳಲ್ಲಿ ಈ ಚಿತ್ರವನ್ನು ಮಿಸ್‌ ಮಾಡಿಕೊಂಡವರು, ಇನ್ನೊಮ್ಮೆ ಸಿನಿಮಾ ನೋಡಬೇಕೆಂದುಕೊಂಡವರಿಗೆ ಇದೀಗ ಜಿಯೋ ಹಾಟ್‌ಸ್ಟಾರ್‌ ಸರ್ಪ್ರೈಸ್‌ ನೀಡಿದೆ. ಹಾಗಾದರೆ ಮತ್ಯಾಕೆ ತಡ, ಈಗಲೇ ಜಿಯೋ ಹಾಟ್‌ಸ್ಟಾರ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು ಸಿನಿಮಾ ವೀಕ್ಷಿಸಿ.

ಮಾರ್ಕ ಸಿನಿಮಾ ಕಥೆ: ಅಜಯ್‌ ಮಾರ್ಕಂಡೇಯ ಅಲಿಯಾಸ್‌ ಮಾರ್ಕ್‌. ಕಥಾನಾಯಕ ಮಾರ್ಕ್‌ ಸಸ್ಪೆಂಡ್‌ ಆಗಿರುವ ಎಸಿಪಿ. ಪೊಲೀಸ್‌ ಡಿಪಾರ್ಟ್‌ಮೆಂಟ್‌ನಲ್ಲಿ ದೊಡ್ಡ ಹೆಸರು. ಆತನ ಹೆಸರು ಕೇಳಿದ್ರೆ ಸಾಕು ರಾಜಕೀಯ ನಾಯಕರಿಂದ ಹಿಡಿದು, ರೌಡಿಗಳೂ ಗಡಗಡ! ಆ ಮಟ್ಟದ ಖಡಕ್‌ ಹಿನ್ನೆಲೆ ಇರುವಂಥ ಅಧಿಕಾರಿ. ಹೀಗಿರುವಾಗ ಇದೇ ಮಾರ್ಕ್‌ಗೆ ಒಂದು ಸಂದಿಗ್ಧ ಪರಿಸ್ಥಿತಿಗೆ ಸಿಲುಕುತ್ತಾನೆ. ಒಂದು ಕಡೆ ರಾಜಕೀಯದ ಷಡ್ಯಂತ್ರ, ಮತ್ತೊಂದು ಕಡೆ ಮಕ್ಕಳ ಟ್ರಾಫಿಕಿಂಗ್‌ (ಮಕ್ಕಳ ಕಳ್ಳ ಸಾಗಣೆ), ಇದರ ನಡುವೆ ಡ್ರಗ್ಸ್‌ ಘಾಟು.. ಹೀಗೆ ಹಲವು ಕೋನಗಳಲ್ಲಿ ಪದರಗಳಾಗಿ ಸಿನಿಮಾ ತೆರೆದುಕೊಳ್ಳುತ್ತ ಹೋಗುತ್ತದೆ. ಇದೆಲ್ಲವನ್ನು ಸಂಭಾಳಿಸಲು ಕಥಾನಾಯಕನಿಗೆ ಇರೋದು ಜಸ್ಟ್‌ 36 ಗಂಟೆ ಮಾತ್ರ. ಆ 36 ಗಂಟೆಯಲ್ಲಿ ಸಿನಿಮಾ ಹೇಗೆಲ್ಲ ಓಟಕ್ಕಿಳಿಯುತ್ತೆ ಅನ್ನೋದೇ ಈ ಸಿನಿನಮಾದ ಒಂದೆಳೆ.

ತಾರಾಗಣ ಹಾಗೂ ತಾಂತ್ರಿಕ ವರ್ಗ: ಮಾರ್ಕ್‌ ಸಿನಿಮಾದಲ್ಲಿ ಹಿರಿ-ಕಿರಿ ಕಲಾವಿದರ ದೊಡ್ಡ ಬಳಗವೇ ಇದೆ. ಅದೇ ರೀತಿ ತೆರೆ ಹಿಂದೆ ತಾಂತ್ರಿಕವಾಗಿಯೂ ಸಾಕಷ್ಟು ಮಂದಿ ದುಡಿದಿದ್ದಾರೆ. ವಿಜಯ್‌ ಕಾರ್ತಿಕೇಯ ನಿರ್ದೇಶನದಲ್ಲಿ ಮೂಡಿ ಬಂದ ಮಾರ್ಕ್‌ ಸಿನಿಮಾವನ್ನು ಸತ್ಯಜ್ಯೋತಿ ಫಿಲಂಸ್‌ ಮತ್ತು ಕಿಚ್ಚ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡಿವೆ. ನಾಯಕನಾಗಿ ಕಿಚ್ಚ ಸುದೀಪ್‌, ಖಳನಾಯಕನಾಗಿ ಬಹುಭಾಷಾ ನಟ ನವೀನ್‌ ಚಂದ್ರ, ಮಲಯಾಳಂ ನಟ ಶೈನ್‌ ಟೊಮ್‌ ಚಾಕೊ, ವಿಕ್ರಾಂತ್‌, ಯೋಗಿ ಬಾಬು, ಗುರು ಸೋಮಸುಂದರಂ, ಗೋಪಾಲಕೃಷ್ಣ ದೇಶಪಾಂಡೆ, ರಘು ರಾಮನಕೊಪ್ಪ, ನಿಶ್ವಿಕಾ ನಾಯ್ಡು, ರೋಷನಿ ಪ್ರಕಾಶ್‌ ಸೇರಿ ದೊಡ್ಡ ತಾರಾಬಳಗವೇ ಈ ಸಿನಿಮಾದಲ್ಲಿದೆ.

ಇದನ್ನೂ ಓದಿ: 10 ಗಂಟೆಯಲ್ಲಿ ‘ಡೆವಿಲ್’ ದಾಖಲೆ ಮುರಿದ ‘ಮಾರ್ಕ್​’ ಟ್ರೇಲರ್

ಅಜನೀಶ್‌ ಲೋಕನಾಥ್‌ ಸಂಗೀತ, ಶೇಖರ್‌ ಚಂದ್ರ ಅವರ ಸಿನಿಮಾಟೋಗ್ರಾಫಿ, ಗಣೇಶ್‌ ಬಾಬು ಅವರ ಸಂಕಲನ, ಈ ಚಿತ್ರಕ್ಕಿದೆ. ಇನ್ನು ‘ಮಾರ್ಕ್’ ಸಿನಿಮಾದ ಪ್ರಮುಖ ಆಕರ್ಷಣೆ ಎಂದರೆ ಅದು ಆಕ್ಷನ್ ಸೀಕ್ವೆನ್ಸ್‌ಗಳು. ಭಾರತೀಯ ಚಿತ್ರರಂಗದ ಖ್ಯಾತ ಸ್ಟಂಟ್‌ ಡೈರೆಕ್ಟರ್ಸ್‌ಗಳಾದ ಸ್ಟಂಟ್ ಸಿಲ್ವಾ, ಸುಪ್ರೀಮ್ ಸುಂದರ್ ಹಾಗೂ ಕನ್ನಡದ ರವಿವರ್ಮ ಅವರ ಸಾಹಸ ನಿರ್ದೇಶನವಿದೆ. ಇದೀಗ ಇದೇ ಸಿನಿಮಾ ಜನವರಿ 23ರಂದು ಜಿಯೋ ಹಾಟ್‌ಸ್ಟಾರ್‌ ಒಟಿಟಿಗೆ ಆಗಮಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.