Kantara: ‘ಕಾಂತಾರ’ ಚಿತ್ರದ ಒಟಿಟಿ ರಿಲೀಸ್ ದಿನಾಂಕ ಮುಂದೂಡಿಕೆ ಆಗಿದ್ದಕ್ಕೆ ಇಲ್ಲಿದೆ ಕಾರಣ
Kantara Movie OTT | Rishab Shetty: ಎಲ್ಲ ಭಾಷೆಯ ಪ್ರೇಕ್ಷಕರು ‘ಕಾಂತಾರ’ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಎಲ್ಲ ಕಡೆಗಳಿಂದ ಈ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ. ಪರಭಾಷೆಯ ಸೆಲೆಬ್ರಿಟಿಗಳು ಕೂಡ ಫಿದಾ ಆಗಿದ್ದಾರೆ.
ಕನ್ನಡದ ‘ಕಾಂತಾರ’ (Kantara Movie) ಸಿನಿಮಾ ದೇಶಾದ್ಯಂತ ಉತ್ತಮ ಪ್ರದರ್ಶನ ಕಂಡಿದೆ. ಇನ್ನೂ ಅನೇಕ ಕಡೆಗಳಲ್ಲಿ ಹೌಸ್ಫುಲ್ ಶೋ ನಡೆಯುತ್ತಿದೆ. ಈ ಸಿನಿಮಾವನ್ನು ಒಟಿಟಿಯಲ್ಲಿ (OTT) ನೋಡಬೇಕು ಎಂದು ಪ್ರೇಕ್ಷಕರು ಕಾದಿದ್ದಾರೆ. ಮೊದಲ ಪ್ಲ್ಯಾನ್ ಪ್ರಕಾರವೇ ನಡೆದಿದ್ದರೆ ನವೆಂಬರ್ 18ರಂದು ಈ ಚಿತ್ರ ಒಟಿಟಿಗೆ ಕಾಲಿಡಬೇಕಿತ್ತು. ಆದರೆ ಈಗ ಒಟಿಟಿ ರಿಲೀಸ್ ದಿನಾಂಕ (Kantara OTT release Date) ಮುಂದೂಡಲ್ಪಟ್ಟಿದೆ ಎಂಬ ಸುದ್ದಿ ಹರಿದಾಡುತ್ತಿದೆ. ನವೆಂಬರ್ ಕೊನೇ ವಾರದಲ್ಲಿ ಈ ಚಿತ್ರ ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಬಹುದು ಎನ್ನಲಾಗುತ್ತಿದೆ. ಅದಕ್ಕೆ ಕಾರಣ ಕೂಡ ಇದೆ. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವುದರಿಂದ ಈಗಲೇ ಒಟಿಟಿಯಲ್ಲಿ ರಿಲೀಸ್ ಮಾಡುವುದು ಬೇಡ ಎಂದು ನಿರ್ಮಾಪಕರು ನಿರ್ಧಾರಿಸಿದ್ದಾರೆ ಎಂಬ ಮಾತು ಕೇಳಿಬಂದಿದೆ.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಬತ್ತಳಿಕೆಯಿಂದ ‘ಕಾಂತಾರ’ ಸಿನಿಮಾ ಮೂಡಿಬಂದಿದೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಇದಕ್ಕೆ ಬಂಡವಾಳ ಹೂಡಿದೆ. ತುಳುನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ತೋರಿಸುವ ಈ ಚಿತ್ರವನ್ನು ಇಡೀ ದೇಶದ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಎಲ್ಲ ಕಡೆಗಳಿಂದ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಪರಭಾಷೆ ಮಂದಿ ಕೂಡ ಫಿದಾ ಆಗಿದ್ದಾರೆ.
ಸೆಪ್ಟೆಂಬರ್ 30ರಂದು ಈ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಯಿತು. ಪರಭಾಷೆ ಪ್ರೇಕ್ಷಕರಿಂದಲೂ ಡಿಮ್ಯಾಂಡ್ ಬಂದಿದ್ದರಿಂದ ನಂತರ ಹಿಂದಿ, ತಮಿಳು, ಮಲಯಾಳಂ ಮತ್ತು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಯಿತು. ಹಿಂದಿ ಪ್ರೇಕ್ಷಕರಂತೂ ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ. ಇಂದಿಗೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಹಿಂದಿಯಲ್ಲಿ ಈವರೆಗೂ 60 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿ ಮುನ್ನುಗ್ಗುತ್ತಿದೆ.
ಎಲ್ಲ ಭಾಷೆಗಳಿಂದ ‘ಕಾಂತಾರ’ ಸಿನಿಮಾದ ಕಲೆಕ್ಷನ್ 300 ಕೋಟಿ ರೂಪಾಯಿ ದಾಡಿದೆ. ಆ ಮೂಲಕ ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾಗಳ ಸಾಲಿನಲ್ಲಿ ‘ಕಾಂತಾರ’ ಕೂಡ ಸ್ಥಾನ ಪಡೆದುಕೊಂಡಿದೆ. ಸದ್ಯಕ್ಕೆ ಚಿತ್ರಮಂದಿರದಲ್ಲಿ ಉತ್ತಮ ಕಲೆಕ್ಷನ್ ಆಗುತ್ತಿರುವುದರಿಂದ ಒಂದಷ್ಟು ದಿನಗಳ ಕಾಲ ಒಟಿಟಿ ರಿಲೀಸ್ ಮುಂದೂಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬಿಡುಗಡೆಗೂ ಮುನ್ನವೇ ‘ಅಮೇಜಾನ್ ಪ್ರೈಂ ವಿಡಿಯೋ’ ಜೊತೆ ‘ಹೊಂಬಾಳೆ ಫಿಲ್ಮ್ಸ್’ ಸಂಸ್ಥೆ ಒಟಿಟಿ ವ್ಯವಹಾರ ಮಾಡಿಕೊಂಡಿತ್ತು. ಇನ್ನೇನು ಕೆಲವೇ ದಿನಗಳಲ್ಲಿ ಒಟಿಟಿ ರಿಲೀಸ್ ದಿನಾಂಕ ಬಹಿರಂಗ ಆಗಲಿದೆ. ವಿವೇಕ್ ಅಗ್ನಿಹೋತ್ರಿ, ಪ್ರಭಾಸ್, ಕಂಗನಾ ರಣಾವತ್, ರಜನಿಕಾಂತ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಈ ಚಿತ್ರವನ್ನು ಕೊಂಡಾಡಿದ್ದಾರೆ. ರಿಷಬ್ ಶೆಟ್ಟಿ ಪ್ರಯತ್ನಕ್ಕೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.