777 Charlie OTT: ಒಟಿಟಿಗೆ ಎಂಟ್ರಿ ಕೊಟ್ಟ ರಕ್ಷಿತ್ ಶೆಟ್ಟಿಯ ‘777 ಚಾರ್ಲಿ’; ಜುಲೈ 29ರಿಂದ ವೂಟ್ ಸೆಲೆಕ್ಟ್ನಲ್ಲಿ ಪ್ರಸಾರ
777 Charlie | Voot Select: ವೂಟ್ ಸೆಲೆಕ್ಟ್ನಲ್ಲಿ ‘777 ಚಾರ್ಲಿ’ ಸಿನಿಮಾ ಪ್ರಸಾರ ಆಗುತ್ತಿದೆ. ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಮನೆಯಲ್ಲೇ ಕುಳಿತು ಮತ್ತೆ ಮತ್ತೆ ನೋಡಬೇಕು ಎಂದು ಹಂಬಲಿಸುವವರಿಗೆ ಒಟಿಟಿ ಮೂಲಕ ಈ ಚಿತ್ರ ಲಭ್ಯವಾಗಿದೆ.
ಈ ವರ್ಷ ಗೆಲುವು ಪಡೆದ ಕೆಲವೇ ಕೆಲವು ಸಿನಿಮಾಗಳಲ್ಲಿ ‘777 ಚಾರ್ಲಿ’ (777 Charlie) ಕೂಡ ಒಂದು. ಚಂದನವನದ ಈ ಚಿತ್ರವನ್ನು ದೇಶಾದ್ಯಂತ ಜನರು ಮೆಚ್ಚಿಕೊಂಡಿದ್ದಾರೆ. ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆಯನ್ನು ಈ ಸಿನಿಮಾ ವಿವರಿಸಿದೆ. ಕಾಮಿಡಿ ಮತ್ತು ಎಮೋಷನಲ್ ಶೈಲಿಯಲ್ಲಿ ಮೂಡಿಬಂದ ‘777 ಚಾರ್ಲಿ’ ಚಿತ್ರಕ್ಕೆ ಥಿಯೇಟರ್ನಲ್ಲಿ ಭರ್ಜರಿ ಕಮಾಯಿ ಆಗಿದೆ. ಬಹುಕೋಟಿ ರೂಪಾಯಿ ಬಿಸ್ನೆಸ್ ಮಾಡಿದ ಬಳಿಕ ಈ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವೂಟ್ ಸೆಲೆಕ್ಟ್ (Voot Select) ಮೂಲಕ ಪ್ರೇಕ್ಷಕರು ಈ ಚಿತ್ರವನ್ನು ನೋಡಬಹುದು. ರಕ್ಷಿತ್ ಶೆಟ್ಟಿ (Rakshit Shetty) ವೃತ್ತಿಜೀವನದ ಡಿಫರೆಂಟ್ ಚಿತ್ರವಾಗಿ ‘777 ಚಾರ್ಲಿ’ ಹೊರಹೊಮ್ಮಿದೆ. ಕಿರಣ್ ರಾಜ್ ನಿರ್ದೇಶನದ ಈ ಚಿತ್ರಕ್ಕೆ ‘ಪರಂವಾ ಸ್ಟುಡಿಯೋಸ್’ ಬಂಡವಾಳ ಹೂಡಿದೆ.
ಜೂನ್ 10ರಂದು ‘777 ಚಾರ್ಲಿ’ ಸಿನಿಮಾ ಬಿಡುಗಡೆ ಆಗಿತ್ತು. ಅದಕ್ಕೂ ಮುನ್ನವೇ ದೇಶದ ಅನೇಕ ಕಡೆಗಳಲ್ಲಿ ಪೇಯ್ಡ್ ಪ್ರೀಮಿಯರ್ ಮಾಡಲಾಗಿತ್ತು. ದೆಹಲಿ, ಹೈದರಾಬಾದ್, ಮುಂಬೈ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಸಿನಿಮಾ ನೋಡಿದ ಪ್ರೇಕ್ಷಕರು ಎಮೋಷನಲ್ ಆಗಿದ್ದರು. ಈ ಕಾರಣದಿಂದ ಭರ್ಜರಿ ಓಪನಿಂಗ್ ಪಡೆದುಕೊಂಡಿತು. ಈಗ ಈ ಚಿತ್ರ 50ನೇ ದಿನದ ಹೊಸ್ತಿಲಿನಲ್ಲಿದೆ.
ಜುಲೈ 29ಕ್ಕೆ ‘777 ಚಾರ್ಲಿ’ ಸಿನಿಮಾ 49 ದಿನ ಪೂರೈಸಿದಂತಾಗುತ್ತಿದೆ. ಈ ಸಮಯದಲ್ಲಿ ಒಟಿಟಿಗೆ ಈ ಚಿತ್ರ ಎಂಟ್ರಿ ನೀಡಿದೆ. ವೂಟ್ ಸೆಲೆಕ್ಟ್ನಲ್ಲಿ ಸದ್ಯಕ್ಕೆ ಕನ್ನಡ ವರ್ಷನ್ ಮಾತ್ರ ಲಭ್ಯವಾಗಿದೆ. ಥಿಯೇಟರ್ನಲ್ಲಿ ಮಿಸ್ ಮಾಡಿಕೊಂಡವರು ಹಾಗೂ ಮನೆಯಲ್ಲೇ ಕುಳಿತು ಮತ್ತೆ ಮತ್ತೆ ನೋಡಬೇಕು ಎಂದು ಹಂಬಲಿಸುವವರಿಗೆ ಒಟಿಟಿ ಮೂಲಕ ‘777 ಚಾರ್ಲಿ’ ಲಭ್ಯವಾಗಿದೆ. ಚಿತ್ರದ ಗೆಲುವನ್ನು ಸಂಭ್ರಮಿಸಲು ಇಡೀ ತಂಡ ಥೈಯ್ಲೆಂಡ್ಗೆ ತೆರಳಲಿದೆ.
ಬಾಕ್ಸ್ ಆಫೀಸ್ ಮತ್ತು ಇತರೆ ಮೂಲಗಳಿಂದ ಸೇರಿ ‘777 ಚಾರ್ಲಿ’ ಸಿನಿಮಾ 150 ಕೋಟಿ ರೂಪಾಯಿಗಿಂತಲೂ ಅಧಿಕ ಬಿಸ್ನೆಸ್ ಮಾಡಿದೆ. ಆ ಮೂಲಕ ರಕ್ಷಿತ್ ಶೆಟ್ಟಿ ವೃತ್ತಿಜೀವನಕ್ಕೆ ಬಹುದೊಡ್ಡ ಬ್ರೇಕ್ ನೀಡಿದೆ. ಲಾಭದ ಹಣದಲ್ಲಿ ಶೇ.5ರಷ್ಟನ್ನು ಶ್ವಾನಗಳ ಎನ್ಜಿಒಗೆ ನೀಡುವ ಮೂಲಕ ಚಿತ್ರತಂಡ ಮಾದರಿ ಆಗಿದೆ. ಬೀದಿನಾಯಿಗಳ ಬಗ್ಗೆ ಕಾಳಜಿ ತೋರಿಸಿ ಎಂಬ ಸಂದೇಶ ಈ ಸಿನಿಮಾದಲ್ಲಿದೆ. ಎಲ್ಲ ವರ್ಗದ ಪ್ರೇಕ್ಷಕರು ‘777 ಚಾರ್ಲಿ’ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ.