ಭಾರತದ ಒಟಿಟಿಯಲ್ಲಿ ಪಾಕ್ ಸಿನಿಮಾ, ಧಾರಾವಾಹಿ, ಸಂಗೀತ ಬ್ಯಾನ್; ಕೇಂದ್ರದ ಆದೇಶ
ಒಟಿಟಿ, ಯೂಟ್ಯೂಬ್ ಮತ್ತು ಮ್ಯೂಸಿಕ್ ಆ್ಯಪ್ಗಳ ಮೂಲಕ ಪಾಕಿಸ್ತಾನದ ಮನರಂಜನಾ ಕಂಟೆಂಟ್ಗಳು ಭಾರತದಲ್ಲಿ ಪ್ರಸಾರ ಆಗುತ್ತಿದ್ದವು. ಅವುಗಳ ಪ್ರಸಾರವನ್ನು ಕೂಡಲೇ ನಿಲ್ಲಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಎರಡೂ ದೇಶಗಳ ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ.

ಭಾರತದ ಮತ್ತು ಪಾಕಿಸ್ತಾನದ (Pakistan) ನಡುವೆ ಯುದ್ಧದ ವಾತಾವರಣ ನಿರ್ಮಾಣ ಆಗಿದೆ. ಗಡಿಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ‘ಆಪರೇಷನ್ ಸಿಂದೂರ್’ (Operation Sindoor) ನಡೆಸಿದೆ. ಇದರಿಂದಾಗಿ ಎರಡೂ ದೇಶಗಳ ನಡುವೆ ಟೆನ್ಷನ್ ಹೆಚ್ಚಿದೆ. ಈಗ ಭಾರತದಲ್ಲಿ ಪಾಕಿಸ್ತಾನದ ಯಾವುದೇ ಮನರಂಜನಾ ಕಂಟೆಂಟ್ಗಳು ಪ್ರಸಾರ ಆಗಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಆದೇಶ ಹೊರಡಿಸಿದೆ. ಈ ಆದೇಶವನ್ನು ಪಾಲಿಸುವಂತೆ ಎಲ್ಲ ಒಟಿಟಿ (OTT) ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಮನರಂಜನೆಯ ವಿಚಾರದಲ್ಲಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಂಪರ್ಕ ಇತ್ತು. ಭಾರತದ ಅನೇಕ ಸಿನಿಮಾಗಳು ಪಾಕಿಸ್ತಾನದಲ್ಲಿ ಪ್ರದರ್ಶನ ಕಂಡಿವೆ. ಇಲ್ಲಿನ ಹಾಡುಗಳಿಗೆ ಅಲ್ಲಿ ಬೇಡಿಕೆ ಇದೆ. ಹಾಗೆಯೇ ಒಟಿಟಿ ಮೂಲಕ ಪಾಕಿಸ್ತಾನದ ಸಿನಿಮಾ, ವೆಬ್ ಸಿರೀಸ್, ಧಾರಾವಾಹಿ, ಸಾಂಗ್, ಪಾಡ್ಕಾಸ್ಟ್ ಮುಂತಾದ್ದನ್ನು ಭಾರತದ ಪ್ರೇಕ್ಷಕರು ವೀಕ್ಷಿಸುತ್ತಿದ್ದರು. ಅದಕ್ಕೆ ಈಗ ಕಡಿವಾಣ ಹಾಕಲಾಗಿದೆ.
‘ರಾಷ್ಟ್ರದ ಭದ್ರತೆಯ ಹಿತದೃಷ್ಟಿಯಿಂದ ಎಲ್ಲ ಒಟಿಟಿ ಪ್ಲಾಟ್‌ಫಾರ್ಮ್ ಮತ್ತು ಮಾಧ್ಯಮಗಳಿಗೆ ಈ ಮೂಲಕ ಸೂಚನೆ ನೀಡಲಾಗುತ್ತಿದೆ. ಪಾಕಿಸ್ತಾನದಿಂದ ನಿರ್ಮಾಣವಾದ ಎಲ್ಲ ವೆಬ್ ಸಿರೀಸ್, ಸಿನಿಮಾಗಳು, ಹಾಡುಗಳು, ಪಾಡ್ಕಾಸ್ಟ್ ಮತ್ತು ಇತರೆ ಕಂಟೆಂಟ್ಗಳ ಪ್ರಸಾರವನ್ನು ಕೂಡಲೇ ನಿಲ್ಲಿಸಬೇಕು. ಸಬ್ಸ್ಕ್ರಿಪ್ಷನ್ ಹಾಗೂ ಉಚಿತವಾಗಿ ಪ್ರಸಾರವಾಗುವ ಎಲ್ಲ ಪ್ಲಾಟ್ಫಾರ್ಮ್ಗಳಿಗೂ ಇದು ಅನ್ವಯ’ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಚನೆ ನೀಡಿದೆ.
ಜೀ2, ಯೂಟ್ಯೂಬ್, ಅಮೇಜಾನ್ ಪ್ರೈಂ ವಿಡಿಯೋ ಮುಂತಾದ ಪ್ಲಾಟ್ಫಾರ್ಮ್ಗಳಲ್ಲಿ ಪಾಕಿಸ್ತಾನದ ಸಿನಿಮಾ ಮತ್ತು ಧಾರಾವಾಹಿಗಳು ಲಭ್ಯವಾಗಿದ್ದವು. ಭಾರತದ ಪ್ರೇಕ್ಷಕರು ಇವುಗಳನ್ನು ವೀಕ್ಷಿಸುತ್ತಿದ್ದರು. ಯೂಟ್ಯೂಬ್ನಲ್ಲಿ ಪಾಕಿಸ್ತಾನದ ಸಂಗೀತಕ್ಕೆ ಭಾರತದಲ್ಲಿ ಬೇಡಿಕೆ ಇತ್ತು. ಆದರೆ ಈಗ ಯುದ್ಧದ ವಾತಾವರಣ ಇರುವುದರಿಂದ ಪಾಕ್ ಕಂಟೆಂಟ್ಗಳನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಭಾರತದ ಹಾಡುಗಳ ಪ್ರಸಾರ ನಿಲ್ಲಿಸಿದ ಪಾಕಿಸ್ತಾನ ಎಫ್ಎಂ ರೇಡಿಯೋ ಸ್ಟೇಷನ್ಸ್
ಇದೇ ರೀತಿ ಇನ್ನೂ ಅನೇಕ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪಾಕಿಸ್ತಾನದ ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳನ್ನು ಭಾರತದಲ್ಲಿ ರಿಸ್ಟ್ರಿಕ್ಟ್ ಮಾಡಲಾಗಿದೆ. ಪಾಕ್ ಸೆಲೆಬ್ರಿಟಿಗಳ ಅಕೌಂಟ್ ಕಾಣಿಸುತ್ತಿಲ್ಲ ಎಂದು ಈಗಾಗಲೇ ಅನೇಕರು ಹೇಳಿದ್ದಾರೆ. ಇನ್ನು, ಪಾಕಿಸ್ತಾನದ ಕಲಾವಿದರ ಜೊತೆ ಭಾರತದ ಚಿತ್ರರಂಗ ಯಾವುದೇ ನಂಟು ಇಟ್ಟುಕೊಳ್ಳದಿರಲಿ ತೀರ್ಮಾನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








